Advertisement

ಫ‌ುಟ್‌ಬಾಲ್‌ ಆಟಗಾರರಿಗೆ ಮೆದುಳು ರೋಗದ ಪ್ರಮಾಣ ಜಾಸ್ತಿ

03:45 AM Feb 17, 2017 | Team Udayavani |

ಲಂಡನ್‌: ಫ‌ುಟ್‌ಬಾಲ್‌ ಆಡುವುದರಿಂದ ಮೆದುಳು ರೋಗ ಬರುತ್ತದೆಯೇ? ಈ ಸಾಧ್ಯತೆ ಜಾಸ್ತಿಯಿದೆ ಎಂದು ಹೇಳುತ್ತದೆ ಒಂದು ಸಮೀಕ್ಷೆ. ಲಂಡನ್ನಿನ ಆಕ್ಟಾ ನ್ಯೂರೋಪ್ಯಾಥೋಲಾಜಿಕಾ ಎಂಬ ನಿಯತಕಾಲಿಕೆಯಲ್ಲಿ ಲಂಡನ್‌ ಇನ್‌ಸ್ಟಿಟ್ಯೂಟ್‌ ಆಫ್ ನ್ಯೂರೋಲಜಿ ಎಂಬ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆ ಪ್ರಕಟವಾಗಿದೆ. 

Advertisement

ಅದರಲ್ಲಿ ಈ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಚಿಕ್ಕವಯಸ್ಸಿನಿಂದ ಚೆಂಡನ್ನು ತಲೆಯಿಂದ ಹೊಡೆಯುವ ಅಭ್ಯಾಸವನ್ನು ಫ‌ುಟ್‌ಬಾಲ್‌ ಆಟಗಾರರು ಮಾಡುವುದರಿಂದ ಮೆದುಳು ರೋಗ ಅಥವಾ ಡಿಮೆಂಷಿಯಾ ಬರುತ್ತದೆ ಎನ್ನುವುದು ಸಮೀಕ್ಷೆ ಮಾಡಿದವರ ಅಭಿಪ್ರಾಯ.

ಇದಕ್ಕಾಗಿ ಅವರು 14 ಮಂದಿ ನಿವೃತ್ತ ಫ‌ುಟ್‌ಬಾಲ್‌ ಆಟಗಾರರನ್ನು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಒಬ್ಬರು ಹವ್ಯಾಸಿ ಆಟಗಾರರಾಗಿದ್ದಾರೆ. ಈ ಎಲ್ಲ ಆಟಗಾರರನ್ನು 1980ರಿಂದ 2010ರವರೆಗೆ ಇಂಗ್ಲೆಂಡ್‌ನ‌ ಸೌಥ್‌ ವೇಲ್ಸ್‌ನಲ್ಲಿ ನಿರಂತರ ಪರಿಶೀಲನೆಯಲ್ಲಿಡಲಾಗಿತ್ತು. ಈ ಎಲ್ಲ ಆಟಗಾರರು ಸರಾಸರಿ 26ನೇ ವಯಸ್ಸಿನಿಂದ ಫ‌ುಟ್‌ಬಾಲ್‌ ಆಡಲು ಶುರು ಮಾಡಿದ್ದರು. ಇವರೆಲ್ಲರಿಗೆ 60ನೇ ವಯಸ್ಸಿನ ಮಧ್ಯಭಾಗದಲ್ಲಿದ್ದಾಗಲೇ ಡಿಮೆಂಷಿಯಾ ಶುರುವಾಗಿದೆ. 

ಸಾಮಾನ್ಯ ಜನರಿಗೆ ಸರಾಸರಿ 70ನೇ ವಯಸ್ಸಿನ ಮಧ್ಯಭಾಗದಲ್ಲಿ ಡಿಮೆಂಷಿಯಾ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ತೀವ್ರ ಪ್ರಮಾಣದ ಡಿಮೆಂಷಿಯಾದ ಪರಿಣಾಮ ಅಧ್ಯಯನಕ್ಕೊಳಗಾಗದ 14 ಮಂದಿ ಫ‌ುಟ್‌ಬಾಲಿಗರಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 6 ಮಂದಿಯ ಮರಣೋತ್ತರ ಪರೀಕ್ಷೆಯಲ್ಲಿ ಡಿಮೆಂಷಿಯಾ ತೀವ್ರ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ.

ಏಕೆ ಬರುತ್ತದೆ?: ಬಹುತೇಕ ಆಟಗಾರರು ತಮ್ಮ ಬಾಲ್ಯದಿಂದಲೇ ಚೆಂಡನ್ನು ತಲೆಯಿಂದ ಹೊಡೆಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಮೆದುಳು ರೋಗಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು. ಅಮೆರಿಕದ ಫ‌ುಟ್‌ಬಾಲ್‌ ಆಟಗಾರರಲ್ಲಿ ಇದರ ಪ್ರಮಾಣ ಜಾಸ್ತಿಯಿದೆ. ತಲೆಗೆ ಸತತವಾಗಿ ಏಟು ತಿನ್ನುವ ಬಾಕ್ಸರ್‌ಗಳಲ್ಲೂ ಇದು ಗರಿಷ್ಠ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ಸಮೀಕ್ಷೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next