ಬೆಂಗಳೂರು: ಎರಡೂ ಹಂಗಾಮಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಕೃಷಿ ವರ್ಷದಲ್ಲಿ ಆಹಾರ ಉತ್ಪಾದನೆ ಪ್ರಮಾಣ ಗಣನೀಯ ಕುಸಿತ ಕಾಣಲಿದ್ದು, ಕಳೆದ ಐದು ವರ್ಷಗಳಲ್ಲಿನ ಅತ್ಯಂತ ಕನಿಷ್ಠ ಉತ್ಪಾದನೆಗೆ ರಾಜ್ಯ ಸಾಕ್ಷಿಯಾಗುವ ಆತಂಕ ಎದುರಾಗಿದೆ. ಕೃಷಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಹೊಂದಿತ್ತು. ಆದರೆ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮಿನಲ್ಲಿ ವಾಡಿಕೆಗಿಂತ ತೀವ್ರ ಮಳೆ ಅಭಾವ ಉಂಟಾಯಿತು. ಇದರಿಂದ ನೂರು ತಾ|ಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವೆಲ್ಲದರ ಪರಿಣಾಮ ಆಹಾರ ಉತ್ಪಾದನೆ ಗುರಿ ಪರಿಷ್ಕರಣೆ ಯಾಗಿದ್ದು, 95.69 ಲಕ್ಷ ಟನ್ ಉತ್ಪಾ ದನೆ ಆಗಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯ ಸರಕಾರ ಸಾಲ ಮನ್ನಾದಂಥ ವಿವಿಧ ಕ್ರಮಗಳ ಮೂಲಕ ರೈತನ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೂ ವರುಣನ ಅವಕೃಪೆಯಿಂದಾಗಿ ರೈತನ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದರೊಂದಿಗೆ ರಾಜ್ಯ ಕೃಷಿ ಆಂತರಿಕ ಉತ್ಪನ್ನ ಸಹ ಕುಸಿಯುವ ಸಂಭವ ಇದೆ. ಈಗ ಬರುವ ಬೆಳೆಗಳ ಗುಣಮಟ್ಟವೂ ಅಷ್ಟಕ್ಕಷ್ಟೇ ಇರಲಿದೆ. ಅವುಗಳಿಗೆ ಬೇಡಿಕೆ ಬರಲೂಬಹುದು ಅಥವಾ ಕುಸಿತವೂ ಆಗಬಹುದು. ಎರಡೂ ಸಾಧ್ಯತೆಗಳಿವೆ ಎಂದು ಕೃಷಿ ಅಧಿಕಾರಿ ಅಭಿಪ್ರಾಯಿಸಿದ್ದಾರೆ.
ಸಾಮಾನ್ಯವಾಗಿ ಯಾವುದಾದರೂ ಒಂದು ಹಂಗಾಮು ಕೈಕೊಟ್ಟಾಗ ಮತ್ತೂಂದು ಕೈಹಿಡಿಯುತ್ತಿತ್ತು. ಆದರೆ ಈ ಬಾರಿ ಮುಂಗಾರು-ಹಿಂಗಾರು ಎರಡೂ ಕೈಕೊಟ್ಟಿವೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಇದು ರೈತರ ಪಾಲಿಗೆ ಅತ್ಯಂತ ನಿಕೃಷ್ಟವಾಗಿದೆ. ಇದರಿಂದ ರೈತರ ಆದಾಯ ಕುಸಿತ ಆಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ 1,700 ಕೋಟಿ ರೂ. ನೆರವು ಕೋರಿದೆ. ಜತೆಗೆ ಸಾಧ್ಯವಾದಷ್ಟು ಹೆಚ್ಚು ರೈತರಿಗೆ ವಿಮೆ ಪರಿಹಾರ ಕಲ್ಪಿಸುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ.
ಡಾ| ಕೆ.ಜಿ. ಜಗದೀಶ್, ಆಯುಕ್ತರು, ಕೃಷಿ ಇಲಾಖೆ
ಈ ಕೃಷಿ ವರ್ಷ ಅತ್ಯಂತ ಕಡಿಮೆ ಉತ್ಪಾದನೆ ವರ್ಷವಾಗಿದೆ. ಇದರ ಪರಿಣಾಮ ದ್ವಿದಳ ಧಾನ್ಯ, ಎಣ್ಣೆಕಾಳು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.
● ಡಾ.ಟಿ.ಎನ್. ಪ್ರಕಾಶ ಕಮ್ಮರಡಿ, ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ
ವಿಜಯಕುಮಾರ್ ಚಂದರಗಿ