Advertisement
ಮನುಷ್ಯ ಜನ್ಮವು ಎಲ್ಲ ಜೀವಿಗಳಿಗಿಂತ ಶ್ರೇಷ್ಠ ವಾದ ಜನ್ಮವಾಗಿರುತ್ತದೆ. ಮಾನವನ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಿಗೆ ಆರೋ ಗ್ಯವೇ ಮೂಲ ವಾಗಿ ರುತ್ತದೆ. ಈ ಜೀವನವನ್ನು ನಾವು ಅನೇಕ ಒಳ್ಳೆಯ ಸಾಧನೆಗಳನ್ನು ಮಾಡುವುದಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು.
Related Articles
Advertisement
ಉತ್ತರಾಯಣದಲ್ಲಿ (ಆದಾನ ಕಾಲ) ಶಿಶಿರ, ವಸಂತ ಮತ್ತು ಗ್ರೀಷ್ಮ ಋತುಗಳು ಬರುತ್ತವೆ. ದಕ್ಷಿಣಾಯಣದಲ್ಲಿ (ವಿಸರ್ಗ ಕಾಲ) ವರ್ಷಾ, ಶರದ್ ಮತ್ತು ಹೇಮಂತ ಋತುಗಳು ಬರುತ್ತವೆ. ಬೇಸಗೆ ಕಾಲವು ವಸಂತ ಮತ್ತು ಗ್ರೀಷ್ಮ ಋತು ಗಳನ್ನು ಒಳಗೊಂಡಿರುತ್ತದೆ. ಆದಾನ ಕಾಲದಲ್ಲಿ ಸೂರ್ಯನು ಪ್ರಖರವಾಗಿರುವುದರಿಂದ ತಾಪವು ಏರುತ್ತಾ ಹೋಗಿ ಹಗಲು ದೀರ್ಘವಾಗಿ ಪ್ರಕೃತಿ ಯಲ್ಲಿ ಉಷ್ಣತೆಯು ಜಾಸ್ತಿಯಾಗುತ್ತದೆ. ಇದರಿಂದಾಗಿ ನೀರಿನ ಅಂಶವೂ ಬತ್ತಿ ಹೋಗುತ್ತದೆ.
ವಸಂತ ಋತುವನ್ನು ಬೇಸಗೆಯಂತಲೂ ಮತ್ತು ಗ್ರೀಷ್ಮ ಋತುವನ್ನು ಕಡುಬೇಸಗೆಯೆಂದು ವಿಭಾಗಿಸಬಹುದು. ಹೀಗಾಗಿ ನಾವು ಬೇಸಗೆ ಪ್ರಾರಂಭದಲ್ಲಿ ವಸಂತ ಋತುಚರ್ಯೆಯನ್ನು ಮತ್ತು ಅನಂತರದಲ್ಲಿ ಗ್ರೀಷ್ಮ ಋತುವಿನಲ್ಲಿ ಗ್ರೀಷ್ಮ ಋತುಚರ್ಯೆಯನ್ನು ಪಾಲಿಸಬೇಕು.
ಈ ಕಾಲದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಈ ಕೆಳಗೆ ವಿವರಿಸಿದ ಆಹಾರವನ್ನು ಸೇವಿಸಿದರೆ ಆರೋಗ್ಯ ರಕ್ಷಣೆ ಸಾಧ್ಯ.
ಹಳೆಯ ಧಾನ್ಯಗಳು: ಹಳೆಯದಾದ ಅಕ್ಕಿ, ಗೋಧಿ, ಹೆಸರುಬೇಳೆ, ಬಾರ್ಲಿ ಮುಂತಾದ ಧಾನ್ಯ ಗಳನ್ನು ಬಳಸಿ ತಯಾರಿಸಿದ ಖಾದ್ಯಗಳನ್ನು ಸೇವಿಸಬೇಕು. ಕೆಂಪು ಅಕ್ಕಿಯ ಅನ್ನವನ್ನು ತಿಳಿಯಾದ ಸಾರು ಮತ್ತು ಮಜ್ಜಿಗೆಯ ಜತೆ ತೆಗೆದು ಕೊಳ್ಳಬ ಹುದು. ಎಣ್ಣೆಯ ಜಿಡ್ಡಿನಿಂದ ಕೂಡಿದ ಆಹಾರವು ಒಳ್ಳೆಯದಲ್ಲ.
ತರಕಾರಿಗಳು: ಪಡವಲಕಾಯಿ, ಹೀರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಮೂಲಂಗಿ, ಟೊಮೇಟೊ, ಈರುಳ್ಳಿ ಇತ್ಯಾದಿ ತರಕಾರಿಗಳು ಉತ್ತಮ. ಸೌತೆಕಾಯಿ, ಕ್ಯಾರೆಟ್, ಬೀಟ್‌ರೂಟ್ ಇತ್ಯಾದಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಹಸಿಯಾಗಿ ಸೇವಿಸಬೇಕು.
ಅಂಬಲಿಗಳು: ಬಿಳಿಜೋಳದ ಹಿಟ್ಟಿನ ಅಂಬಲಿ, 2 ಚಮಚ ಹಿಟ್ಟನ್ನು ಒಂದು ಗ್ಲಾಸ್ ನೀರಿನಲ್ಲಿ ಕುದಿಸಿ, ಮಜ್ಜಿಗೆ, ಉಪ್ಪು, ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯಬೇಕು. ಈ ರೀತಿಯಾಗಿ ರಾಗಿ ಅಂಬಲಿ, ಅಕ್ಕಿ ಅಂಬಲಿ, ಬಾರ್ಲಿ ಅಂಬಲಿ, ಕಾರ್ನ್ಫ್ಲೋರ್ ಅಂಬಲಿ ಮಾಡಬಹುದು.
ಪಾನಕಗಳು: ತಣ್ಣಗಿನ ಸಿಹಿಯಾಗಿರುವ ಕೋಕಂ ಪಾನಕ, ಸೊಗದೇ ಬೇರಿನ, ಕಲ್ಲಂಗಡಿ, ಕರಬೂಜ, ಮಾವಿನ ಹಣ್ಣಿನ ಪಾನಕಗಳನ್ನು ಸೇವಿಸ ಬೇಕು. ಇತರ ಎಲ್ಲ ಹಣ್ಣುಗಳ ರಸಗಳು ತುಂಬಾ ಶಕ್ತಿಯನ್ನು ನೀಡುತ್ತವೆ.
ರಸಾಲಗಳು: ಇದನ್ನು ಒಂದು ವಿಶೇಷವಾದ ಪೇಯ ಎಂದು ವಿವರಿಸಿದ್ದಾರೆ. ಮೊಸರಿ ನಲ್ಲಿ ಸಕ್ಕರೆ, ಶುಂಠಿ, ಕಾಳುಮೆಣಸು ಮತ್ತು ಜೀರಿಗೆಯನ್ನು ಸೇರಿಸಿ ಕಡೆದು ಸೇವಿಸಬೇಕು. ಇದು ಇಂದಿನ ಆಧುನಿಕ ಯುಗದಲ್ಲಿ Masala Lassi, Sweet Lassi, Mango Lassi ಇತ್ಯಾದಿ ರೂಪದಲ್ಲಿ ಲಭ್ಯವಿದೆ. ಸುಲಭವಾಗಿ ಸಕ್ಕರೆ, ಉಪ್ಪು ಬೆರೆಸಿದ ಮಜ್ಜಿಗೆ ಸೇವಿಸಬಹುದು.
ಮಂಥಗಳು: ಪಂಚಸಾರ(ದ್ರಾಕ್ಷಾ, ಮಧೂಕ, ಖರ್ಜೂರ, ಕಾಶ್ಮರ್ಯ ಮತ್ತು ಪರೂಷಕದ) ಮಂಥವನ್ನು ಸೇವಿಸಬೇಕು. ಇದನ್ನೇ ಈ ಕಾಲದಲ್ಲಿ Dryfruits Milk Shake ಎಂದು ಕರೆಯುತ್ತಾರೆ.
ಸೂಪುಗಳು: ವಿವಿಧ ತರಕಾರಿಗಳು ಮತ್ತು ಮೆಕ್ಕೆಜೋಳ (Corn Flour)ದ ಹಿಟ್ಟಿನಿಂದ ಮಾಡಿದ ಸೂಪುಗಳನ್ನು ಸೇವಿಸಬೇಕು. ಕರ್ಪೂರ ಮುಂತಾದ ಸುಗಂಧಿತ ದ್ರವ್ಯಗಳಿಂದ ಕೂಡಿದ ಶೀತಲ ನೀರನ್ನು ಸೇವಿಸಬೇಕು.
ವಿಹಾರಪ್ರಾತಃಕಾಲ ಪಾದಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಅಭ್ಯಂಗ ಮಾಡಬೇಕು. ಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಬೇಕು. ಸ್ನಾನದ ಬಳಿಕ ಶ್ರೀಗಂಧ, ಉಶಿರಾ, ಗೋಪಿಚಂದನಗಳನ್ನು ಲೇಪಿಸಬೇಕು. ಸಂಜೆ ಸುಂದರವಾದ ಉದ್ಯಾನವನದಲ್ಲಿ ವಿಹರಿಸಬೇಕು. ಅತಿಯಾದ ವ್ಯಾಯಾಮ ಮಾಡಬಾರದು. ಬಿಸಿಲಿನಲ್ಲಿ ತಿರುಗಾಡಬಾರದು. ಹಗಲಿನ ಸಮಯದಲ್ಲಿ ಮಲಗಿಕೊಳ್ಳಬಾರದು. ರಾತ್ರಿ ವೇಳೆ ಚಂದ್ರನನ್ನು ಆಹ್ಲಾದಿಸಬೇಕು. ಈ ರೀತಿಯಾದ ಜೀವನಶೈಲಿಯನ್ನು ಬೇಸಗೆ ಕಾಲದಲ್ಲಿ ನಾವು ಅನುಸರಿಸುವುದರಿಂದ ಬೇಸಗೆಯ ತಾಪದಿಂದ ರಕ್ಷಿಸಿಕೊಂಡು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. – ಡಾ| ಪ್ರೀತಿ ಪಾಟೀಲ್
ಮಣಿಪಾಲ