ದಾವಣಗೆರೆ: ಮನೆಯ ಯಜಮಾನ ಹುಟ್ಟು ಕುರುಡ, ಹೆಂಡತಿ ವಿಕಲಚೇತನೆ, ಮಗ ಸಹ ಹುಟ್ಟು ಕುರುಡ, ಮೊಮ್ಮಕ್ಕಳಿಬ್ಬರೂ ಕುರುಡರು… ಇಂತಹ ಕುಟುಂಬ ತಮ್ಮ ಜಾಗದಲ್ಲೇ ಸಂಗೀತ ಮಂದಿರ ಕಟ್ಟಿಕೊಳ್ಳಲಿಕ್ಕೆ ಗ್ರಾಮ ಪಂಚಾಯತಿಯ ಪರವಾನಗಿಗಾಗಿ 20 ವರ್ಷದಿಂದ ಪರಿತಪಿಸುತ್ತಿದೆ!.
ಗ್ರಾಮ ಪಂಚಾಯತ್ ನಿಂದ ಪರವಾನಗಿಗಾಗಿಯೇ 20 ವರ್ಷದಿಂದ ಪ್ರತಿನಿತ್ಯ ತಮ್ಮ ಸಂಬಂಧಿಕರಿಂದಲೇ ಕಿರುಕುಳದ ನಡುವೆಯೂ ಇಡೀ ಕುಟುಂಬ ಅಲೆದಾಡುತ್ತಿರುವುದು ಅಚ್ಚರಿ ಮೂಡಿಸಿದರೂ ಸತ್ಯ!.
ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಸಂಗೀತ ಶಿಕ್ಷಕ ಕೆ.ಎನ್. ಮಂಜಪ್ಪ ನಾಟಕದ ಸಂಗೀತದ ಮೇಷ್ಟ್ರು. ಅವರ ಮಗ ನರೇಂದ್ರಕುಮಾರ್ ಸಹಕುರುಡರು. ರೇಂದ್ರಕುಮಾರ್ ಮಕ್ಕಳಾದ ಚಿನ್ಮಯ್ ಮತ್ತು ತ್ರಿವೇಣಿ ಸಹ ಕುರುಡರು.
ಗದಗಿನ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿದ್ದ ನರೇಂದ್ರಕುಮಾರ್ ಅನೇಕ ಕಡೆ ಕೆಲಸಕ್ಕಾಗಿ ಅಲೆದಾಡಿ, ಎಲ್ಲಿಯೂ ಕೆಲಸ ಸಿಗದಿದ್ದರಿಂದ ತಮ್ಮ ಮನೆಯ ಪಕ್ಕದ 14*12 ಅಡಿ ಅಳತೆಯ ಜಾಗದಲ್ಲಿ ಸಂಗೀತ ಮಂದಿರ ಕಟ್ಟಿಸಿ, ನಾಲ್ಕಾರು ಜನರಿಗೆ ಸಂಗೀತ ಕಲಿಸಿ, ಜೀವನ ನಿರ್ವಹಣೆಗೆ ಸಂಗೀತ ಮಂದಿರ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆಯೇ ಗ್ರಾಮ ಪಂಚಾಯತಿ ತಕರಾರು ಎತ್ತಿತು. ಜಾಗ ಗ್ರಾಮ ಪಂಚಾಯತಿಯದ್ದು ಹಾಗಾಗಿ ಸಂಗೀತ ಮಂದಿರ ಕಟ್ಟುವಂತಿಲ್ಲ ಎಂದು ಮೌಖೀಕ ಸೂಚನೆ ನೀಡಿತು.
ಏಕಾಏಕಿ ಎದುರಾದ ತಕರಾರಿನಿಂದ ಅವಕ್ಕಾದ ಕುಟುಂಬದ ಸದಸ್ಯರು 1968ರಲ್ಲಿ ಕೆ.ಎನ್. ಮಂಜಪ್ಪ ಅವರ ತಂದೆ ಕೌದಿ ನಿರ್ವಾಣಪ್ಪ ಜಾಗ ವರ್ಗಾಯಿಸಿದ ಮೂಲ ದಾಖಲೆ ಪತ್ತೆ ಹಚ್ಚಿ, ಗ್ರಾಮ ಪಂಚಾಯತಿಗೆ ಸಲ್ಲಿಸಿದರು. ಆದರೂ, ಗ್ರಾಮ ಪಂಚಾಯತಿಯಿಂದ ಪರವಾನಗಿ ದೊರೆಯಲಿಲ್ಲ.
ತಮ್ಮದೇ ಜಾಗದಲ್ಲಿ ಸಂಗೀತ ಮಂದಿರ ಕಟ್ಟಿಸಲು ಪರವಾನಗಿ ಕೋರಿ ನರೇಂದ್ರಕುಮಾರ್ ಇಡೀ
ಕುಟುಂಬದೊಂದಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ 14*12 ಅಡಿ ಸುತ್ತಳತೆಯ ಜಾಗವನ್ನು ಭಗೀರಥ ಭವನ ಇಲ್ಲವೇ ಸ್ತ್ರೀಶಕ್ತಿ ಭವನಕ್ಕೆ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದಾರೆ.
20 ವರ್ಷದಿಂದ ಪರಿತಪಿಸುತ್ತಿರುವ ಕುಟುಂಬ ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್‌ರನ್ನು ಭೇಟಿಯಾಗಿ ಅಳಲು ತೋಡಿಕೊಂಡಿತು. ಕುಟುಂಬಕ್ಕೆ ಅಗತ್ಯ ನೆರವು ನೀಡುವಂತೆ ಸಂಸದರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಸಿಇಒ ಎಸ್. ಅಶ್ವತಿಗೆ ಸೂಚಿಸಿದರು