ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ರಾಜಕೀಯ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದರಲ್ಲಿ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ. ಕೃಷ್ಣಾ, ದೂಧಗಂಗಾ ನದಿಗಳ ಬೀಡಾಗಿರುವ ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಜೋರಾಗಿದೆ. ಪ್ರತಿ ಚುನಾವಣೆಯಲ್ಲಿ ಮುಗ್ಗರಿಸುತ್ತಿರುವ ಕಮಲ ನಾಯಕರು ಈ ಬಾರಿ ಮುನ್ನಡೆ ಸಾಧಿಸಲು ಪೈಪೋಟಿ ನಡೆಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಪುತ್ರ ಹಾಗೂ ಸರ್ಕಾರಿ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಬೆನ್ನಿಗೆ ನಿಂತರೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಗೆ ಪತ್ನಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಬೆಂಬಲವಾಗಿ ನಿಂತು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ.
ಚಿಕ್ಕೋಡಿ-ಸದಲಗಾ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿಗೆ ಮನ್ನಣೆ ಕೊಡಬೇಕೋ ಅಥವಾ ಕೇಂದ್ರದಲ್ಲಿ ನರೇಂದ್ರ ಮೋದಿಗೆ ಬೆಂಬಲ ಕೊಡಬೇಕೆನ್ನುವ ಗೊಂದಲದಲ್ಲಿ ಮತದಾರರಿದ್ದಾರೆ.
ಕ್ಷೇತ್ರದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಬಹು ವರ್ಷಗಳಿಂದ ನನೆಗುದಿಗೆ ಬಿದ್ದರೇ ಚಿಕ್ಕೋಡಿ ಜಿಲ್ಲಾ ಕೇಂದ್ರವಾಗಲು ತುದಿಗಾಲಲ್ಲಿ ನಿಂತಿದೆ. ಯುವಕರು ಉದ್ಯೋಗ ಕಟ್ಟಿಕೊಳ್ಳಲು ಕ್ಷೇತ್ರದಲ್ಲಿ ಕೈಗಾರಿಕೆಗಳ ಕೊರತೆ ಇದೆ. ಪ್ರಕಾಶ ಹುಕ್ಕೇರಿ 35 ವರ್ಷಗಳ ರಾಜಕೀಯ ಮಾಡಿದರೂ ಯಾವುದೇ ಒಂದು ಕೈಗಾರಿಕೆ ಸ್ಥಾಪನೆ ಮತ್ತು ಜಿಲ್ಲಾ ಘೋಷಣೆಗೆ ಪ್ರಯತ್ನ ಮಾಡಿಲ್ಲ ಎಂಬ ದೊಡ್ಡ ಆರೋಪ ಅವರ ಮೇಲಿದೆ. ಇನ್ನೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಬೀರೇಶ್ವರ ಸೊಸೈಟಿ ಮೂಲಕ ಕ್ಷೇತ್ರದ ಜನರಿಗೆ ಉದ್ಯೋಗ ನೀಡಿದ್ದಾರೆ ಎಂಬ ಅನುಕಂಪ ಅವರ ಮೇಲಿದೆ.
Advertisement
ಗಡಿಭಾಗದ ರಾಜಕೀಯ ಶಕ್ತಿ ಕೇಂದ್ರವಾದ ಯಕ್ಸಂಬಾ ಪಟ್ಟಣದ ಹುಕ್ಕೇರಿ ಮತ್ತು ಜೊಲ್ಲೆ ಪ್ರತಿಷ್ಠಿತ ಕುಟುಂಬದ ದಿಗ್ಗಜರು ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಭಾರೀ ಕುತೂಹಲ ಮೂಡಿಸಿದೆ. ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ- ಸದಲಗಾ ಕ್ಷೇತ್ರದಲ್ಲಿ ಶಾಸಕ, ಸಚಿವ ಹಾಗೂ ಸಂಸದರಾಗಿ ಜನರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಬಿಜೆಪಿ ಲೋಕಸಭೆ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಸಹಕಾರಿ ಕ್ಷೇತ್ರದಲ್ಲಿ ತನ್ನದೆಯಾದ ವೈಯಕ್ತಿಕ ವರ್ಚಸ್ಸು ಕಾಯ್ದುಕೊಳ್ಳುವ ಮೂಲಕ ಇಬ್ಬರು ಪ್ರಬಲ ಅಭ್ಯರ್ಥಿಗಳಾಗಿದ್ದಾರೆ.
Related Articles
Advertisement
ಒಂದು ಕಡೆ ಅಭಿವೃದ್ಧಿ ಕೈ ಹಿಡಿಯುತ್ತದೆಂದು ಕಾಂಗ್ರೆಸ್ ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿದ್ದರೇ ಮತ್ತೂಂದು ಕಡೆ ಮೋದಿ ಅಲೆ ಮೇಲೆ ಗೆಲ್ಲುವ ಕನಸು ಕಟ್ಟಿಕೊಂಡಿರುವ ಜೊಲ್ಲೆಗೆ ಲಿಂಗಾಯತ್ ಚತುರ್ಥ ಸಮಾಜ ಕೂಡಾ ಬೆನ್ನೆಗೆ ನಿಂತಿರುವುದು ಮತ್ತಷ್ಟು ಬಲ ಬರುತ್ತದೆ ಎಂಬ ಬಿಜೆಪಿ ಲೆಕ್ಕಾಚಾರವಾಗಿದೆ.