Advertisement

ಆಹಾರ ಸುರಕ್ಷತೆ, ಗುಣಮಟ್ಟ ಕಾಯ್ದೆ; ಕಾರ್ಕಳದಲ್ಲಿ 1,334 ನೋಂದಣಿ, 657 ಪರವಾನಿಗೆ

07:10 PM Feb 02, 2020 | Sriram |

ಅಸುರಕ್ಷಿತ ಆಹಾರ ಪೂರೈಕೆ ಮತ್ತು ಕಲಬೆರಕೆ ತಡೆಗಟ್ಟುವುದರೊಂದಿಗೆ ಗುಣಮಟ್ಟದ ಆಹಾರ ಪದಾರ್ಥ ಒದಗಿಸಬೇಕೆನ್ನುವ ಕಾಯ್ದೆ ಜಾರಿಗೊಂಡಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಕಾಯ್ದೆ ಜಾರಿಗೊಂಡಿದ್ದು, ಉತ್ತಮ ಆಹಾರ, ಆರೋಗ್ಯಕ್ಕೆ ಪೂರಕವಾಗಿದೆ.

Advertisement

ವಿಶೇಷ ವರದಿ-ಕಾರ್ಕಳ: ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ 2011ರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿ ಮಾಡಲಾಗಿತ್ತು. ಕಾಯ್ದೆಯಡಿ ಕಾರ್ಕಳ ತಾಲೂಕಿನಲ್ಲಿ ಈವರೆಗೆ 1,334 ಮಂದಿ ಆಹಾರ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರು ನೋಂದಣಿ ಮಾಡಿಕೊಂಡಿದ್ದು, 657 ಮಂದಿ ಪರವಾನಿಗೆ ಪಡೆದಿದ್ದಾರೆ. ಅಸುರಕ್ಷಿತ ಆಹಾರ ಪೂರೈಕೆ ಮತ್ತು ಕಲಬೆರಕೆ ತಡೆಗಟ್ಟುವುದರೊಂದಿಗೆ ಗುಣಮಟ್ಟದ ಆಹಾರ ಪದಾರ್ಥ ಒದಗಿಸಬೇಕೆನ್ನುವ ನಿಟ್ಟಿನಲ್ಲಿ ಈ ಕಾಯ್ದೆ ಜಾರಿಗೊಂಡಿದೆ.

12 ಲಕ್ಷ ರೂ. ವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಆಹಾರ ಪದಾರ್ಥಗಳ ಮಾರಾಟ ಮತ್ತು ಉತ್ಪಾದಕರು ವಾರ್ಷಿಕ 100 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, 1 ವರ್ಷ, 2 ವರ್ಷ, 3 ವರ್ಷ, 5 ವರ್ಷ ಹೀಗೆ 4 ಹಂತಗಳಲ್ಲಿ ಪರವಾನಿಗೆ ಅಥವಾ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪರವಾನಿಗೆ ಪಡೆದವರು ತಮ್ಮ ಅಂಗಡಿ, ಸಂಸ್ಥೆಗಳಲ್ಲಿ ಪ್ರಮಾಣಪತ್ರ ಪ್ರದರ್ಶಿಸಬೇಕು. ಪರವಾನಿಗೆ ಪಡೆಯುವವರೂ 2 ಸಾವಿರ ರೂ. ಪಾವತಿಸುವ ಬದಲು 100 ರೂ. ನೀಡಿ ನೋಂದಣಿ ಮಾಡುವುದೂ ಇದೆ.

ಯಾರೆಲ್ಲ ಪಡೆಯಬೇಕು?
ಹೊಟೇಲ್‌, ಬೇಕರಿ, ಕ್ಯಾಂಟೀನ್‌, ಬಾರ್‌ ಆ್ಯಂಡ್‌ ರೆಸ್ಟೋ ರೆಂಟ್‌, ವೈನ್‌ ಸ್ಟೋರ್‌, ಕ್ಲಬ್‌ಗಳು, ತಂಪು ಪಾನೀಯ ತಯಾರಿಕ ಘಟಕಗಳು, ಪ್ಯಾಕೇಜ್‌x ಡ್ರಿಂಕಿಂಗ್‌ ನೀರಿನ ಘಟಕ ಗಳು, ರಸ್ತೆ ಬದಿಯ ಆಹಾರ ವ್ಯಾಪಾರಿಗಳು, ಡಾಬಾ, ಶಾಲಾ ಕಾಲೇಜು ಕಚೇರಿಯ ಕ್ಯಾಂಟೀನ್‌, ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿ, ಸರಕಾರಿ ಮತ್ತು ಸರಕಾರೇತರ ವಸತಿ ನಿಲಯಗಳು, ಕೋಳಿ, ಮೀನು ಮತ್ತು ಮಾಂಸ ಮಾರಾಟ ಅಂಗಡಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಪ್ರಸಾದ ವಿತರಿಸುವ ಧಾರ್ಮಿಕ ಕೇಂದ್ರಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳ ಊಟದ ಸಂಯೋಜಕರು, ಕ್ಯಾಟರಿಂಗ್‌ ವ್ಯವಹಾರ ನಡೆಸುವವರು, ಮೀನು ಮತ್ತಿತರ ಆಹಾರ ಪದಾರ್ಥಗಳ ಸಾಗಣೆದಾರರು, ಆಹಾರ ಉಗ್ರಾಣ ಸಂಘಟನೆಗಳ ಎಲ್ಲ ಆಹಾರ ಸಂಸ್ಕರಣೆ ಘಟಕಗಳು ಮತ್ತು ಆಹಾರ ಪದಾರ್ಥಗಳ ಆಮದುದಾರರು, ವಹಿವಾಟುದಾರರು ನೋಂದಣಿ ಅಥವಾ ಪರವಾನಗಿ ಪಡೆದುಕೊಳ್ಳಬೇಕು.

ಜಿಲ್ಲಾ ಅಂಕಿತ ಅಧಿಕಾರಿಗಳು ಪರವಾನಿಗೆ ನೀಡುವ ಹಾಗೂ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳು ನೋಂದಣಿ ಮಾಡುವ ಅಧಿಕಾರ ಹೊಂದಿರುತ್ತಾರೆ.

Advertisement

ಸಿಬಂದಿ ಕೊರತೆ
ಆಹಾರ ಸುರಕ್ಷತಾ ಇಲಾಖೆಯಲ್ಲಿ ಸಿಬಂದಿ ಕೊರತೆ ಕಂಡುಬರುತ್ತಿದೆ. ಕಾರ್ಕಳದಲ್ಲಿ ಎಫ್ಎಸ್‌ಒ ಹುದ್ದೆ ಖಾಲಿಯಿದ್ದು, ತಾಲೂಕು ಆರೋಗ್ಯಾಧಿಕಾರಿಯವರಿಗೆ ಹೆಚ್ಚುವರಿಯಾಗಿ ಜವಾಬ್ದಾರಿ ನೀಡಲಾಗಿದೆ. ವೈದ್ಯಾಧಿಕಾರಿಯವರು ಕಾರ್ಯದೊತ್ತಡದಲ್ಲಿರುವ ಕಾರಣ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ದೂರು ದಾಖಲಾದರೂ ತತ್‌ಕ್ಷಣ ಯಾವೊಂದು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಾಗಿದೆ.

ಪ್ರಮಾಣಪತ್ರ
ತಳ್ಳುಗಾಡಿ ವ್ಯಾಪಾರಸ್ಥರು, ಜೋಳ, ಮಿಠಾಯಿ, ತರಕಾರಿ ವ್ಯಾಪಾರಸ್ಥರು ಸ್ಥಳೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರದೊಂದಿಗೆ ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ ದಾಖಲೆಗಳನ್ನು ಸಲ್ಲಿಸಿ, ಪ್ರಮಾಣಪತ್ರ ಪಡೆಯಬಹುದು. ಕೆಲವು ಆಹಾರ ಉದ್ಯಮಗಳು ಸ್ಥಳೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರದ ಜತೆಗೆ ನೀರಿನ ಪರೀಕ್ಷೆ, ಕೆಲಸಗಾರರ ವೈದ್ಯಕೀಯ ಪರೀಕ್ಷೆ ಇನ್ನಿತರ ದಾಖಲೆಗಳೊಂದಿಗೆ ಆನ್‌ಲೈನ್‌ ಶುಲ್ಕ ಪಾವತಿ ರಶೀದಿ ಲಗತ್ತಿಸಿ ದಾಖಲೆ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ 15 ದಿನಗಳಲ್ಲಿ ಪ್ರಮಾಣಪತ್ರ ಲಭಿಸುತ್ತದೆ. ಒಂದು ವೇಳೆ ನಿಯಮ ಪ್ರಕಾರ ಅಂಗಡಿಗಳು ಇಲ್ಲದಿದ್ದರೆ, ಸ್ವಚ್ಛತೆ ಕೊರತೆ ಇದ್ದರೆ ನೋಟಿಸ್‌ ನೀಡಿ ತಿಂಗಳೊಳಗೆ ಬದಲಾವಣೆ ಮಾಡಿಸಿಕೊಳ್ಳಲು ಸೂಚಿಸಬಹುದು.

ದೂರು ನೀಡಬಹುದು
ಸಾರ್ವಜನಿಕರಿಗೆ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಸಂಶಯ ಕಂಡುಬಂದಲ್ಲಿ ಕಾರ್ಕಳ ತಾಲೂಕು ವೈದ್ಯಾಧಿಕಾರಿ ಅವರಿಗೆ ದೂರು ಸಲ್ಲಿಸಬಹುದಾಗಿದೆ. ದೂರು ಆಲಿಸುವ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಹಾರ ಮಾದರಿ ಪರಿಶೀಲಿಸುತ್ತಾರೆ. ಪ್ರಯೋಗ ಶಾಲೆಯಲ್ಲಿ ಅಸುರಕ್ಷಿತ ಆಹಾರ ಅಥವಾ ಕಲಬೆರಕೆ ದೃಢಪಟ್ಟಲ್ಲಿ ಅಂತಹವರ ವಿರುದ್ಧ ಕೇಸು ದಾಖಲಾಗುತ್ತದೆ.

ಕಡ್ಡಾಯ
ಆಹಾರ ಪದಾರ್ಥಗಳ ವಹಿವಾಟುದಾರರು ಪರವಾನಿಗೆ ಪಡೆಯುವುದು ಹಾಗೂ ನೋಂದಣಿ ಮಾಡುವುದು ಕಡ್ಡಾಯ. ಆಹಾರ ಪದಾರ್ಥ ಸಾಗಾಟ ವಾಹನಗಳಿಗೂ ಪರವಾನಿಗೆ ಅಗತ್ಯವಿದೆ. ಕಂಪ್ಯೂಟರ್‌ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವವರು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಸಂಪರ್ಕಿಸಿಯೇ ಅರ್ಜಿ ಸಲ್ಲಿಸಬೇಕು.
-ಡಾ| ವಾಸುದೇವ್‌,
ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕಚೇರಿ

ಅರ್ಜಿ ಸ್ವೀಕಾರ
ಕಾರ್ಕಳ ಆರೋಗ್ಯ ಇಲಾಖೆ ಕಚೇರಿಯಲ್ಲಿ ಪ್ರತಿ ಬುಧವಾರ ನೋಂದಣಿಗಾಗಿ ಅರ್ಜಿ ಸ್ವೀಕರಿಸಲಾಗುತ್ತಿದೆ. ನೋಂದಣಿ ಮಾಡದಿರುವ ಆಹಾರ ತಯಾರಕರು, ವ್ಯಾಪಾರಿಗಳು ಕಚೇರಿಗೆ ಬಂದು ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು.
-ಡಾ| ಕೃಷ್ಣಾನಂದ ಶೆಟ್ಟಿ
ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next