Advertisement

ನಮ್‌ ಒಗ್ಗರಣೆ ಸರ್‌…

06:00 AM Aug 29, 2017 | |

ಗೌಡರ ಜೊತೆ ಹರಟುತ್ತಾ ಕುಳಿತು ಬಿಡುವುದೇ? ಭೋಜನಪ್ರಿಯರಾಗಿದ್ದ ಮಾಸ್ತರರು, ಗೌಡರ ಮನೆಯಲ್ಲಿ ಘಮ್ಮೆಂದು ಬರುತ್ತಿದ್ದ ಒಗ್ಗರಣೆಯ ಪರಿಮಳಕ್ಕೆ ಮನಸೋತು, ಮೂಗರಳಿಸುತ್ತಾ ಅಲ್ಲೇ ಕುಳಿತುಬಿಟ್ಟಿದ್ದಾರೆ…

Advertisement

ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು, ಆ ಬಾಲ್ಯದ ದಿನಗಳನ್ನು ಹೇಗೆ ಮರೆಯಲಾದೀತು ಹೇಳಿ? ಸದಾ ಹಚ್ಚ ಹಸಿರಿನಿಂದ ಕೂಡಿದ್ದ ದಿನಗಳವು. ನಮ್ಮೂರಿನ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಿಕ್ಷಕರೊಬ್ಬರ ಹೆಸರು- “ಒಗ್ಗರಣೆ ಸರ್‌’! 

“ಇದೇನಪ್ಪಾ, ಒಗ್ಗರಣೆ ಸರ್‌!’ ಎಂದುಕೊಂಡಿರಾ? ಅವರಿಗೆ ಆ ಹೆಸರು ಬಂದಿದ್ದಕ್ಕೂ ಕಾರಣವಿದೆ. ಅವರು ನಮ್ಮೆಲ್ಲರ ನೆಚ್ಚಿನ ಗುರುಗಳು. ಪ್ರತಿವರ್ಷವೂ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವತಿಯಿಂದ ಮಕ್ಕಳ ಗಣತಿ ಮಾಡಲಾಗುತ್ತಿತ್ತು. ಪ್ರತಿ ಶಿಕ್ಷಕರಿಗೂ ಗ್ರಾಮದ ಒಂದೊಂದು ಓಣಿಯನ್ನು ಜನಗಣತಿ ಮಾಡಲು ಹಂಚಲಾಗಿತ್ತು. ಹೀಗೆಯೇ ಶಿವಣ್ಣ ಮಾಸ್ತರರಿಗೂ ಜವಾಬ್ದಾರಿ ನೀಡಿದ್ದರು. ಅವರು ತಮ್ಮ ಜೊತೆ ಸಹಾಯಕ್ಕೆಂದು ಇಬ್ಬರು ಶಿಷ್ಯರನ್ನು ಕರೆದುಕೊಂಡು ಹೋಗಿದ್ದರು.

ಹೀಗೆ ಜನಗಣತಿ ಮಾಡುತ್ತಾ ಮೇಲಿನ ಓಣಿಯ ಗೌಡರ ಮನೆ ತಲುಪಿದಾಗ ಉಪಾಹಾರದ ಸಮಯವಾಗಿತ್ತು. ಗೌಡರ ಮನೆಯಲ್ಲಿ ಗಣತಿ ಮಾಹಿತಿ ಪಡೆದ ಶಿವಣ್ಣ ಮಾಸ್ತರರು, ಅಲ್ಲಿಂದ ಮೇಲೆ ಏಳಲು ತಯಾರೇ ಇಲ್ಲ! ಗೌಡರ ಜೊತೆ ಹರಟುತ್ತಾ ಕುಳಿತು ಬಿಡುವುದೇ? ಭೋಜನಪ್ರಿಯರಾಗಿದ್ದ ಮಾಸ್ತರರು, ಗೌಡರ ಮನೆಯಲ್ಲಿ ಘಮ್ಮೆಂದು ಬರುತ್ತಿದ್ದ ಒಗ್ಗರಣೆಯ ಪರಿಮಳಕ್ಕೆ ಮನಸೋತು, ಮೂಗರಳಿಸುತ್ತಾ ಅಲ್ಲೇ ಕುಳಿತುಬಿಟ್ಟಿದ್ದಾರೆ. ಮಾಸ್ತರರ ಬಗ್ಗೆ ಗೊತ್ತಿದ್ದ ಶಿಷ್ಯರು ಒಳಗೊಳಗೇ ಮುಸಿ ಮುಸಿ ನಕ್ಕಿದ್ದಾರೆ. ಬಹುಶಃ ಇದನ್ನರಿತ ಗೌಡರು, ಮಾಸ್ತರರಿಗೆ ದಣಿದು ಹಸಿವಾಗಿರಬಹುದೆಂದು ಭಾವಿಸಿ, ಆಗ ತಾನೇ ತಯಾರಾಗಿದ್ದ ಒಗ್ಗರಣೆಯಿಂದ ಚುರುಮುರಿ ಮಾಡಿಸಿ ಚಹಾದೊಂದಿಗೆ ನೀಡಿದ್ದಾರೆ. ಅವರ ಜೊತೆಗಿದ್ದ ಶಿಷ್ಯರೂ ಅದನ್ನು ಚಪ್ಪರಿಸಿ ಅದನ್ನು ಬಾರಿಸಿದ್ದಾರೆ.

ಮರುದಿನ ಕ್ಲಾಸ್‌ಗೆ ಬಂದಾಗ ತರಗತಿಯ ತುಂಬಾ ಅದೇ ಸುದ್ದಿ. ಅವರೊಂದಿಗೆ ಹೋಗಿದ್ದ ಶಿಷ್ಯರು ನಡೆದಿದ್ದನ್ನು ಎಲ್ಲರಿಗೂ ಒಂದಿಷ್ಟು ಮಸಾಲೆ ಬೆರೆಸಿ ಹೇಳಿ, ಹೇಳಿ ಮಾಸ್ತರರಿಗೆ “ಒಗ್ಗರಣೆ ಸರ್‌’ ಎಂಬ ಬಿರುದಾಂಕಿತವನ್ನು ದಯಪಾಲಿಸಿಬಿಟ್ಟರು. ಅದು ಎಷ್ಟರ ಮಟ್ಟಿಗೆ ಪ್ರಚಲಿತವಾಗಿಬಿಟ್ಟಿತೆಂದರೆ, ಶಾಲೆಗೆ ಹೋಗುವ ಅಣ್ಣ- ಅಕ್ಕರಿಗೂ, ಮುಂದೆ ಬರುವ ತಮ್ಮ- ತಂಗಿಯರಿಗೂ ಅವರು “ಒಗ್ಗರಣೆ ಸರ್‌’ ಆಗಿಬಿಟ್ಟಿದ್ದರು! ವಿದ್ಯಾರ್ಥಿಗಳಿಗೆ ಅವರ ನಿಜನಾಮ ಮರೆತೇ ಹೋಯ್ತು. 

Advertisement

ನಮ್ಮ ಶಿವಣ್ಣ ಮಾಸ್ತರರೇ ಹಾಗೆ. ಕುಡಿ ಮೀಸೆ ತಿರುವುತ್ತಾ, ಕೈಯಲ್ಲೊಂದು ನೀರಿನ ಬಾಟಲ್‌ ಹಿಡಿದು ತರಗತಿ ಪ್ರವೇಶಿಸಿದರೆ ಇಡೀ ಕ್ಲಾಸ್‌ ಸೈಲೆಂಟ್‌! “ತೊಳೆ ತೊಳೆ ಹಲಸಿನ ತೊಳೆ, “ಟಣ್‌ ಟಣ್‌ ಟಡಲ್‌ ಕಡಲ್‌’ ಇವು ಅವರು ವಿದ್ಯಾರ್ಥಿಗಳಿಗೆ ಹೊಡೆಯುವಾಗ ಬಳಸುತ್ತಿದ್ದ ಪಾರಿಭಾಷಿಕ ಪದಗಳು. ಶಾಲೆಗೆ ಬರದೇ ಇರುವ ವಿದ್ಯಾರ್ಥಿಗಳನ್ನು ಎತ್ತಾಕಿಕೊಂಡು ಬರಲು ನಮ್ಮಲ್ಲೇ ಒಂದು ಕ್ಷಿಪ್ರ ಕಾರ್ಯಾಚರಣೆಯ ಪಡೆಯನ್ನು ನೇಮಿಸಿದ್ದರು. ಯಾರು ದೀರ್ಘ‌ ಗೈರಾಗಿರುತ್ತಾರೋ ಅಂಥ ಸಹಪಾಠಿಗಳ ಮನೆಗೆ ಹೋಗಿ ನಾವೇ ಹೊತ್ತುಕೊಂಡು ಬರುತ್ತಿದ್ದೆವು. ನಮ್ಮ ಶಿವಣ್ಣ ಸರ್‌ಗೆ ವಿದ್ಯಾರ್ಥಿಗಳ ಹಾಜರಾತಿ ಮುಖ್ಯವಾಗಿತ್ತು.

ಸಹೃದಯದ, ಹಾಸ್ಯಮಿಶ್ರಿತ ಗಡಸಿನ ವ್ಯಕ್ತಿತ್ವ ಅವರದು. ನಾವು ಮಾಡಿದ ಕೀಟಲೆಗಳಿಗೆ ಕ್ಷಮೆ ಕೋರುತ್ತಾ, ಅವರು ಈಗ ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಅವರ ಶಿಷ್ಯಕೋಟಿ ಬೇಡಿಕೊಳ್ಳುತ್ತದೆ.

– ಕುಮಾರಸ್ವಾಮಿ ವಿರಕ್ತಮಠ

Advertisement

Udayavani is now on Telegram. Click here to join our channel and stay updated with the latest news.

Next