ಒಂದು ಊರಿನಲ್ಲಿ ಗೋಪಿ ಎಂಬ ಬಾಲಕನಿದ್ದನು. ಗುಡ್ಡಗಾಡಿನಲ್ಲಿ ಕುರಿಗಳನ್ನು ಮೇಯಿಸುವುದು ಅವನ ಕೆಲಸವಾಗಿತ್ತು. ಅವನನ್ನು ದುಷ್ಟ ಅಜ್ಜಿ ಮತ್ತವಳ ಮಗ ಕೆಲಸಕ್ಕಿರಿಸಿಕೊಂಡಿದ್ದರು. ಅವನಿಗೆ ಸರಿಯಾಗಿ ಊಟ, ಬಟ್ಟೆ ಸಿಗುತ್ತಿರಲಿಲ್ಲ. ಹೊಡೆದು ಬಡಿದು ಹಿಂಸಿಸುತ್ತಿದ್ದರು. ಒಂದು ದಿನ, ಗೋಪಿಯು ಕುರಿಮಂದೆಯೊಡನೆ ಕಾಡಿನಲ್ಲಿ ಸಾಗುತ್ತಿದ್ದನು. ಜಿಂಕೆಯ ಮರಿಯೊಂದರ ಕೊಂಬು ಆಲದ ಮರದ ಬಿಳಲುಗಳ ನಡುವೆ ಸಿಕ್ಕಿಕೊಂಡಿತ್ತು. ಮುಂದಕ್ಕೆ ಹೋಗಲಾರದೆ ಒದ್ದಾಡುತ್ತಿತ್ತು. ಗೋಪಿಯು ಧಾವಿಸಿ ಬಂದು ಜಿಂಕೆ ಮರಿಯನ್ನು ಬಿಳಲುಗಳಿಂದ ಬಿಡಿಸಿದನು. ಅಲ್ಲೇ ಓಡಾಡುತ್ತಿದ್ದ ತಾಯಿ ಜಿಂಕೆಯು ಬಹಳ ಖುಷಿಪಟ್ಟಿತು. ಬಾಲಕನಿಗೆ ಉಡುಗೊರೆಯೊಂದನ್ನು ಕೊಡಬೇಕೆನಿಸಿ ಮಾಯಾಶಕ್ತಿಯಿದ್ದ ಕೊಳಲನ್ನು ನೀಡಿತು. ಅದು ಕೇಳಿದ್ದೆಲ್ಲವನ್ನೂ ಪೂರೈಸುತ್ತಿತ್ತು. ಆದರೆ ಅದಕ್ಕೆ ಮುಂಚೆ ಮಂತ್ರವೊಂದನ್ನು ಉಚ್ಚರಿಸಬೇಕು. ಜಿಂಕೆ ಆ ಮಂತ್ರವನ್ನು ಬಾಲಕನಿಗೆ ಹೇಳಿಕೊಟ್ಟು ಕಣ್ಮರೆಯಾಯಿತು.
ಗೋಪಿಯು ಮಾಯಾ ಕೊಳಲಿನ ಶಕ್ತಿಯಿಂದ ಆಹಾರ ಮತ್ತು ಉಡುಗೆ ತೊಡುಗೆಗಳನ್ನು ಪಡೆದುಕೊಂಡನು. ತಾವು ಹಸಿವಿನಿಂದ ಕೆಡವಿದರೂ ದಷ್ಟಪುಷ್ಟನಾಗಿ, ಒಳ್ಳೊಳ್ಳೆ ಬಟ್ಟೆ ಧರಿಸುವುದನ್ನು ಕಂಡ ಅಜ್ಜಿ ಮತ್ತು ಮಗನಿಗೆ ಅನುಮಾನ ಬಂದಿತು. ಒಮ್ಮೆ ಅಜ್ಜಿ ಗೋಪಿಯನ್ನು ಹಿಂಬಾಲಿಸಿದಾಗ ಆಕೆಗೆ ಕೊಳಲಿನ ರಹಸ್ಯ ತಿಳಿದುಹೋಯಿತು. ಮಂತ್ರವನ್ನೂ ಬಾಯಿಪಾಠ ಮಾಡಿಕೊಂಡಳು. ಅಜ್ಜಿ ಮತ್ತಾಕೆಯ ಮಗ ಇಬ್ಬರೂ ಸೇರಿ, ಕೊಳಲನ್ನು ಕದಿಯಲು ಹೊಂಚು ಹಾಕಿದರು. ಒಂದು ದಿನ ರಾತ್ರಿ ಗೋಪಿ ಮಲಗಿದ್ದಾಗ ಕೊಳಲನ್ನು ಕದ್ದರು. ಗೋಪಿಗೆ ಇದು ಅಜ್ಜಿಯದೇ ಕೆಲಸ ಎಂದು ತಿಳಿದು ಹೋಯಿತು. ಅವನು ರಾಜನ ಬಳಿ ದೂರು ಕೊಟ್ಟ. ನ್ಯಾಯ ತೀರ್ಮಾನ ಮಾಡಲು ಇಬ್ಬರನ್ನೂ ರಾಜ ಕರೆಸಿದ.
ಮೊದಲು ಗೋಪಿ ಮಾಯಾ ಕೊಳಲಿಂದ ರಾಜನಿಗೆ ಭಕ್ಷ್ಯ ಭೋಜನಗಳನ್ನು ತರಿಸಿಕೊಟ್ಟ. ರಾಜ ಆ ರುಚಿಯನ್ನು ತನ್ನ ಜೀವನದಲ್ಲೇ ಸವಿದಿರಲಿಲ್ಲ. ಈಗ ಕೊಳಲು ತನ್ನದೆಂದು ಸಾಬೀತು ಪಡಿಸುವ ಸರದಿ ಅಜ್ಜಿಯದು. ಅಜ್ಜಿ ಮಂತ್ರ ಉಚ್ಚರಿಸಿ ರಾಜನ ಮೀಸೆ ಉದ್ದವಾಗಲಿ ಎಂದುಬಿಟ್ಟಳು. ರಾಜನ ಮೀಸೆ ಬೆಳೆಯುತ್ತಲೇ ಹೋಯಿತು. ಅಲ್ಲಿ ನೆರೆದಿದ್ದವರಿಗೆಲ್ಲಾ ಅಚ್ಚರಿ ರಾಜ ಹೇಗೆ ಇಷ್ಟು ಭಾರವಾದ ಮೀಸೆಯನ್ನು ಹೊತ್ತು ತಿರುಗುತ್ತಾನೆಂದು. ಏನು ಮಾಡಿದರೂ ನಿಲ್ಲುತ್ತಿಲ್ಲ. ರಾಜ ಅಜ್ಜಿಗೆ ಏನಾದರೂ ಮಾಡುವಂತೆ ಆಜ್ಞಾಪಿಸಿದ. ಅಜ್ಜಿಗೂ ಏನು ಮಾಡುವುದೆಂದು ತಿಳಿಯುತ್ತಿಲ್ಲ. ಕಡೆಗೆ ಗೋಪಿ ಮುಂದೆ ಬಂದು ಮೀಸೆ ಬೆಳೆಯುವುದನ್ನು ನಿಲ್ಲಿಸಿದ. ಇದು ಹೇಗಾಯಿತೆಂದು ರಾಜ ಕೇಳಿದಾಗ ಹೇಳಿದ “ಈ ಕೊಳಲು ಆಸೆ ನೆರವೇರಿಸಲು ಮಂತ್ರವಿರುವಂತೆ, ನಿಲ್ಲಿಸಲೂ ಒಂದು ಮಂತ್ರವಿದೆ. ಅದು ಅಜ್ಜಿಗೆ ಗೊತ್ತಿರಲಿಲ್ಲ’. ಈಗ ಪೆಚ್ಚಾಗುವ ಸರದಿ ಅಜ್ಜಿ ಮತ್ತವಳ ಮಗನದಾಗಿತ್ತು. ಅವರಿಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡರು. ಕೊಳಲು ಗೋಪಿಯ ಬಳಿಯೇ ಉಳಿಯಿತು.
– ರಾಜೇಶ್ವರಿ ಜಯಕೃಷ್ಣ,ಬೆಂಗಳೂರು