Advertisement

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

06:38 PM Mar 03, 2021 | Team Udayavani |

ಬೀದರ: ಅಂಗಾರಿಕಾ ಸಂಕಷ್ಟ ಚತುರ್ಥಿ ಬಂದರೆ ಸಾಕು ಭಕ್ತರ ದಂಡು ಸಿದ್ಧಿವಿನಾಯಕನ ದರ್ಶನಕ್ಕಾಗಿ ಪಾದಯಾತ್ರೆಗೆ ಹೊರಟು ನಿಲ್ಲುತ್ತದೆ. ವರ್ಷದಿಂದ ವರ್ಷಕ್ಕೆ ರಾಜ್ಯದ ಗಡಿ ಗ್ರಾಮದ ರೇಜಂತಲ್‌ನ ಸಿದ್ಧಿವಿನಾಯಕ (ಉದ್ಭವ ಗಣೇಶ) ಮಂದಿರಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್‌ ನಡುವೆಯೂ ಮಂಗಳವಾರ ಹೈದ್ರಾಬಾದ ರಸ್ತೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರ ರೇಜಂತಲ್‌ಗೆ ಹೊರಟ ಪಾದಯಾತ್ರಿಗಳ ದಂಡು ಕಂಡುಬಂತು.

Advertisement

ಸಂಕಷ್ಟ ಚತುರ್ಥಿ ಮಂಗಳವಾರ ಬಂದರೆ ಅದಕ್ಕೆ “ಅಂಗಾರಿಕಾ’ ಎಂಬ ವಿಶೇಷ ಮಹತ್ವ ಇದೆ. ಭೂಲೋಕಕ್ಕೆ ಗಣೇಶ ಅಧಿದೇವತೆಯಾಗಿರುವಂತೆಯೇ ಮಂಗಳಕ್ಕೂ ಕೂಡ. ಈ ದಿನವನ್ನು ಶುಭ ದಿನವೆಂದು ಭಾವಿಸಲಾಗುತ್ತದೆ. ಗಣೇಶನಿಗೆ ಮಂಗಳವಾರ ಬಹುಪ್ರೀಯ ದಿನ. ಪಾದಯಾತ್ರೆ ಮೂಲಕ ಸಿದ್ಧಿವಿನಾಯಕನ ಸನ್ನಿದ್ಧಿಗೆ ತೆರಳಿದರೆ ಬೇಡಿಕೊಂಡ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಪ್ರತೀತಿ ಇದ್ದು, ಕಳೆದ 20 ವರ್ಷಗಳಿಂದ ಭಕ್ತರು ಸುಮಾರು 22 ಕಿ.ಮೀ ದೂರ ಕಾಲ್ನಡಿಗೆ ಮೂಲಕ ಬರುತ್ತಾರೆ. ಬೀದರ ನಗರ ಮಾತ್ರವಲ್ಲ ವಿವಿಧ ತಾಲೂಕುಗಳಿಂದಲೂ ಪಾದಯಾತ್ರೆ ನಡೆಸಿದರು. ಮಕ್ಕಳು, ಮಹಿಳೆಯರು ಎನ್ನದೇ ಎಲ್ಲ ವಯೋಮಾನದವರು ಬರಿಗಾಲಲ್ಲಿಯೇ ಗಣೇಶನನ್ನು ಸ್ಮರಿಸುತ್ತ ಹೆಜ್ಜೆ ಹಾಕಿದರು.

ರೇಜಂತಲ್‌ದಲ್ಲಿ ಉದ್ಭವ ಗಣೇಶ ದೇವಸ್ಥಾನ ಇದ್ದು, ಪ್ರತಿ ವರ್ಷವೂ ಮೂರ್ತಿ ಬೆಳೆಯುತ್ತಲೇ ಇದೆ ಎಂಬ ನಂಬಿಕೆ ಇದೆ. ರೇಜಂತಲ್‌ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಸಣ್ಣದೊಂದು ಗಣೇಶ ಮಂದಿರ ಇತ್ತು. ಚಂದ್ರಯ್ಯ ರೇಜಂತಲ್‌ ಎಂಬುವರು ನಿತ್ಯ ಪೂಜೆ ಸಲ್ಲಿಸಿ ದೀಪ ಬೆಳಗಿಸುತ್ತಿದ್ದರು. ಗಣೇಶ ಮೂರ್ತಿ ಬೆಳೆಯಲಾರಂಭಿಸಿದ್ದರಿಂದ ಇದರ ಮಹಿಮೆ ಅರಿತ ಸುತ್ತಲಿನ ಜನತೆ ಗಣೇಶ ದರ್ಶನಕ್ಕೆ ಬರಲಾರಂಭಿಸಿದರು.

ನಂತರ ವಿಶಾಲವಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್‌ ಮೂಲಕ ಮಂದಿರ ಅಭಿವೃದ್ಧಿಪಡಿಸಲಾಗಿದೆ. ಸಂಕಷ್ಟ ಚತುರ್ಥಿ, ಹುಣ್ಣಿಮೆ ಸೇರಿದಂತೆ ಹಬ್ಬದ ದಿನಗಳಂದು ವಿಶೇಷ ಧಾರ್ಮಿಕ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ಸಂಕಷ್ಟ ಚತುರ್ಥಿ ಮಂಗಳವಾರ
ಬಂದರೆ, ಕಾಲ್ನಡಿಗೆ ಮೂಲಕ ರೇಜಂತಲ್‌ ದೇವಸ್ಥಾನಕ್ಕೆ ಸಹಸ್ರಾರು ಭಕ್ತರ ದಂಡು ಹರಿದು ಬರುತ್ತಿದೆ.

ದೇವರ ದರ್ಶನ ಪಡೆಯಲು ಸೋಮವಾರ ರಾತ್ರಿಯಿಂದಲೇ ಜನರು ಹೈದ್ರಾಬಾದ ಹೆದ್ದಾರಿಗೆ ಇಳಿದಿದ್ದರು. ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿದ್ದು, ಅದರಲ್ಲಿ ಬಹುತೇಕ ಬೀದರ ಜಿಲ್ಲೆಯವರೇ ಸೇರಿದ್ದರು. ತಂಡೋಪ ತಂಡವಾಗಿ ಪಾದಯಾತ್ರೆಯೊಂದಿಗೆ ಆಗಮಿಸಿದ್ದ ಭಕ್ತರು ಎರಡ್ಮೂರು ಗಂಟೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಚರ್ತುರ್ಥಿ ನಿಮಿತ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮ ನೆರವೇರಿದವರು. ದರ್ಶನಕ್ಕೆ ಬಂದ ಭಕ್ತರಿಗೆ ಮಾರ್ಗ ಮಧ್ಯ ಅಲ್ಲಲ್ಲಿ ಪ್ರಸಾದ, ಬಾಳೆ ಹಣ್ಣು, ನೀರು, ಚಹಾ ಮತ್ತು ಹಾಲಿನ ವ್ಯವಸ್ಥೆ ಮಾಡಲಾಗಿತ್ತು.

Advertisement

ರೇಜಂತಲ್‌ ಸಿದ್ಧವಿನಾಯಕನ ಬಳಿ ಒಳ್ಳೆಯ ಮನಸ್ಸಿನಿಂದ ಬೇಡಿಕೊಂಡದ್ದು ಸಿದ್ಧಿಸುತ್ತದೆ. ಕಾಲ್ನಡಿಗೆ ಮೂಲಕ ಸತತವಾಗಿ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಭಕ್ತರು ತಂಡೋಪ ತಂಡವಾಗಿ ಭಕ್ತಿ-ಭಾವದಿಂದ ಹೆಜ್ಜೆ ಹಾಕುತ್ತಾರೆ. ಪಾದಯಾತ್ರೆಯಲ್ಲಿ ಹೊರಟ ಜನರನ್ನು ನೋಡುವುದೇ  ಒಂದು ಖುಷಿ. ಕೋವಿಡ್‌ ನಡುವೆಯೂ ಭಕ್ತರು ಭಕ್ತಿ-ಭಾವದಿಂದ ಯಾತ್ರೆ ನಡೆಸಿದರು.
ರೇಣುಕಾ ಸಂಗಮೇಶ,
ಬೀದರ, ಪಾದಯಾತ್ರಿ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next