ಬೆಂಗಳೂರು: ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರ ಪದಾರ್ಥಗಳ ದುಬಾರಿ ಬೆಲೆ ಹಾಗೂ ಹೊರಗಿನ ಪದಾರ್ಥಗಳಿಗೆ ನಿರ್ಬಂಧ ಹೇರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಆದಿನಾರಾಯಣ ಶೆಟ್ಟಿ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ಧ ವಿಭಾಗೀಯ ನ್ಯಾಯಪೀಠ, ಈ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಕಾನೂನಿನಲ್ಲಿ ಇರುವ ಅಧಿಕಾರದ ಬಗ್ಗೆ ವಿವರಣೆ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಅ.10ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ಮಲ್ಪಿಫ್ಲೆಕ್ಸ್‌ಗಳಿಗೆ ಜನರು ಸಿನಿಮಾ ನೋಡಲು ಹೋದರೆ ಅಲ್ಲಿಯ ಮಳಿಗೆಗಳಲ್ಲಿಯೇ ಆಹಾರ ಪದಾರ್ಥಗಳನ್ನು ಖರೀದಿಸಬೇಕಿದೆ. ಆದರೆ, ಹೆಚ್ಚಿನ ಬೆಲೆ ವಿಧಿಸಿ. ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿದೆ. ಇನ್ನು ಹೊರಗಿನಿಂದ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ನಿರ್ಬಂಧ ಹೇರಲಾಗಿದೆ.ಇದು “ಕರ್ನಾಟಕ ಸಿನಿಮಾ ನಿಯಂತ್ರಣ ಅಧಿನಿಯಮಗಳು-2014′ ಮತ್ತು ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದೆ ಎಂದು ದೂರಿದರು.
ಆದ್ದರಿಂದ, ರಾಜ್ಯದ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‌ಗಳಲ್ಲಿ ದುಬಾರಿಯಾಗಿರುವ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸಬೇಕು. ಅದೇ ರೀತಿ ಮಲ್ಟಿಪ್ಲೆಕ್ಸ್‌ಗಳಿಗೆ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರೀಕರು ತಮಗೆ ಬೇಕಾದ ಆಹಾರಗಳನ್ನು ಹೊರಗಿನ ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಆ.18ರಂದು ಸರ್ಕಾರಕ್ಕೆ ಮನವಿ ಪತ್ರ ನೀಡಲಾಗಿದೆ. ಅದನ್ನು ಪರಿಗಣಿಸಿ ಅಗತ್ಯ ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ನಿಯಂತ್ರಣ ಪ್ರಾಧಿಕಾರ (ಕ್ರಮ ಕೈಗೊಳ್ಳುವ ಅಧಿಕಾರಿ) ಯಾರು? ಎಂದು ಪ್ರಶ್ನಿಸಿತು. ಜಿಲ್ಲಾಧಿಕಾರಿಗಳು ಎಂದು ಅರ್ಜಿದಾರರ ಪರ ವಕೀಲ ಸುನೀಲ್ ಕುಮಾರ್ ಉತ್ತರಿಸಿದರು. ಹಾಗಾದರೆ, ಜಿಲ್ಲಾಧಿಕಾರಿಗಳಿಗೆ ಕಾನೂನಿನಲ್ಲಿ ಇರುವ ಅಧಿಕಾರದ ಬಗ್ಗೆ ವಿವರಣೆ ಸಲ್ಲಿಸುವಂತೆ ಸೂಚಿಸಿ ಅರ್ಜಿಯ ವಿಚಾರಣೆ ಮುಂದೂಡಿತು.