ನಮ್ಮ ಬದುಕಿಗೂ ಒಂದು ಆರ್ಥಿಕ ಶಿಸ್ತು ಅಳವಡಿಸಿಕೊಂಡು ಅದರಂತೆಯೇ ಬದುಕಬೇಕು. ಆಗ ಮಾತ್ರ ಹಣ ಹೂಡಿಕೆಯ ವಿಚಾರದಲ್ಲಿ ಯಶಸ್ಸು ಪಡೆಯಲು ಸಾಧ್ಯ.
ಸಿಪ್ ಬಗೆಗೆ ಓದಿದ, ಕೇಳಿದ ನಂತರ ಪ್ರತಿಯೊಬ್ಬರೂ ಯೋಚಿಸುತ್ತಾರೆ. ಹಣ ಉಳಿತಾಯ ಮಾಡುವ ಕೆಲಸ ಇಷ್ಟು ಸುಲಭವಾ ಹಾಗಾದರೆ? ನಿಜ, ಇದು ಸುಲಭ, ಆದರೆ ವ್ಯಕ್ತಿಯೊಬ್ಬ ಬದುಕಿನಲ್ಲಿ ಆರ್ಥಿಕ ಶಿಸ್ತು ಇದ್ದರೆ ಮಾತ್ರಈ ಹೂಡಿಕೆ ಸುಲಭ. ಜೀವನದಲ್ಲಿ ಯಾವುದೇ ರೀತಿಯ ಯಶಸ್ಸು ನಮ್ಮನ್ನು ಹಿಂಬಾಲಿಸಬೇಕು ಎಂದರೆ ನಾವು ಶಿಸ್ತಿನಿಂದ ಮುಂದೆ ಹೋಗಬೇಕು. ಇದು ಹಣ ಹೂಡಿಕೆಗೂ ಹೊರತಾಗಿಲ್ಲ.
ಸಿಪ್ ಅಂದರೆ, ವ್ಯವಸ್ಥಿತವಾಗಿ, ಕಂತುಗಳಲ್ಲಿ ಹಣ ಹೂಡುವುದು. ಹೀಗೆ ಹಣ ಹೂಡುವಾಗ ಯಾವ ಯೋಜನೆಗಳಲ್ಲಿ ಹಣ ಹೂಡಬೇಕು? ಯಾವ ಯೋಜನೆ ಎನ್ನುವುದು ಎಷ್ಟು ಮುಖ್ಯವೋ, ಅದೇ ರೀತಿ ಯಾವ ಕಂಪನಿಯ ಮ್ಯೂಚುವಲ್ ಫಂಡ್ ಎನ್ನುವುದೂ ಅಷ್ಟೇ ಮುಖ್ಯ. ಇದಕ್ಕೂ ಪ್ರಮುಖವಾದ ಪ್ರಶ್ನೆ ಯಾಕೆ ಹಣ ಹೂಡಬೇಕು? ಇವುಗಳಿಗೆ ಉತ್ತರದ ಖಚಿತತೆ ಸಿಕ್ಕರೆ ಮುಂದಿನ ದಾರಿ ಸುಲಭ.
ಈಗ ಬಹುತೇಕ ಎಲ್ಲ ಬ್ಯಾಂಕ್‌ಗಳಲ್ಲೂ ಮ್ಯೂಚುವಲ್ ಫಂಡ್ ವಿಭಾಗಗಳಿವೆ. ಈ ವಿಭಾಗಗಳು ಬೇರೆ ಬೇರೆ ಏಜೆನ್ಸಿಗಳ ಜೊತೆ, ಅಥವಾ ಬೇರೆ ಬೇರೆ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿರುತ್ತವೆ. ಅಂದರೆ, ಮ್ಯೂಚುವಲ್ ಫಂಡ್ ವಲಯದಲ್ಲಿ ಅನುಭವ ಇರುವ ಇನ್ನೊಂದು ಕಂಪನಿಯ ಸಹಭಾಗಿತ್ವವೂ ಇಲ್ಲಿ ಇರುತ್ತದೆ. ಆ ಕಂಪನಿಗಳ ಅನುಭವಗಳೂ ಇಲ್ಲಿ ಹಣವನ್ನು ನಿರ್ವಹಿಸಲು ನೆರವಾಗುತ್ತದೆ. ನಮ್ಮ ದೇಶದ ರಾಷ್ಟ್ರೀಯ, ಖಾಸಗಿ ವಲಯದ ಬ್ಯಾಂಕ್‌ಗಳಲ್ಲದೇ ರಿಲಯನ್ಸ್ ನಂತಹ ಕಂಪನಿಯ ಮ್ಯೂಚುವಲ್ ಫಂಡ್ ಕೂಡ ಜನಪ್ರಿಯವಾಗಿದೆ. ತಿಂಗಳಿಗೆ ಕೇವಲ 500 ರೂಪಾಯಿಗಳಿಂದಲೂ ಸಿಪ್ ನಲ್ಲಿ ಹಣ ಹೂಡಬಹುದಾಗಿದೆ.
ಯಾವ ಮ್ಯೂಚುವಲ್ ಫಂಡ್ ನ ಯಾವ ಯೊಜನೆ ಚೆನ್ನಾಗಿದೆ, ಯಾವುದು ಚೆನ್ನಾಗಿ ಇಲ್ಲ, ಎನ್ನುವುದಕ್ಕೆ ರೇಟಿಂಗ್ ಕೂಡ ಬರುತ್ತದೆ. ಇವುಗಳಿಗೆ ರೇಟಿಂಗ್ ಕೊಡುವ ಏಜೆನ್ಸಿಗಳೂ ಇವೆ. ಆ ರೇಟಿಂಗ್ ಅನ್ನು ಆಧರಿಸಿಯೂ ಹೂಡಿಕೆ ಮಾಡಬಹುದು. ನಮ್ಮ ಮ್ಯೂಚುವಲ್ ಫಂಡ್‌ನ ಆಯ್ಕೆಯನ್ನು ನಾವೇ ಮಾಡಿಕೊಳ್ಳಬಹುದು. ಇದಕ್ಕೆ ತಕ್ಕ ಮಟ್ಟಿಗಿನ ಅಧ್ಯಯನ ಅಗತ್ಯ. ಅಧ್ಯಯನ ಅಂದರೆ ಬಹಳ ವಿಷಯಗಳನ್ನು ಕಲೆ ಹಾಕುವುದಲ್ಲ. ಯಾವುದು ಈ ಹಿಂದೆ ಹೇಗೆ ಕಾರ್ಯ ನಿರ್ವಹಿಸಿದೆ, ಎಷ್ಟು ಲಾಭ ತಂದು ಕೊಟ್ಟಿದೆ ಎನ್ನುವುದನ್ನೆಲ್ಲ ಅರಿಯುವುದು. ಅಂದರೆ, ಏಕ ಕಾಲದಲ್ಲಿ ಬೇರೆ ಬೇರೆ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಬಹುದು. ಹೇಗೆ ಬೇರೆ ಬೇರೆ ಷೇರುಗಳನ್ನು ತೆಗೆದುಕೊಳ್ಳುತ್ತೇವೋ ಅಷ್ಟೇ ವ್ಯವಸ್ಥಿತವಾಗಿ ಮ್ಯೂಚುವಲ್ ಫಂಡ್ ಯುನಿಟ್ ಗಳನ್ನೂ ಖರೀದಿಸಬಹುದು. ಇದಕ್ಕೆ ಬೇಕಾಗಿರುವುದು ಆರ್ಥಿಕ ಶಿಸ್ತು. ಪ್ರತಿ ತಿಂಗಳೂ ಎಲ್ಲಿ, ಹೇಗೆ ಹಣ ಹೂಡಬೇಕು ಎನ್ನುವ ವ್ಯವಸ್ಥಿತ ನಿರ್ಧಾರ.
ಹನಿ ಹನಿ ಕೂಡಿದರೆ ಹಳ್ಳ ಎನ್ನುವುದನ್ನು ಸಿಪ್ ಮತ್ತೂಮ್ಮೆ ಸಾಬೀತು ಪಡಿಸಿದೆ.
– ಸುಧಾಶರ್ಮ ಚವತ್ತಿ