ಬೆಳಗಾವಿ : ರಾಜ್ಯವನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಪಶುಸಂಗೋಪನೆ ಇಲಾಖೆ ಸಂಕಲ್ಪ ತೊಟ್ಟಿದೆ ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್ ಹೇಳಿದರು. ಕಿತ್ತೂರಿನ ದಾಸ್ತಿಕೊಪ್ಪದಲ್ಲಿ ಕಾಲುಬಾಯಿ ರೋಗಕ್ಕೆ ಎರಡನೇ ಹಂತದ ಲಸಿಕಾ ಅಭಿಯಾನಕ್ಕೆ ಅವರು ಇಂದು ಚಾಲನೆ ನೀಡಿ ಮಾತನಾಡಿದರು.
ಕಾಲುಬಾಯಿರೋಗದ ಎರಡನೇ ಹಂತದ ಲಸಿಕಾ ಅಭಿಯಾನ 15 ಜಿಲ್ಲೆಗಳಲ್ಲಿ ನಡೆಯಲಿದ್ದು, ಇದರ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ಕಾಲುಬಾಯಿ ರೋಗಕ್ಕೆ ನಿಯಮಿತವಾಗಿ ಲಸಿಕಾ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ಏಕಕಾಲಕ್ಕೆ ಇಡೀ ದೇಶದಲ್ಲಿ ಲಸಿಕಾ ಅಭಿಯಾನ ಕೇಂದ್ರ ಹಮ್ಮಿಕೊಂಡಿದ್ದರಿಂದ ಸ್ವಲ್ಪ ವಿಳಂಬವಾಯಿತು ಎಂದು ಅವರು ಹೇಳಿದರು.
ರಾಜ್ಯದ 12 ಜಿಲ್ಲೆಗಳಲ್ಲಿ ಎರಡನೇ ಹಂತದ ಕಾಲುಬಾಯಿ ರೋಗಕ್ಕೆ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಗದಗ, ಧಾರವಾಡ, ದಾವಣಗೆರೆ, ಕೊಪ್ಪಳ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಉತ್ತರಕನ್ನಡ, ಕೊಡಗು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ.
ಕಿತ್ತೂರಿನ ದಾಸ್ತಿಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿತ್ತೂರಿನ ಶಾಸಕರಾದ ಮಹಾಂತೇಶ್ ದೊಡ್ಡಗೌಡರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ರಾಮಣಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಇದನ್ನೂ ಓದಿ : ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಮಸ್ಯೆ ಶೀಘ್ರ ಪರಿಹರಿಸಲು ಕಾರ್ಮಿಕ ಸಚಿವರ ಸೂಚನೆ
ರಾಜ್ಯದಲ್ಲಿ ಕಾಲುಬಾಯಿ ರೋಗಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಲಸಿಕೆ ಲಭ್ಯವಿದೆ. ಜಾನುವಾರುಗಳ ಆರೋಗ್ಯ ರಕ್ಷಣೆಗೆ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.