Advertisement

ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -4

06:00 AM Dec 23, 2018 | Team Udayavani |

ಮುಂದುವರಿದುದು ಒತ್ತಡ ನಿರ್ವಹಣೆ ಒತ್ತಡ ಮತ್ತು ಪ್ರಭೇದ 2 ಮಧುಮೇಹ
ಮಧುಮೇಹದ ನಿಭಾವಣೆ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಕೆಲವು ಜನರಲ್ಲಿ ಒತ್ತಡವು ಹಲವಾರು ಜಟಿಲತೆಗಳನ್ನುಂಟುಮಾಡಿ ನಿರಂತರ ಸಮಸ್ಯೆಯನ್ನುಂಟುಮಾಡುತ್ತದೆ. ಒತ್ತಡವಿಲ್ಲದ ಜೀವನ ವಿರಳ. ಆದರೆ ಒತ್ತಡದ ನಿರ್ವಹಣೆ ಆರೋಗ್ಯದ ಸ್ಥಿತಿಯನ್ನು ನಿರ್ಧರಿಸುವ ಪ್ರಮುಖ ಆಂಶ.  ಇದು ಮಧುಮೇಹದೊಂದಿಗೆ ಜೀವಿಸುವವರಿಗೆ ಹೆಚ್ಚು ಅನ್ವಯ ಕೂಡ.

Advertisement

ಒತ್ತಡ ನಿರ್ವಹಣೆಯನ್ನು ಹೇಗೆ 
ಮಾಡಿಕೊಳ್ಳಬಹುದು?

ಒತ್ತಡ ನಿರ್ವಹಣೆಯನ್ನು ನುರಿತ ತಜ್ಞರಾದ ಮನಶ್ಯಾಸ್ತ್ರಜ್ಞರ ಮೂಲಕ ಮತ್ತು ಸ್ವಯಂ ನಿರ್ವಹಣೆಯಿಂದ ನಿಭಾಯಿಸಬಹುದು. ನುರಿತ ತಜ್ಞರಿಂದ ವಿಶ್ರಾಂತ ತಂತ್ರ (ಉದಾ ಜೇಕಬ್‌ಸನ್ಸ್‌ ರಿಲಾಕ್ಸೇಶನ್‌ ಟೆಕ್ನಿಕ್‌, ಆಟೋಜೆನಿಕ್‌ ರಿಲಾಕ್ಸೇಶನ್‌ ಟೆಕ್ನಿಕ್‌, ಅನುಲೋಮ, ವಿಲೋಮ, ಪ್ರಾಣಾಯಾಮ) ತರಬೇತಿ ಪಡೆದು ದೈನಂದಿನ ಅಭ್ಯಾಸ ಮುಂದುವರಿಸುವುದು ಒತ್ತಡ ನಿರ್ವಹಣೆಗೆ ಅತ್ಯಂತ ಸಹಕಾರಿಯಾಗಿರುತ್ತದೆ. ಹಾಗೆಯೇ ಒತ್ತಡವನ್ನು ಸ್ವಯಂ ನಿರ್ವಹಣೆಯಿಂದ ಕೂಡ ನಿಭಾಯಿಸಬಹುದು.

ಒತ್ತಡವನ್ನು ಸ್ವಯಂ-
ನಿರ್ವಹಣೆಯಿಂದ ಹೇಗೆ 
ನಿಭಾಯಿಸಬಹುದು?

ಒತ್ತಡ ನಿರ್ವಹಣೆಯ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಮಧುಮೇಹದೊಂದಿಗೆ ಜೀವಿಸುವವರ ಒತ್ತಡ ನಿರ್ವಹಣೆಯ ಸಾಮರ್ಥ್ಯ ಸಾಮಾನ್ಯವಾಗಿ ಅವರು ಮಧುಮೇಹದ ಸ್ಥಿತಿಯನ್ನು ಒಪ್ಪಿಕೊಂಡ ರೀತಿಯೊಂದಿಗೆ ನಿರ್ಧಾರವಾಗಿರುತ್ತದೆ. ಮಧುಮೇಹದ ಸ್ಥಿತಿಯನ್ನು ಒಪ್ಪಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸುವವರಿಗೆ ಜೀವನಶೈಲಿಯ ಬದಲಾವಣೆ ಮತ್ತು ಒತ್ತಡ ನಿರ್ವಹಣೆ ಅತ್ಯಂತ ಸುಲಲಿತ. ಮಧುಮೇಹದ ಸ್ಥಿತಿಯನ್ನು ಪೆಡಂಭೂತದಂತೆ ಭಾವಿಸಿ ಅದರ ಬಗ್ಗೆ ನಕಾರಾತ್ಮಕ ಭಾವನೆಯನ್ನು ಹೊಂದಿದ್ದರೆ ಜೀವನ ಶೈಲಿಯಲ್ಲಿನ ಮಾರ್ಪಾಡು ಮತ್ತು ಒತ್ತಡ ನಿರ್ವಹಣೆ ಅತ್ಯಂತ ದುಸ್ತರವಾಗುವ ಸಾಧ್ಯತೆ ಅಧಿಕ.  ಸಮಯ ನಿರ್ವಹಣೆ, ಚಟುವಟಿಕೆಗಳ ವೇಳಾಪಟ್ಟಿ ಮಾಡಿ  ಆದ್ಯತೆಯ ಮೇರೆಗೆ ಚಟುವಟಿಕೆಗಳನ್ನು ಮಾಡುವುದು, ನಿಯಮಿತವಾಗಿ ಗುರಿಯನ್ನು ಬದಲಾವಣೆ ಮಾಡಿಕೊಳ್ಳುವುದು, ವ್ಯಸನಗಳಿಂದ ದೂರ ಇರುವುದು ಇತ್ಯಾದಿಗಳನ್ನು ಸಾಮಾಜಿಕ ಕೌಶಲ, ಬದಲಾವಣೆ ಮಾಡಿಕೊಳ್ಳಲು ಮತ್ತು ವಿಶ್ರಾಂತಿ ಪಡೆದುಕೊಳ್ಳಲು ರೂಢಿಸಿಕೊಳ್ಳುವುದರಿಂದ  ಒತ್ತಡ ನಿರ್ವಹಣೆಗೆ ಅನುಕೂಲವಾಗುವುದು.

ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದು: ಸಾಮಾಜಿಕ ಕೌಶಲವಾದ ಸಂವಹನದಿಂದ ನಿಮ್ಮ ಆತ್ಮೀಯರಿಗೆ, ಕುಟುಂಬ ಸದಸ್ಯರಿಗೆ ಅಥವಾ ಪ್ರೀತಿಪಾತ್ರರಿಗೆ ಆವಶ್ಯಕತೆಗಳನ್ನು ತಿಳಿಸಬಹುದು. ಇದು ತೊಂದರೆಯನ್ನು ಸಕಾರಾತ್ಮಕವಾಗಿ ಬದಲಾವಣೆ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ. ಅವರ ಸಹಾಯಹಸ್ತದಿಂದ ಮಾನಸಿಕ ಗೊಂದಲ ಮತ್ತು ಒತ್ತಡ ಕಡಿಮೆಯಾಗುವುದು. ಹಾಗೆಯೇ ಉತ್ತಮ ದಿನಚರಿ ಮತ್ತು ಒತ್ತಡನಿರ್ವಹಣೆಯ ಸಾಧನೆಗಳನ್ನು ಇತರೊಂದಿಗೆ ಸಮಾನ ಮನಸ್ಕರ ಗುಂಪಿನಲ್ಲಿ ಅಥವಾ ಸಹಾಯ ಗುಂಪುಗಳಲ್ಲಿ ಹಂಚಿಕೊಳ್ಳುವುದರಿಂದ ಇತರರಿಗೆ ಒತ್ತಡ ನಿರ್ವಹಣೆ ಮತ್ತು ಮಧುಮೇಹ ನಿರ್ವಹಣೆಗೆ ಉತ್ತಮ ಉತ್ತೇಜನವನ್ನು ನೀಡಬಹುದು. ಸಹಾಯ ಗುಂಪುಗಳು ನಿಮಗೆ ಸಹಾಯ ನೀಡಬಹುದು. ಸಹಾಯ ಗುಂಪಿನಲ್ಲಿ ಗೆಳೆಯರ ಬಳಗ ಮಧುಮೇಹ ಸಂಬಂಧಿತ ಒತ್ತಡಗಳ ಭಾರವನ್ನು ಕಡಿಮೆಗೊಳಿಸಬಲ್ಲದು. 

ಬದಲಾವಣೆ ಮಾಡಿಕೊಳ್ಳುವುದು: ಸಕಾರಾತ್ಮವಾಗಿ ಮಧುಮೇಹದೊಂದಿಗೆ ಜೀವಿಸಲು ಜೀವನದಲ್ಲಿ ಸ್ವಲ್ಪ ಬದಲಾವಣೆ ಅತ್ಯವಶ್ಯ. ಕಾಲಘಟ್ಟದಲ್ಲಿ ವಯಸ್ಸಾದಂತೆ ಹಲವಾರು ಪ್ರೀತಿಯ ಹವ್ಯಾಸಗಳಿಗೆ ಸಮಯವಿಲ್ಲದಂತಾಗುತ್ತದೆ. ಅವುಗಳನ್ನು ಪುನಃ ಪ್ರಾರಂಭಿಸಿದಾಗ ಇಷ್ಟವಾದ ಹವ್ಯಾಸ ಮನಸ್ಸಿಗೆ ಮುದ ನೀಡುವುದಲ್ಲದೆ ಫ‌ಲದಾಯಕವಾಗಿ ಸಮಯ ಕಳೆದು ಧನಾತ್ಮಕವಾದ ಚಿಂತನೆ ಮತ್ತು ಅಭ್ಯಾಸಕ್ಕೆ ಪೂರಕವಾಗಿರುತ್ತದೆ. ಈ ಹವ್ಯಾಸ ಸಂಗೀತ, ಪುಸ್ತಕ ಓದುವುದು, ಮನೆಯಲ್ಲೇ ತೋಟಗಾರಿಕೆ ಇತ್ಯಾದಿ. ಹೊಸ ಹವ್ಯಾಸಗಳನ್ನು ಕೂಡ ಬೆಳೆಸಿಕೊಳ್ಳಬಹುದು. ವ್ಯಾಯಾಮ ಕ್ರಮಗಳನ್ನು ಹಾಕಿಕೊಳ್ಳುವುದು, ಸತ್ಸಂಗದಲ್ಲಿ ಭಾಗವಹಿಸುವುದು ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಧನಾತ್ಮಕತೆಯನ್ನು ಪ್ರಚೋದಿಸಿ ಒತ್ತಡ ನಿರ್ವಹಣೆಗೆ ಸಹಕಾರಿ. 

Advertisement

ವಿಶ್ರಾಂತಿ ಪಡೆದುಕೊಳ್ಳುವುದು: ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಉತ್ತಮ ಸ್ಥಿತಿಗೆ ವಿಶ್ರಾಂತಿ ಅಗತ್ಯ. ಇದು ನಿದ್ರೆ ಮತ್ತು ಇತರ ರೂಪಗಳನ್ನೊಳಗೊಂಡಿರುತ್ತದೆ. ಉಸಿರಾಟದ ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ಶವಾಸನ  ಇತ್ಯಾದಿಗಳು ವಿಶ್ರಾಂತಿಗೆ ವಿವಿಧ ಮಾರ್ಗಗಳು. ಪ್ರಾಣಾಯಾಮ ಒತ್ತಡ ನಿರ್ವಹಣೆಯೊಂದಿಗೆ ಉತ್ತಮ ದೈಹಿಕ ಆರೋಗ್ಯಕ್ಕೂ ಫ‌ಲಕಾರಿ. ಪ್ರತಿನಿತ್ಯ 8 ಗಂಟೆಗಳ ಉತ್ತಮ ನಿದ್ರೆ ಉತ್ತಮ ಆರೋಗ್ಯವನ್ನು ಕಾಪಾಡಲು ಅಗತ್ಯ. ಹಾಗೆ ಅತಿಯಾದ ನಿದ್ರೆಯೂ ಸಲಹಾರ್ಹವಲ್ಲ. ವಿಶ್ರಾಂತಿ ಕೆಟ್ಟವಿಚಾರಗಳನ್ನು ತೆಗೆದುಹಾಕಲು, ಸಿಟ್ಟಿನ ನಿಯಂತ್ರಣ, ಆಯಾಸವನ್ನು ಕಡಿಮೆಗೊಳಿಸಲು ಅವಶ್ಯ. ಆರಾಮವಾಗಿರಲು ಯಾವುದೇ ವಿಧಾನವಿರಲಿ ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು.

ಮಧುಮೇಹದ ಮೇಲೆ 
ಮದ್ಯಪಾನ ಮತ್ತು ಧೂಮಪಾನದ ಪ್ರಭಾವ ಏನು?

ಮದ್ಯಪಾನ, ಧೂಮಪಾನ ಇತ್ಯಾದಿ ವ್ಯಸನಗಳು ಆರೋಗ್ಯಕ್ಕೆ ಮಾರಕ. ಇವುಗಳಿಂದ ಮುಕ್ತರಾಗುವುದು ಉತ್ತಮ. ಧೂಮಪಾನದಿಂದಾಗಿ ಮಧುಮೇಹದಿಂದ ಬರಬಹುದಾದ ತೊಂದರೆಗಳಾದ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಉಸಿರಾಟದ ತೊಂದರೆ ಇತ್ಯಾದಿ ಬರುವ ಸಾಧ್ಯತೆಗಳಿದ್ದು ಮಧುಮೇಹದೊಂದಿಗೆ ಜೀವಿಸುವವರು ಧೂಮಪಾನ ಮಾಡುವುದರಿಂದ ಇವುಗಳು ಬರುವ ಅಪಾಯ ಇನ್ನೂ ಅಧಿಕವಾಗುತ್ತವೆ. ಮದ್ಯಪಾನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮಧುಮೇಹದೊಂದಿಗೆ ಜೀವಿಸುವವರಿಗೆ ಮಾರಕವಾಗುತ್ತದೆ. ಮದ್ಯಪಾನ ಮೇದೋಜೀರಕ ಗ್ರಂಥಿ ಮತ್ತು ಯಕೃತ್ತಿನ ಮೇಲೆ ಪ್ರಭಾವ ಬೀರಿ ಇನ್ಸುಲಿನ್‌ ಉತ್ಪಾದನೆಯ ಮೇಲೆ ಪರಿಣಾಮ ಬೀರಿ ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರುಪೇರು ಮಾಡುತ್ತದೆ. ಹಾಗೆಯೆ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ, ನರದೌರ್ಬಲ್ಯ ಮಧುಮೇಹದ ಪ್ರಮುಖ ಸಂಭಾವ್ಯ ತೊಂದರೆ ಕೂಡ. ದಿನನಿತ್ಯ ಮದ್ಯಪಾನ ಮಾಡುವವರಲ್ಲಿ ಮಧುಮೇಹಕ್ಕೆ ಅಗತ್ಯವಾದ ಆಹಾರದ ನಿಯಂತ್ರಣ ಕಷ್ಟ ಸಾಧ್ಯ. ನಿದ್ರಾವೃತ್ತಿಯಲ್ಲಿ ಬದಲಾವಣೆ ಮತ್ತು ದಿನಚರಿಯಲ್ಲಿ ಬದಲಾವಣೆಯಾಗಿ ಮಧುಮೇಹದ ನಿಯಂತ್ರಣಕ್ಕೆ ಪ್ರಮುಖವಾದ ಜೀವನಶೈಲಿಯ ಮಾರ್ಪಾಡು ದುಸ್ತರವಾಗುತ್ತದೆ. ಮದ್ಯಪಾನ ಮತ್ತು ಔಷಧಗಳೊಂದಿಗಿನ ಪರಸ್ಪರ ಕ್ರಿಯೆಗಳಿಂದ ಮಧುಮೇಹಕ್ಕೆ ತೆಗೆದುಕೊಳ್ಳುವ ಔಷಧಗಳ ಫ‌ಲಪ್ರದತೆಯನ್ನು ಕಡಿಮೆಗೊಳಿಸುತ್ತದೆ. ಅತಿಯಾದ ಮದ‌Âಪಾನ ಕಿಟೋಅಸಿಡೋಸಿಸ್‌ ಎಂಬ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ. ಈ ಎಲ್ಲ ಕಾರಣಗಳಿಂದ ಮಧುಮೇಹ ದೊಂದಿಗೆ ಜೀವಿಸುವವರು ಮದ್ಯಪಾನ ಅಥವಾ ಧೂಮಪಾನ ವ್ಯಸನಿಗಳಾಗಿದ್ದರೆ ಶೀಘ್ರದಲ್ಲಿ ವ್ಯಸನಮುಕ್ತರಾಗುವುದು ಉತ್ತಮ. ಮದ್ಯಪಾನ ಮತ್ತು ಧೂಮಪಾನ ಒತ್ತಡ ನಿರ್ವಹಣೆಗೆ ಉತ್ತಮ ಮಾರ್ಗೋಪಾಯವೆಂಬುದು ಮಿಥ್ಯ, ಮದ್ಯಪಾನ ಮತ್ತು ಧೂಮಪಾನದಿಂದ ಯಾವುದೇ ಲಾಭವಿಲ್ಲ. ಇದು ಆರೋಗ್ಯಕ್ಕೆ ಹಾನಿಕಾರಕ.

ಮಧುಮೇಹದೊಂದಿಗೆ ಜೀವಿಸುವವರಿಗೆ ಒತ್ತಡ 
ಯಾಕೆ ಅಪಾಯಕಾರಿ?

ಅತಿಯಾದ ಒತ್ತಡದಿಂದ ರಕ್ತದಲ್ಲಿನ ಗುÉಕೋಸ್‌ ಮಟ್ಟ ತ್ವರಿತವಾಗಿ ಹೆಚ್ಚಾಗುತ್ತದೆ. ಒತ್ತಡ ಉಗ್ರ ನಕಾರಾತ್ಮಕ ಭಾವನೆಗಳನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಮಧುಮೇಹಿಗಳಿಗೆ ಅತಿ ಅವಶ್ಯವಾದ ದಿನಚರಿಯಲ್ಲಿ ಏರು ಪೇರಾಗುವ ಸಾಧ್ಯತೆಗಳಿದ್ದು ಔಷಧದ ಬದ್ಧತೆ, ನಿಯಮಿತ ವ್ಯಾಯಾಮ ಇತ್ಯಾದಿಗಳಲ್ಲಿ ಅನಿಯಮಿತತೆ ಉಂಟಾಗುತ್ತದೆ. ಸೂಕ್ತ ವಿಚಾರಶಕ್ತಿ ಮತ್ತು ನಿರ್ಧಾರ ಕೈಗೊಳ್ಳುವುದಕ್ಕೆ ವ್ಯತ್ಯಯವನ್ನುಂಟುಮಾಡುತ್ತದೆ. ಆಹಾರ ಕ್ರಮದಲ್ಲಿ ವ್ಯತ್ಯಯ ಉಂಟಾಗಿ ಸಮತೋಲನವಿಲ್ಲದ ಅಗತ್ಯಕ್ಕಿಂತ ಹೆಚ್ಚು ಅಥವಾ ಅಗತ್ಯಕ್ಕಿಂತ ಕಡಿಮೆ ಆಹಾರ ಸೇವಿಸುವಂತೆ ಮಾಡುವುದು. ಅತಿಯಾದ ಮಾನಸಿಕ ಒತ್ತಡದಿಂದ ತಲೆನೋವು, ಮೈ ಕೈ ನೋವು, ನಿದ್ರಾಹೀನತೆ, ಅಜೀರ್ಣ, ಪದೇ ಪದೆ ಮಲವಿಸರ್ಜನೆಯಾಗುವ ಭಾವನೆ, ಹಸಿವೆಯಲ್ಲಿ ವ್ಯತ್ಯಾಸ, ಖನ್ನತೆ, ಹೆಚ್ಚಿದ ಹೃದಯ ಬಡಿತ, ಎದೆ ಉರಿತ ಮತ್ತು ವಿಪರೀತ ಬೆವರು ಇತ್ಯಾದಿ ಕೆಲವೊಂದು ಲಕ್ಷಣಗಳು ಕಂಡುಬರಬಹುದು. ಇದು ದೀರ್ಘ‌ಕಾಲಿಕವಾಗಿ ಮುಂದುವರಿದರೆ ದೈಹಿಕ ಆರೋಗ್ಯ ಹದಗೆಡುತ್ತದೆ. ಉದಾ: ತೂಕ ಕಡಿಮೆ ಆಗುವುದು, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಇತ್ಯಾದಿಗಳು. ದೈಹಿಕ ಆರೋಗ್ಯದಲ್ಲಾಗುವ ಈ ಏರುಪೇರು ಮಧುಮೇಹದಿಂದ ಜೀವಿಸುವವರಿಗೆ ಕಾಲಕ್ರಮೇಣದಲ್ಲಿ ಮಧುಮೇಹದ ನಿಭಾವಣೆಗೆ ಅಡೆತಡೆಗಳನ್ನು ತಂದೊಡ್ಡಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ಮಧುಮೇಹದಿಂದ ಬರುವ ತೊಂದರೆಗಳು ಅಧಿಕವಾಗುವ ಸಾಧ್ಯತೆಗಳಿರುತ್ತವೆ.

ಚಿತ್ರ: ರವಿ ಆಚಾರ್ಯ, 
ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next