ಮಂಗಳೂರು: ವಾಣಿಜ್ಯೋದ್ಯಮದಲ್ಲಿ ರಾಜ್ಯದ ಪ್ರಮುಖ ನಗರವಾಗಿ ಹೊರ ಹೊಮ್ಮುತ್ತಿರುವ ಮಂಗಳೂರಿನಲ್ಲಿ ಈಗ ಆಹಾರವಸ್ತುಗಳ ಆಮದು ಹೆಚ್ಚುತ್ತಿದ್ದು, ಆ ಹಿನ್ನೆಲೆಯಲ್ಲಿ ಮಂಗಳೂರು ಬಂದರಿಗೆ ಆಗಮಿಸುವ ಆಹಾರವಸ್ತುಗಳ ಗುಣಮಟ್ಟ ಪರಿಶೀಲನೆಗಾಗಿ ಎಫ್ ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ) ಕಾರ್ಯಾಚರಣೆ ಪ್ರಾರಂಭಿಸಿದೆ.
ರಾಜ್ಯದಲ್ಲಿ ಈ ಪ್ರಾಧಿಕಾರದ ಕಚೇರಿ ಇದುವರೆಗೆ ಬೆಂಗಳೂರಿನಲ್ಲಿ ಮಾತ್ರವೇ ಇತ್ತು. ನವ ಮಂಗಳೂರು ಬಂದರು ನಿರಂತರ ಬೆಳವಣಿಗೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಪಣಂಬೂರಿನಲ್ಲೇ ಎಫ್‌ಎಸ್‌ಎಸ್‌ಎಐ ಕಚೇರಿಯನ್ನು ತಿಂಗಳ ಹಿಂದೆಯಷ್ಟೇ ಆರಂಭಿಸಿದೆ. ಹೊರದೇಶಗಳಿಂದ ಆಮದಾಗುವ ಆಹಾರವಸ್ತುಗಳ ಪರಿವೀಕ್ಷಣೆ ನಡೆಸಿ ಅದರ ಗುಣಮಟ್ಟವನ್ನು ದೃಢಪಡಿಸುವುದು ಮುಖ್ಯ ಉದ್ದೇಶ.
ಪ್ರಕ್ರಿಯೆ ಹೇಗೆ? ಮಂಗಳೂರು ಬಂದರಿನಲ್ಲಿ ಸದ್ಯ ಆಮದಾಗುವ ಆಹಾರವಸ್ತುಗಳಲ್ಲಿ ಒಣಹಣ್ಣುಗಳೇ ಪ್ರಮುಖ. ಗೇರು ಬೀಜದ್ದು ಸಿಂಹಪಾಲು. ಹಡಗುಗಳಲ್ಲಿ ಆಗಮಿಸುವ ಆಹಾರವಸ್ತುವಿನ ಎರಡು ಮಾದರಿಗಳನ್ನು ಪಡೆಯಲಾಗುತ್ತದೆ. ಒಂದನ್ನು ಕಚೇರಿಯಲ್ಲಿ ಇರಿಸಿಕೊಂಡು ಇನ್ನೊಂದನ್ನು ಎನ್ ಎಬಿಎಲ್ ಪ್ರಮಾಣಿಕೃತ ಪ್ರಯೋ ಗಾಲಯಗಳಿಗೆ ಕಳುಹಿಸಲಾಗುತ್ತದೆ. ಸಾಮಾನ್ಯವಾಗಿ 2 ದಿನಗಳಲ್ಲಿ ಇದರ ಫಲಿತಾಂಶ ಬರುತ್ತದೆ. ಎಲ್ಲವೂ ಸರಿಯಿದ್ದರೆ ಬಂದರಿನಿಂದ ಆಹಾರವಸ್ತುವನ್ನು ಅದರ ಆಮದುದಾರರು ಹೊರಗೆ ಕೊಂಡೊಯ್ಯಬಹುದು.
ಕೆಲವೊಮ್ಮೆ ಸರ್ಟಿಫಿಕೆಟ್ ಆಫ್ ಒರಿಜಿನ್, ಬಿಲ್ ಆಫ್ ಎಂಟ್ರಿ ಇತ್ಯಾದಿಗಳಲ್ಲಿ ತಾಳೆಯಾಗದಿದ್ದರೆ ಸರಿಯಾಗುವವರೆಗೆ ಸರಕನ್ನು ತಡೆಹಿಡಿಯಬಹುದು. ಗೋಡಂಬಿ, ಖಾದ್ಯ ತೈಲಗಳಿಗೆ ಪ್ರಾವಿಶನಲ್ ಎನ್ ಒಸಿ ನೀಡುವ ಅವಕಾಶವೂ ಇದೆ ಎನ್ನುತ್ತಾರೆ ಅಧಿಕಾರಿಗಳು.
Related Articles
ಕಳಪೆ ಆಹಾರಕ್ಕಿಲ್ಲ ಪ್ರವೇಶ
ಕಳಪೆ ಆಹಾರವಸ್ತುಗಳು, ಅವಧಿ ಮೀರಿದ ಆಹಾರ ಇತ್ಯಾದಿಗಳನ್ನು ಲ್ಯಾಬ್‌ನಲ್ಲಿ ಪರಿಶೀಲಿಸಿ ತಡೆಹಿಡಿಯಲಾಗುತ್ತದೆ. ಈ ಬಗ್ಗೆ ಎರಡನೇ ಬಾರಿ ಪರೀಕ್ಷೆ ನಡೆಸಲು ಆಮದುದಾರರು ಕೇಳುವುದಕ್ಕೆ ಅವಕಾಶವಿದೆ. ಈ ಪ್ರಕ್ರಿಯೆ ಮೂಲಕ ದೇಶದೊಳಕ್ಕೆ ಕಳಪೆ ಗುಣಮಟ್ಟದ ಆಹಾರ ವಸ್ತು ಬರದಂತೆ ತಡೆಯಲಾಗುತ್ತದೆ.
ಆಹಾರ ಸಚಿವಾಲಯದ ಅಧೀನ ದಲ್ಲಿರುವ ಎಫ್‌ಎಸ್‌ಎಸ್‌ಎಐ 2008ರಲ್ಲಿ ದೇಶದಲ್ಲಿ ಕಾರ್ಯಾರಂಭಿ ಸಿತ್ತು. ವಾರ್ಷಿಕ 12 ಲಕ್ಷ ರೂ. ನಿಂದ 20 ಕೋಟಿ ರೂ. ವರೆಗಿನ ವಹಿವಾಟು ನಡೆಸುವ ಆಹಾರ ಪದಾರ್ಥ ಉದ್ಯಮಗಳಿಗೆ ರಾಜ್ಯದ ಲೈಸನ್ಸ್ ನೀಡಿದರೆ 20 ಕೋಟಿ ರೂ. ಮೇಲ್ಪಟ್ಟ ವಹಿವಾಟು ನಡೆಸುವವರು ಕೇಂದ್ರದ ಲೈಸನ್ಸ್ ಪಡೆದುಕೊಳ್ಳಬೇಕು. 12 ಲಕ್ಷ ರೂ.ಗಿಂತ ಕಡಿಮೆ ವಹಿವಾಟಿನ ಉದ್ದಿಮೆ ನೋಂದಣಿ ಮಾಡಿಕೊಂಡರೆ ಸಾಕು. ಮಂಗಳೂರಿನಲ್ಲಿ ಪ್ರಸ್ತುತ ಲೈಸನ್ಸ್ ಪಡೆಯುವ ಸೌಲಭ್ಯ ಇನ್ನೂ ಆರಂಭವಾಗಿಲ್ಲ, ಸದ್ಯ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಈ ಅನುಕೂಲ ಇದೆ.
ಎಫ್‌ಎಸ್‌ಎಸ್‌ಎಐ ದಕ್ಷಿಣ ಭಾರತದಾದ್ಯಂತ ವಿಸ್ತರಣೆಯಾಗುತ್ತಿದೆ, ಕಳೆದ ವರ್ಷ ಬೆಂಗಳೂರಿನಲ್ಲಿ, ಈ ವರ್ಷ ಮಂಗಳೂರಿನಲ್ಲಿ ಕಚೇರಿ ಪ್ರಾರಂಭಗೊಂಡಿದೆ. ಮಂಗಳೂರು ಬಂದರಿನ ಪ್ರಾಮುಖ್ಯತೆಯನ್ನು ಅರಿತು ಇಲ್ಲಿ ಕಚೇರಿ ಪ್ರಾರಂಭಿಸಲಾಗಿದೆ. – ಕುಮರೇಸನ್ ಚಂದ್ರಶೇಖರ್, ಅಧಿಕೃತ ಅಧಿಕಾರಿ, ಎಫ್‌ಎಸ್‌ಎಸ್‌ಎಐ