Advertisement

ಸರ್ಕಾರಿ ನೌಕರರ ಸೇವೆಗೆ ದೆಹಲಿ, ತಮಿಳುನಾಡು ಮಾದರಿ ಅನುಸರಿಸಿ : ಸಿ.ಎಸ್‌.ಷಡಕ್ಷರಿ

09:42 PM Jul 04, 2020 | Sriram |

ಬೆಂಗಳೂರು: ದೇಶದೆಲ್ಲೆಡೆ ಕೋವಿಡ್‌-19 ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕೂಡ ನೆರೆಯ ತಮಿಳುನಾಡು, ದೆಹಲಿ ರಾಜ್ಯಗಳ ಮಾದರಿಯಂತೆ ಸರ್ಕಾರಿ ನೌಕರರ ಸೇವೆಯನ್ನು ಬಳಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಸರ್ಕಾರದ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡಿ ಸರ್ಕಾರವನ್ನು ಒತ್ತಾಯಿಸಿರುವ ಅವರು, ಕೋವಿಡ್‌ ಆಡಳಿತ ಯಂತ್ರದ ಮೇಲೆ ಬೀರಬಹುದಾದ ದುಷ್ಪರಿಣಾಮವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಹೊಸ ಮಾರ್ಗಸೂಚಿಯನ್ನು ಹೊರಡಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವೃಂದದ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ, ನೌಕರರು ಶೇ.50ರಂತೆ ಸರಣಿ ಆಧಾರದ ಮೇಲೆ ದಿನಬಿಟ್ಟು ದಿನ ಕರ್ತವ್ಯ ನಿರ್ವಹಿಸಲು ಆದೇಶಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ನಿರತವಾದ ಹಲವು ನೌಕರರಿಗೆ ಸೋಂಕು ತಗುಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದ ಪ್ರಕರಣಗಳು ಹಲವಾರು ಇವೆ. ಸೀಲ್‌ಡೌನ್‌ ಪ್ರದೇಶದಲ್ಲಿ ಸಿಲುಕಿದ ನೌಕರರು ಕಚೇರಿಗಳಿಗೆ ಹಾಜರಾಗಲು ಕಷ್ಟಸಾಧ್ಯ ಪರಿಸ್ಥಿತಿ ಇದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆಯೂ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಸೇವಾ ಅವಧಿಯಲ್ಲಿ ಸೋಂಕಿಗೆ ತುತ್ತಾಗುವ ಸರ್ಕಾರಿ ನೌಕರರಿಗೆ ಸರ್ಕಾರವೇ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಿ, ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿರುವ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ಸೇವೆಯನ್ನು ವಿಸ್ತರಿಸಿ ಹೊರಡಿಸಿರುವ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

55ವರ್ಷ ಮೀರಿರುವ ಅಧಿಕಾರಿ ಮತ್ತು ನೌಕರರು ಬಹುಬೇಗನೆ ಸೋಂಕಿಗೆ ಸಿಲುಕಿ ಮಾರಣಾಂತಿಕ ಕಾಯಿಲೆಯು ಸಮುದಾಯಕ್ಕೆ ಹರಡುವ ಅಪಾಯವಿದೆ. ಆದ್ದರಿಂದ ಆರೋಗ್ಯ ಇಲಾಖೆಯ ತರಬೇತಿ ಪಡೆದಿರುವ ಯುವ ವೈದ್ಯಕೀಯ, ನಿರುದ್ಯೋಗಿ ವೈದ್ಯಕೀಯ, ಅರೆ ವೈದ್ಯಕೀಯ ಕ್ಲಿನಿಕಲ್‌ ಮತ್ತು ನಾನ್‌ಕ್ಲಿನಿಕಲ್‌ ಅಧಿಕಾರಿ ಸಿಬ್ಬಂಧಿಗಳನ್ನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಮಿತವ್ಯಯ ಉಂಟಾಗಲಿದೆ ಅಲ್ಲದೆ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ, ಗುಣಮಟ್ಟದ ಸೇವೆ ನಿರೀಕ್ಷಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಕೋಶಾಧ್ಯಕ್ಷ ಶ್ರೀನಿವಾಸ್‌, ಗೌರವಾಧ್ಯಕ್ಷ ಶಿವರುದ್ರಯ್ಯ, ವಿಭಾಗೀಯ ಉಪಾಧ್ಯಕ್ಷ ಆರ್‌.ಮೋಹನ್‌ಕುಮಾರ್‌, ಜಗದೀಶ್‌, ಹರಿರಾಮಕೃಷ್ಣ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next