ವಿಶ್ವದೆಲ್ಲೆಡೆ ಈಗ ಫುಟ್‌ಬಾಲ್ ಜ್ವರ. ನೆಚ್ಚಿನ ತಂಡ,ಆಟಗಾರರ ಪರ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿದೆ. ಗೆಲ್ಲುವುದು ಯಾವುದೇ ತಂಡವಾಗಿರಬಹುದು. ಆದರೆ ಪ್ರತಿ ತಂಡಗಳಿಗೂ ಅದರದ್ದೇ ಆದ ಅಭಿಮಾನಿ ಬಳಗವೊಂದಿದೆ. ಅವರೆಲ್ಲರು ವಿಶ್ವ ಫುಟ್‌ಬಾಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.
ಭಾರತ ವಿಶ್ವ ಕೂಟದಲ್ಲಿ ಪಾಲ್ಗೊಳ್ಳದೆ ಇರಬಹುದು. ಆದರೆ ಭಾರತೀಯರ ಹೃದಯ ಸಿಂಹಾಸನದಲ್ಲಿ ಫುಟ್‌ಬಾಲ್ ಮೇಲೆ ಅಪಾರ ಪ್ರೀತಿ ಕಾಣುತ್ತದೆ. ಅದರಲ್ಲೂ ಕೋಲ್ಕತಾ, ಕೇರಳ ಮತ್ತು ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಫುಟ್‌ಬಾಲ್ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆ, ಅಂಗಡಿ, ರಸ್ತೆ, ನಿಂತ ಹಳೆ ಗಾಡಿಗಳು, ಗೋಡೆ ಇನ್ನಿತರ ವಸ್ತುಗಳ ಮೇಲೆ ನೆಚ್ಚಿನ ಆಟಗಾರ, ದೇಶದ ಬಣ್ಣದ ಹಚ್ಚಿ ತಮ್ಮ ಅಗಾದ ಪ್ರೀತಿಯನ್ನು ತೋರ್ಪಡಿಸಿದ್ದಾರೆ.
ಫುಟ್‌ಬಾಲ್‌ನ ಮೆಕ್ಕಾ ಕೋಲ್ಕತಾ: ಕೋಲ್ಕತಾವನ್ನು ಫುಟ್‌ಬಾಲ್‌ನ ಮೆಕ್ಕಾ ಎಂದು ಕರೆಯುತ್ತಾರೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫುಟ್‌ಬಾಲ್ ಅಭಿಮಾನಿಗಳ ಕ್ರೇಜ್ ಹೊಂದಿರುವ ಏಕೈಕ ಸ್ಥಳ. ಪ್ರಸ್ತುತ ಕೋಲ್ಕತಾದ ಬೀದಿಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಚಿತ್ರವನ್ನು ಬಣ್ಣದಲ್ಲಿ ಚಿತ್ರಿಸಿದ್ದಾರೆ. ರಸ್ತೆ ಯುದ್ದಕ್ಕೂ ನೇಮಾರ್, ಮೆಸ್ಸಿ, ರೊನಾಲ್ಡಿನೊ ರಂತಹ ದಿಗ್ಗಜ ಆಟಗಾರರ ಅಂದದ ಫೋಟೋಗಳು ರಾರಾಜಿಸುತ್ತಿದೆ. ಜತೆಗೆ ಗಾಳಿಪಟ ತಯಾರಿಸುವ ಕಲಾವಿದರು ಬ್ಯುಸಿ. ವಿವಿಧ ಬಣ್ಣಗಳ, ತಂಡಗಳ, ಆಟಗಾರರ ಹೆಸರಿನ ಗಾಳಿ ಪಟಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಶೃಂಗಾರಗೊಂಡಿದೆ ಗೋವಾ: ಗೋವಾದಲ್ಲೂ ಫುಟ್‌ಬಾಲ್ ಕ್ರೇಜ್ ಕಡಿಮೆಯೇನಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರು ಫುಟ್‌ಬಾಲ್ ಅನ್ನು ಅಪ್ಪಿಕೊಂಡಿದ್ದಾರೆ. ವಿಶ್ವ ಸಮರ ನೋಡಲು ಸಜ್ಜಾಗಿರುವ ಅವರು ಮಕ್ಕಳಲ್ಲಿ ಫುಟ್‌ಬಾಲ್ ಕುರಿತಂತೆ ವಿಶೇಷ ಕಾರ್ಯಗಾರ ನಡೆಸಿ ಜಾಗೃತಿ ನಡೆಸುವ ಕಾರ್ಯ ನಡೆಸುತ್ತಿದ್ದಾರೆ.
ಕೇರಳದಲ್ಲಿ ಫಿಫಾ ಜ್ವರ: ಕೇರಳದಲ್ಲಿ ನಿಪ ಜ್ವರದ ಆತಂಕವನ್ನು ಕಿತ್ತು ಬಿಸಾಕಿರುವ ಅಲ್ಲಿನ ಫುಟ್‌ಬಾಲ್ ಅಭಿಮಾನಿಗಳು ರಸ್ತೆಯ ಉದ್ದಗಲ, ಹಲಸಿನ ಮರ, ಆಟೋ ರಿಕ್ಷಾ. ರಸ್ತೆಯ ಗೋಡೆಗಳಲ್ಲಿ ತಮ್ಮ ನೆಚ್ಚಿನ ಫುಟ್‌ಬಾಲ್ ಆಟಗಾರರ ಚಿತ್ರವನ್ನು ಬರೆದಿದ್ದಾರೆ. ಕಟೌಟ್ ಫ್ಲೆಕ್ಸ್‌ಗಳಲ್ಲಿ ತಮ್ಮ ನೆಚ್ಚಿನ ಆಟಗಾರರ ಫೋಟೋವನ್ನು ಹಾಕಿ ಅಭಿಮಾನಿಗಳು ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ. ದೇವರ ನಾಡಿನ ಹೆಚ್ಚಿನ ಅಭಿಮಾನಿಗಳು ಬ್ರೆಜಿಲ್, ಪೋರ್ಚುಗಲ್ ತಂಡಗಳನ್ನು ಬೆಂಬಲಿಸುವ ಫೋಟೊಗಳು ರಸ್ತೆಯಲ್ಲಿ ಕಾಣಬಹುದಾಗಿದೆ.
ವಿಶ್ವದಾದ್ಯಂತ ಸಂಭ್ರಮ
ಬ್ರೆಜಿಲ್‌ನ ಪ್ರಮುಖ ನಗರದಲ್ಲಿ ಅಭಿಮಾನಿಗಳು ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ರಸ್ತೆಯಲ್ಲಿ ನೆಚ್ಚಿನ ಆಟಗಾರನ ಚಿತ್ರವನ್ನು ಕಾಣಬಹುದು. ಜತೆಗೆ ನೇಯ್ಮರ್ ಸೇರಿದಂತೆ ಪ್ರಮುಖ ಆಟಗಾರರ ಕಟೌಟ್‌ಗಳು ರಾರಾಜಿಸುತ್ತಿವೆ. ರಿಯೋ ಡಿ ಜನೈರೋವಂತೂ ಅಲಂಕಾರದಿಂದ ಜಾತ್ರೆಯಂತೆ ಕಾಣುತ್ತಿದೆ.
ಜನಪ್ರಿಯ ಮೆಸ್ಸಿ ಕಟ್ಟಿಂಗ್
ಅರ್ಜೆಂಟೀನಾ ತಂಡದ ಲಯೋನೆಲ್ ಮೆಸ್ಸಿ ಹೇರ್‌ಕಟ್ಟಿಂಗ್ ಸರ್ಬಿಯಾದಲ್ಲಿ ಫೇಮಸ್ ಆಗಿದೆ. ಸರ್ಬಿಯಾದ ಬಾರ್ಬರ್ ಮರಿಯೋ ಹವಾಲಾ ತಮ್ಮ ಕೈಚಳಕವನ್ನು ಅಭಿಮಾನಿಗಳ ತಲೆ ಮೇಲೆ ಕೆತ್ತಿದ್ದಾರೆ.
ಹೇಮಂತ್ ಸಂಪಾಜೆ