Advertisement

ಮೂರ್ಖ ರಾಜಕುಮಾರರು

06:00 AM Nov 15, 2018 | |

ಬಹಳ ಹಿಂದೆ ಅಮರ ಶಕ್ತಿ ಎಂಬ ಒಬ್ಬ ರಾಜನಿದ್ದ. ಅವನು ಶೂರ, ವಿವೇಕಿ. ಆದರೆ ಅವನಿಗೆ ತುಂಬಾ ದುಃಖ ಉಂಟಾಗಿತ್ತು. ಯಾಕೆಂದರೆ ಅವನ ಮೂವರು ಗಂಡು ಮಕ್ಕಳು ಹೆಡ್ಡರು . ಆ ರಾಜಕುಮಾರರ ಹೆಸರು ಬಾಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ. ಶಕ್ತಿ ಅಂದರೆ ಬಲ. ಅವರ ಹೆಸರಿನಲ್ಲಿತ್ತೇ ಹೊರತು ಅವರ ಬುದ್ಧಿಯಲ್ಲಿರಲಿಲ್ಲ. ಅವರ ದಡ್ಡತನವೇ ರಾಜನ ಚಿಂತೆಗೆ ಕಾರಣವಾಗಿತ್ತು.

Advertisement

ಸತ್ತ ಮಕ್ಕಳಿಗಿಂತಲೂ,  ಕೆಲಸಕ್ಕೆ ಬಾರದಂಥ ಬರುಕಿರುವ ಮಕ್ಕಳು, ತಂದೆಗೆ ದುಃಖವನ್ನುಂಟು ಮಾಡುತ್ತಾರೆ  ಎಂಬ ಮಾತಿನಲ್ಲಿ  ಎಷ್ಟು ಸತ್ಯವಿದೆ! ಬಹುಶಃ ಸರಿಯಾದ ಶಿಕ್ಷಣ ಮೊದ್ದುತಲೆಯ ನನ್ನ ಮಕ್ಕಳನ್ನು ಸುಧಾರಿಸಬಹುದು. ನನ್ನ ಆಸ್ಥಾನದಲ್ಲಿರುವ ವಿದ್ವಾಂಸರಲ್ಲಿ  ಯಾರೊಬ್ಬರಾದರೂ ನನ್ನ ಮಕ್ಕಳ ಬುದ್ಧಿವಂತರನ್ನಾಗಿ ಮಾಡಲಾರರೇ.? ಎಂದು ಒಂದು ದಿನ ರಾಜ ತನ್ನ ಮಂತ್ರಿಗಳನ್ನು ಕೇಳಿದ.

ನಿಜ, ಪ್ರಭು. ರಾಜಕುಮಾರರಿಗೆ ತಕ್ಕ ಶಿಕ್ಷಣ ಕೊಡಿಸಬೇಕು. ಆದರೆ ಅದು ಶಾಸ್ತ್ರದ ಪ್ರಕಾರವಾಗಿ ಇರಬೇಕು. ಮೊದಲು ವ್ಯಾಕರಣದಿಂದ ಆರಂಭಿಸಿ ಕ್ರಮವಾಗಿ ಉಳಿದ ಶಾಸ್ತ್ರಗಳನ್ನು ಕಲಿಸಬೇಕು. ಎಂದ ಒಬ್ಬ ಮಂತ್ರಿ. ಆದರೆ ಅವೆಲ್ಲ ಬಹಳ ಸಮಯ ತೆಗೆದುಕೊಳ್ಳುತ್ತವೆ. ಪ್ರಖ್ಯಾತ ವಿದ್ವಾಂಸನಾದ  ವಿಷ್ಣುಶರ್ಮನಿಗೆ ಸುಲಭದ ದಾರಿ ಗೊತ್ತಿರುತ್ತದೆ, ಎಂದ ಇನ್ನೊಬ್ಬ ಮಂತ್ರಿ.  ಅಮರಶಕ್ತಿ ವಿದ್ವಾಂಸ ವಿಷ್ಣುಶರ್ಮನಿಗೆ ಹೇಳಿ ಕಳುಹಿಸಿದ.

ವಿಷ್ಣುಶರ್ಮ, ನನ್ನ ಮಕ್ಕಳ ವಿದ್ಯಾಭ್ಯಾಸವನ್ನು ನಿನಗೆ ಒಪ್ಪಿಸಿದ್ದೇನೆ. ಇದಕ್ಕೆ ನಿನಗೆ ಸೂಕ್ತ ಬಹುಮಾನ ಕೊಡುತ್ತೇನೆ, ಎಂದ ರಾಜ. 
ದೊರೆಯೆ, ಈ ಮಕ್ಕಳಿಗೆ ನಾನು ಸಂತೋಷದಿಂದ ವಿದ್ಯೆ ಬುದ್ಧಿ ಕಲಿಸುತ್ತೇನೆ. ಆದರೆ ನಾನು ಯಾವುದೇ ರೀತಿಯ ಬಹುಮಾನ ತೆಗೆದು ಕೊಳ್ಳುವುದಿಲ್ಲ. ನಾನು ಜ್ಞಾನವನ್ನು ಮಾರಾಟಕ್ಕೆ ಇಟ್ಟಿಲ್ಲ, ಎಂದು ಉತ್ತರಕೊಟ್ಟ ವಿಷ್ಣುಶರ್ಮ.

ರಾಜ ಒಪ್ಪಿಕೊಂಡ. ಈ ಘನ ವಿದ್ವಾಂಸ ಮೂವರು ರಾಜಕುಮಾರರಿಗೆ ಶಾಸ್ತ್ರಗಳನ್ನಾಗಲಿ, ವ್ಯಾಕರಣವನ್ನಾಗಲೀ ಹೇಳಿಕೊಡಲಿಲ್ಲ. ಅದರ ಬದಲು ಆತ ಅವರಿಗೆ ವಿವೇಕ, ವಿಚಾರ ತುಂಬಿದ ಕತೆಗಳನ್ನು ಹೇಳಿದ.  ಮಕ್ಕಳಿಗೆ ಸಕ್ಕರೆ ಹಚ್ಚಿದ ಕಹಿಗುಳಿಗೆಗಳನ್ನು ಕೊಡುವ ವೈದ್ಯನಂತೆ ಆತ ಈ ಕತೆಗಳನ್ನು ಹೇಳುತ್ತಿದ್ದ. ಕೇವಲ ಆರು ತಿಂಗಳ ಕಾಲದಲ್ಲಿ ರಾಜಕುಮಾರರು ಬಹಳಷ್ಟು ಬುದ್ಧಿವಂತಿಕೆ ಗಳಿಸಿದರು.

Advertisement

ವಿಷ್ಣು ಶರ್ಮ ಹೇಳಿದ ಈ ಕಥೆಗಳನ್ನು  ಐದು ಭಾಗಗಳನ್ನಾಗಿ ವಿಂಗಡಿಸಿದೆ. ಈ ಐದೂ ಸೇರಿರುವ ಪಂಚತಂತ್ರ ಎಂಬ ಸಂಗ್ರಹ ಜಗತ್ತಿನ ಶ್ರೇಷ್ಠ ಕಥೆಗಳಲ್ಲಿ ಒಂದುಎಂದು ಹೆಸರು ಪಡೆದಿದೆ. ಅವು ಪ್ರಾಣಿಗಳು, ಹಕ್ಕಿಗಳು, ಹಾವು ಮುಂತಾದ ಸರೀಸೃಪಗಳು ಮತ್ತು ಮನುಷ್ಯರನ್ನು ಕುರಿತ ಸೊಗಸಾದ ಕಥೆಗಳು. ಲೋಕದ ರೀತಿನೀತಿಗಳನ್ನು ತಿಳಿಯಲು , ಒಳ್ಳೆಯದು ಕೆಟ್ಟದನ್ನು ಗುರುತಿಸಲು, ಉತ್ತಮವಾದ, ಸುಖವಾದ ಬದುಕನ್ನು ಬಾಳಲು ಸಹಾಯ ಮಾಡುವಂಥ ನೀತಿ ಕತೆಗ ಸಂಗ್ರಹ ಪಂಚತಂತ್ರ.

 (ಓರಿಯೆಂಟಲ್‌ ಲಾಂಗ್‌ಮನ್‌ ಪಂಚತಂತ್ರ ಪುಸ್ತಕದಿಂದ ಆರಿಸಿದ್ದು)

Advertisement

Udayavani is now on Telegram. Click here to join our channel and stay updated with the latest news.

Next