Advertisement
ಚೆನ್ನೈಯ ಹೊಟೇಲ್ “ಲಿ ರಾಯಲ್ ಮೆರಿಡಿಯನ್’ ಸಭಾ ಭವನದಲ್ಲಿ ಗುರುವಾರ ಜರಗಿದ ಸಮಾರಂಭದಲ್ಲಿ ಪ್ರತಿಷ್ಠಿತ ದಕ್ಷಿಣ ವಲಯ “ಉನ್ನತ ಬಹು ಉತ್ಪನ್ನ ಸಮೂಹ ರಫ್ತುದಾರ’ (ಬೆಳ್ಳಿ) ವಿಭಾಗದ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ತ.ನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಂದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸ್ವೀಕರಿಸಿದರು. ತಮಿಳುನಾಡಿನ ಯುವ ಕ್ಷೇಮಾಭಿವೃದ್ಧಿ ಹಾಗೂ ಕ್ರೀಡಾ ಸಚಿವ ಬಾಲಕೃಷ್ಣ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಪ್ರತಿಷ್ಠಿತ ರಫ್ತು ಪ್ರಶಸ್ತಿಯನ್ನು ಕ್ಯಾಂಪ್ಕೋ ನಾಲ್ಕನೇ ಬಾರಿ ಪಡೆಯು ತ್ತಿದ್ದು, ಕಾರ್ಖಾನೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ “ಸೌಲಭ್ಯ ಸೌಧ’ದ ಉದ್ಘಾಟನೆಯ ಸಂದರ್ಭದಲ್ಲಿ ಇದು ದೊರಕುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಜ. 21ರಂದು ಪುತ್ತೂರಿನ ಕೆಮ್ಮಿಂಜೆ ಯಲ್ಲಿರುವ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ನೂತನ ಸೌಲಭ್ಯ ಸೌಧವನ್ನು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್ ಪ್ರಭು ಹಾಗೂ ಕೇಂದ್ರ ಅಂಕಿ ಅಂಶ ಮತ್ತು ಯೋಜನಾನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ರಫ್ತು ಪ್ರಶಸ್ತಿಯನ್ನು ಪಡೆದಿರುವುದು, ಆ ಮೂಲಕ ಸ್ವದೇಶಿ ಕಾರ್ಖಾನೆಯೆಂದು ಗುರುತಿಸಲ್ಪಟ್ಟಿರುವುದು ಕ್ಯಾಂಪ್ಕೋ ಅಭಿಮಾನವನ್ನು ಹೆಚ್ಚಿಸಿದೆ ಎಂದು ಕ್ಯಾಂಪ್ಕೋ ಪ್ರಕಟನೆ ತಿಳಿಸಿದೆ.