ನವದೆಹಲಿ: ಡಿಜಿಟಲ್ ಇಂಡಿಯಾ, ನಗದು ರಹಿತ ವಹಿವಾಟಿನ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ನಡುವೆಯೇ ಸುಮಾರು ಒಂದು ಕೋಟಿ ಭಾರತೀಯರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬರೇ 20ಪೈಸೆ ಲೆಕ್ಕಾಚಾರದಂತೆ ವಂಚಕರಿಗೆ ಮಾರಾಟ ಮಾಡಿರುವ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ!
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿ 80 ವರ್ಷದ ಅರ್ಜಿಯ ಕ್ರೆಡಿಟ್ ಕಾರ್ಡ್ ನಿಂದ 1.46 ಲಕ್ಷ ರೂಪಾಯಿ ಹ್ಯಾಕ್ ಮಾಡಿ ಎಗರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಪ್ರಮುಖ ರೂವಾರಿಯನ್ನು ಬಂಧಿಸಿದ್ದಾತನ ಬಳಿ ಸುಮಾರು ಒಂದು ಕೋಟಿ ಜನರ ಬ್ಯಾಂಕ್ ಮಾಹಿತಿ ಹೊಂದಿದ್ದ ಡಾಟಾವನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಡಾಟಾದಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ನಂಬರ್, ಖಾತೆದಾರರ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ವಿವರ ಇದ್ದಿರುವುದಾಗಿ ಡಿಸಿಪಿ ರೋಮಿಲಾ ಬಾನಿಯಾ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪಾಂಡವ್ ನಗರ್ ನಿವಾಸಿ ಪೂರನ್ ಗುಪ್ತಾ ಎಂದು ಗುರುತಿಸಲಾಗಿದೆ. ಈತ ಸುಮಾರು 50 ಸಾವಿರ ಜನರ ಡಾಟಾವನ್ನು 10ರಿಂದ 20 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಮುಂಬೈ ಮೂಲದ ಡಾಟಾ ಸರಬರಾಜುದಾರನೊಬ್ಬನಿಂದ ಖರೀದಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಈ ವಂಚಕರು ಡಾಟಾದ ಮಾಹಿತಿಯನ್ನು ಇಟ್ಟುಕೊಂಡು ಬ್ಯಾಂಕ್ ಪ್ರತಿನಿಧಿಗಳಂತೆ ನಟಿಸಿ,ಗ್ರಾಹಕರಿಂದ ಸಿವಿವಿ( (Card Verification Value) ನಂಬರ್ ಹಾಗೂ ಓಟಿಪಿ ಮಾಹಿತಿ ತೆಗೆದುಕೊಂಡು ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದರು ಎಂದು ವರದಿ ಹೇಳಿದೆ.