ನವದೆಹಲಿ: ದೇಶದ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ಟಿಬೆಟ್ ಮತ್ತು ತೈವಾನ್ ಚೀನಾದ ಭಾಗಗಳೆಂದು ಒಪ್ಪಿಕೊಂಡಿದ್ದೇವೆ ಎಂಬುದಾಗಿ ಮಾಜಿ ಕೇಂದ್ರ ಸಚಿವ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಸ್ವಾತಂತ್ರ್ಯದ ಅಮೃತೋತ್ಸವ : 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ : ಎನ್.ರವಿಕುಮಾರ್
ಗಡಿ ನಿಯಂತ್ರಣ ಪ್ರದೇಶದಲ್ಲಿಯೂ ಪರಸ್ಪರ ಮಾಡಿಕೊಂಡ ಒಪ್ಪಂದವನ್ನೂ ಚೀನಾ ಗೌರವಿಸುತ್ತಿಲ್ಲ. ಅಷ್ಟೇ ಅಲ್ಲ ಲಡಾಖ್ ನ ಕೆಲ ಭೂ ಭಾಗಗಳನ್ನು ಕಬಳಿಸುತ್ತಿದೆ ಎಂದು ದೂರಿದರು. ಲಡಾಖ್ ಪ್ರದೇಶದಲ್ಲಿ ಚೀನಾ ಭೂ ಕಬಳಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಗಡಿಯೊಳಗೆ ಯಾರೂ ಬಂದಿಲ್ಲ ಎಂದು ಹೇಳುತ್ತಿರುವುದಾಗಿ ಟೀಕಿಸಿದರು.
ನೆಹರು ಮತ್ತು ವಾಜಪೇಯಿ ಅವರ ಮೂರ್ಖತನದಿಂದಾಗಿ ನಾವು ಭಾರತೀಯರು ಟಿಬೆಟ್ ಮತ್ತು ತೈವಾನ್ ಚೀನಾದ ಭಾಗ ಎಂದು ತಿಳಿದುಕೊಂಡಿದ್ದೇವೆ. ಸಾಮ್ರಾಜ್ಯಶಾಹಿ ಚೀನಾ ಜಗತ್ತಿನ ಎಲ್ಲಾ ಕಡೆ ಭೂ ಪ್ರದೇಶಗಳನ್ನು ಕಬಳಿಸುತ್ತಿದೆ ಎಂದು ಸ್ವಾಮಿ ಹೇಳಿದರು.
ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಚೀನಾದ ಪ್ರಬಲ ವಿರೋಧದ ನಡುವೆಯೂ ತೈವಾನ್ ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಈ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.