Advertisement
ಅಲ್ಲಿ ಕಾಲದ ನೆನಪೆ ಇಲ್ಲ. ಬೇಸರ ಎನ್ನುವ ಮಾತೂ ಇಲ್ಲ. ಇಷ್ಟೊಂದು ಬೇಗ ಸಮಯ ಕಳೆದುಹೋಗುತ್ತಿದೆಯಲ್ಲಾ ಎಂಬ ಧಾವಂತವನ್ನು ಬಿಟ್ಟರೆ ಬೇರೇನೂ ಒತ್ತಡಗಳಿಲ್ಲ. ಹೌದು, ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿ ನಮ್ಮೊಳಗೆ ಇಳಿದ ಬಗೆ ಹೀಗೆ. ತೇಜಸ್ವಿ ಕಟ್ಟಿಕೊಟ್ಟ ಆದರ್ಶದ ಬದುಕು,ಸುಂದರ ಕನಸು ಇದು.
Related Articles
Advertisement
ಜಪಾನಿನ ಸಹಜ ಕೃಷಿಕ ಮಸನೊಬ ಫುಕುವೋಕಾನ ಒನ್ ಸ್ಟ್ರಾ ರೆವಲ್ಯಾಷನ್ (ಒಂದು ಹುಲ್ಲಿನ ಕ್ರಾಂತಿ) ಎಂಬ ಪುಸ್ತಕವನ್ನು ತ್ತೂಂಬತ್ತರ ದಶಕದಲ್ಲಿ “ಸಹಜ ಕೃಷಿ’ ಎನ್ನುವ ಹೆಸರಿನಲ್ಲಿ ತೇಜಸ್ವಿ ಬರೆದು ಪ್ರಕಟಿಸಿದಾಗ ಕೃಷಿ ವಲಯದಲ್ಲಿ ದೊಡ್ಡ ಸಂಚಲನ ಉಂಟಾಯಿತು. ಇದನ್ನು ಓದಿದ ಸರಕಾರಿ ಉದ್ಯೋಗದಲ್ಲಿ ಹಲವರು ರೈತರಾದರು. ಈಗಲೂ ತೇಜಸ್ವಿಯೇ ಅವರಿಗೆ ಆದರ್ಶ.
ಸಹಜ ಕೃಷಿ ಪುಸ್ತಕದಲ್ಲಿ ನಮ್ಮ ವಿದ್ಯಾಭ್ಯಾಸದ ಶಿಸ್ತು, ಅಲ್ಲಿ ಅವರು ಕಲಿಸುವ ವಿಚಾರಗಳು ನಮ್ಮ ವಿಜಾನಿಗಳನ್ನು ರೈತ ಸಮಾಜದೊಂದಿಗೆ ಸಂವಾದ ಸಾಧ್ಯಲ್ಲದಷ್ಟು ಪರಕೀಯಗೊಳಿಸುತ್ತಿದೆಯೆ? ಪದವೀಧರರಾಗುತ್ತಿದ್ದಂತೆಯೇ ತಮ್ಮ ಪಿತ್ರಾರ್ಜಿತ ಜಮೀನಿಗೆ ವಿದಾಯ ಹೇಳಿ ಹೇಗಾದರೂ ಮಾಡಿ ಸರ್ಕಾರಿ ನೌಕರಿಯೊಂದನ್ನು ಗಿಟ್ಟಿಸಿ ಜೀವನಯಾಪನೆ ಮಾಡಲು ನಮ್ಮ ಯುವ ಸಮುದಾಯ ಹಂಬಲಿಸುತ್ತದಲ್ಲ ! ತಮಗೇ ಇಷ್ಟಲ್ಲದೆ ತಿರಸ್ಕರಿಸಿದ ಜೀವನ ಕ್ರಮವನ್ನು, ತಾವು ಅನುಷ್ಠಾನಕ್ಕೆ ತಂದುಕೊಳ್ಳದ ಆದರ್ಶಗಳನ್ನು ರೈತರಿಗೆ ಹೇಗೆ ಇವರು ಬೋಧಿಸುತ್ತಾರೆ ಮತ್ತು ಅವರು ಹೇಗೆ ಇವರ ಪ್ರವಚನಗಳನ್ನು ನಂಬುತ್ತಾರೆ ಎಂದು ಆಧುನಿಕ ವಿದ್ಯಾಭ್ಯಾಸದ ಕ್ರಮವನ್ನು ನೇರವಾಗಿ ಟೀಕಿಸಿದರು ತೇಜಸ್ವಿ. ನಮ್ಮ ವಿದ್ಯಾಭ್ಯಾಸವೇ ನಮ್ಮ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿದೆ ಎಂದರು. ಕೃಷಿಯನ್ನು ಕೇವಲ ಒಂದು ಉತ್ಪಾದನಾ ವಿಧಾನ ಎಂದು ಪರಿಗಣಿಸದೆ ಅದೊಂದು ಜೀವನ ವಿಧಾನ ಎಂದು ಪರಿಗಣಿಸಬೇಕು ಎಂದು ಕಲಿಸಿಕೊಟ್ಟರು.
ಪುಕುವೊಕಾನ ಸಹಜ ಕೃಷಿಯಲ್ಲಿ ಮಂಡಿಸುವ ತತ್ವ ಮತ್ತು ಸಿದ್ಧಾಂತಗಳು ಕೇವಲ ರೈತರ ಕೃಷಿ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿರದೆ ಕಲೆ, ಸಾಹಿತ್ಯ,ಸಂಗೀತ ಮತ್ತು ತತ್ವ ಮೀಮಾಂಸೆಯ ಮೇಲೆ ದೂರಗಾಮಿ ಪರಿಣಾಮ ಬೀರುತ್ತವೆ. ರಾಸಾಯನಿಕ ಕೃಷಿ ಆಹಾರ ಬೆಳೆಯುವ ಸಿದ್ಧ ಸಮೀಕರಣವನ್ನು ನೀಡುತ್ತದೆ. ಆದರೆ ಸಹಜ ಕೃಷಿ ಒಂದು ಜೀವನ ಕ್ರಮ, ಆಲೋಚನಾ ವಿಧಾನ, ಆಧ್ಯಾತ್ಮಿಕ ದೃಷ್ಟಿಯನ್ನೂ ಬೋಧಿಸುತ್ತದೆ ಎನ್ನುವುದು ತೇಜಸ್ವಿ ಅವರ ನಂಬಿಕೆಯಾಗಿತ್ತು.
ಪರಿಸರದ ಕಾಳಜಿಯಿಂದ ನೆಲದ ಕೌತುಕಗಳನ್ನು ಸರಳವಾಗಿ ಬರೆದ ತೇಜಸ್ವಿ, ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದ ಪಡೆದು ನಂತರ ಯಾವುದೇ ಸರ್ಕಾರಿ ನೌಕರಿಗೂ ಸೇರದೆ, ನೇರವಾಗಿ ನಿಮ್ಮ ಹುಟ್ಟೂರಿನ ಕಡೆಗೆ ಪಯಣಬೆಳೆಸಿ ಕಾಫಿ, ಬತ್ತ,ಏಲಕ್ಕಿ ಬೆಳೆಯುತ್ತಾ, ಜೊತೆಗೆ ಸಾಹಿತ್ಯ ಕೃಷಿಯನ್ನೂ ಮಾಡಿದರು. ಇದು ನಮಗೆಲ್ಲಾ ಮಾದರಿ ಎನಿಸಿತು.
ಸದಾ ಸಮಾಜಮುಖೀ ಚಿಂತಕರಾಗಿ ಬರವಣಿಗೆಯ ಜೊತೆಗೆ ರೈತ ಚಳವಳಿ,ಬರಹಗಾರರ ಒಕ್ಕೂಟ,ಬೂಸಾ ಪ್ರಕರಣ,ತುರ್ತು ಪರಿಸ್ಥಿತಿ, ಜೆಪಿ ಚಳವಳಿ, ಸಮಾಜವಾದಿ ಚಳವಳಿ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಒಬ್ಬ ಬರಹಗಾರ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾದರು. ನಗರದ ಸಕಲಸವಲತ್ತುಗಳನ್ನು ಬಿಟ್ಟು ಮಲೆನಾಡಿನ ಮೂಡಿಗೆರೆಯಂತಹ ದೂರದ ಹಳ್ಳಿಯಲ್ಲಿ ಕುಳಿತು ವರ್ತಮಾನಕ್ಕೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಕಲಿಸಿಕೊಟ್ಟರು.
ತೇಜಸ್ವಿ ಭೌತಿಕವಾಗಿ ದೂರಾವಾದರು ಎಲ್ಲೋ ಹೊಳೆಯ ದಡದಲ್ಲಿ ಗಾಳ ಹಾಕಿ ದೊಡ್ಡ ಮೀನುಡಿಯುವ ಹವಣಿಕೆಯಲ್ಲಿ ಕುಳಿತಿರಬಹುದು ಅನಿಸುತ್ತಿದೆ. ಆ ಕಡೆ ನೋಡಿದರೆ ತಮಿಳುನಾಡು, ಈ ಕಡೆ ನೋಡಿದರೆ ಕೇರಳದ ಗಡಿ ನಡುವಿನ “ಜುಗಾರಿ ಕ್ರಾಸ್’ ನಲ್ಲಿ ವಡ್ಡಗೆರೆ ಎಂಬ ಪುಟ್ಟಹಳ್ಳಿಯಲ್ಲಿ ಬೇಸಾಯ ಮಾಡುತ್ತಿರುವ ನನಗೆ ಮತ್ತೆ ಮತ್ತೆ ತೇಜಸ್ವಿ ನೆನಪಾಗುತ್ತಾರೆ. ಮಾದರಿಯಾಗುತ್ತಾರೆ.
ಚಿನ್ನಸ್ವಾಮಿ ವಡ್ಡಗೆರೆ