ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಅಪಾಯದ ನಡುವೆಯೇ ಸಂಚಾರ ಮಾಡುವಂತಾಗಿದೆ.
ಪಾಲಿಕೆಯ ಕೇಂದ್ರ ಭಾಗದ ಗಾಂಧಿನಗರ, ಚಾಮರಾಜ ಪೇಟೆ, ಚಿಕ್ಕಪೇಟೆ, ಜಯನಗರ, ಬಿಟಿಎಂ ಬಡಾವಣೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಾಲಿಕೆಯಿಂದ ನೂರಾರು ಕಾಮಗಾರಿಗಳನ್ನು ಪ್ರಗತಿಯಲ್ಲಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ವೈಟ್ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದರೂ, ಪಾದಚಾರಿ ಮಾರ್ಗಗಳ ನಿರ್ಮಾ ಣಕ್ಕೆ ಗುತ್ತಿಗೆದಾರರು ಮುಂದಾಗದ ಹಿನ್ನೆಲೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಪಾಲಿಕೆಯಿಂದ ಯಾವುದೇ ರಸ್ತೆ ಕಾಮಗಾರಿ ಕೈಗೆತ್ತಿಕೊಂಡರೂ ಪಾದಚಾರಿಗಳ ಅನುಕೂಲಕ್ಕಾಗಿ ಮೊದಲಿಗೆ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕು. ಬಳಿಕ ರಸ್ತೆ ಕಾಮಗಾರಿ ನಡೆಸಬೇಕೆಂಬ ನಿಯಮವಿದೆ. ಆದರೆ, ಗುತ್ತಿಗೆದಾರರು ರಸ್ತೆ ಕಾಮಗಾರಿ ಮೊದಲು ಪೂರ್ಣಗೊಳಿಸಿ ನಂತರದಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಮುಂದಾಗುತ್ತಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.
ಅದರಲ್ಲಿಯೂ ಪಾಲಿಕೆಯಿಂದ ನಗರದ ವಾರ್ಡ್ ರಸ್ತೆಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವ ವೈಟ್ಟಾಪಿಂಗ್ ಕಾಮಗಾರಿ ವೇಳೆ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳಿದ್ದು, ಸಜ್ಜನ್‌ರಾವ್ ವೃತ್ತ ಸುತ್ತಮುತ್ತಲಿನ ರಸ್ತೆಗಳಲ್ಲಿ ವೈಟ್ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಿ ಪಾದಚಾರಿ ಮಾರ್ಗ ನಿರ್ಮಿಸದಿರುವುದು ಅದಕ್ಕೆ ಪೂರಕವೆಂಬಂತಿದೆ.
Advertisement
ನಗರದ ಕೇಂದ್ರ ಭಾಗ ಸೇರಿದಂತೆ ಹಲವಾರು ಕಡೆಗಳಲ್ಲಿ ಪಾಲಿಕೆಯಿಂದ ವೈಟ್ಟಾಪಿಂಗ್, ಟೆಂಡರ್‌ಶ್ಯೂರ್ ಹಾಗೂ ಚರಂಡಿಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳು ಪ್ರಗತಿಯಲ್ಲಿವೆ. ವೈಟ್ಟಾಪಿಂಗ್ ಹಾಗೂ ವೈಟ್ಟಾಪಿಂಗ್ ಕಾಮಗಾರಿಗೆ ರಸ್ತೆಯ ಎರಡು ಬದಿಯ ಪಾದಚಾರಿ ಮಾರ್ಗವನ್ನು ಅಗೆಯಲಾಗಿದ್ದು, ಜನರು ಅಪಾಯದ ವಾಹನಗಳೊಂದಿಗೆ ರಸ್ತೆಯಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
ವಿ.ವಿ.ಪುರದ ಸಜ್ಜನರಾವ್ ವೃತ್ತದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾಲಿಕೆಯಿಂದ ವೈಟ್ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಂತೆ ಪಾರ್ವತಿಪುರ ರಸ್ತೆಯಲ್ಲಿ ವೈಟ್ಟಾಪಿಂಗ್ ಕಾಮಗಾರಿ ಪೂರ್ಣಗೊಂಡು ತಿಂಗಳುಗಳು ಕಳೆದಿವೆ. ಆದರೆ, ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಆರಂಭವಾಗಿಲ್ಲ. ಪರಿಣಾಮ ಜನರು ರಸ್ತೆಯ ಅಂಚಿನಲ್ಲಿ ಅಪಾಯದ ನಡುವೆಯೇ ನಡೆದುಹೋಗಬೇಕಾಗಿದೆ.
.ವೆಂ.ಸುನೀಲ್‌ಕುಮಾರ್
Advertisement