ಬೆಳ್ತಂಗಡಿ: ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನರಾ ಗಿರುವ ಭಗವಾನ್ ಬಾಹುಬಲಿ ಸ್ವಾಮಿಗೆ ಮಂಗಳವಾರ ಬೆಳಗ್ಗೆ ಭವ್ಯ ಅಗ್ರೋದಕ ಮೆರವಣಿಗೆಯ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.
ಮಂಗಲ ಪ್ರವಚನ ನೀಡಿದ ಕಾರ್ಕಳದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಭಗವಾನ್ ಬಾಹುಬಲಿ ಮೂರ್ತಿಯ ಆರಾಧನೆಯಿಂದ ತ್ಯಾಗ, ಅಹಿಂಸೆ, ಸಂಯಮ, ಇಂದ್ರಿಯ ನಿಗ್ರಹ ಗುಣಗಳು ಉದ್ದೀಪನಗೊಂಡು ಶಾಂತಿ, ಸಾಮರಸ್ಯ ಮೂಡಿ ಬರುತ್ತದೆ ಎಂದರು.
ಕ್ಷುಲ್ಲಕ ಧ್ಯಾನಸಾಗರ್ ಮಹಾರಾಜ್ ಆಶೀರ್ವಚನ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೆಂದ್ರ ಕುಮಾರ್, ಸುಪ್ರಿಯಾ ಹರ್ಷೆಂದ್ರ ಕುಮಾರ್, ಡಾ| ಬಿ.ಯಶೋವರ್ಮ, ಸೋನಿಯಾ ವರ್ಮ ಮತ್ತು ಕುಟುಂಬಸ್ಥರು ಪಾದಾಭಿಷೇಕ ನಡೆಸಿದರು.
ಶಿಶಿರ ಇಂದ್ರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಮಂಗಳದ್ರವ್ಯ ಪುಷ್ಪಾರ್ಚನೆ: ಬೆಳಗ್ಗೆ 9 ಗಂಟೆಗೆ ಹೆಗ್ಗಡೆಯವರ ಬೀಡಿನಿಂದ ಅಗ್ರೋದಕ ಮೆರವಣಿಗೆ ಬಾಹುಬಲಿ ಬೆಟ್ಟಕ್ಕೆ ಸಾಗಿತು. ಪಂಚನಮಸ್ಕಾರ ಮಂತ್ರ ಪಠಣ, ಜಿನ ಭಜನೆ ಮತ್ತು ಭಕ್ತಿಗೀತೆಗಳ ಗಾಯನದ ನಡುವೆ ಭಗವಾನ್ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.
ಕ್ಷೀರಾಭಿಷೇಕ, ಸೀಯಾಳಾಭಿಷೇಕ, ಅಕ್ಕಿಹಿಟ್ಟು, ಗಂಧ, ಚಂದನ ಬಳಿಕ ಚತುಷೊಣ ಕಲಶಾಭಿಷೇಕ ನಡೆದು ಪುಷ್ಪವೃಷ್ಟಿಯೊಂದಿಗೆ ಪೂರ್ಣಕುಂಭ ಅಭಿಷೇಕ ನಡೆದು ಮಹಾಮಂಗಳಾರತಿಯೊಂದಿಗೆ ಪೂರ್ಣಗೊಂಡಿತು.