ರಾಣಿಬೆನ್ನೂರ: ರೈತರು ಮೊದಲು ಕೊಟ್ಟಿಗೆ ಗೊಬ್ಬರ ಬಳಸಿ ಬೆಳೆಗಳನ್ನು ಬೆಳೆಯುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸುತ್ತಿದ್ದಾರೆ. ಇದರಿಂದ ನಾವು ಉಪಯೋಗಿಸುತ್ತಿರುವ ಆಹಾರವೂ ವಿಷಪೂರಿತವಾಗಿರುತ್ತದೆ ಎಂದು ಸಾವಯವ ಕೃಷಿ ಪ್ರಶಸ್ತಿ ವಿಜೇತ ಮಹೇಶಪ್ಪ ಮುದ್ದಿ ಹೇಳಿದರು.
ಮಂಗಳವಾರ ತಾಲೂಕು ಇಟಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಸಾವಯವ ಕೃಷಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದರು.
ರಾಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿಯಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ನಾವು ಕೃಷಿಗೆ ಪೂರಕವಾಗಿ ಎತ್ತು, ಆಕಳು, ಕುರಿ, ಮೇಕೆ, ಕೋಳಿ ಸಾಕಣೆ ಮಾಡಿಕೊಂಡು ಕೊಟ್ಟಿಗೆ ಗೊಬ್ಬರವನ್ನು ಬಳಕೆ ಮಾಡಿಕೊಳ್ಳುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದ ವಿವಿಧ ಸಮಗ್ರ ಕೃಷಿ ಬೆಳೆಯವುದರಿಂದ ಭೂಮಿಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚು ಸಾರಜನಕ ಹೊಂದಿರುವುದರಿಂದ ಅವು ನಮ್ಮ ಆಹಾರದ ಒಂದು ಪ್ರಮುಖ ಅಂಶವಾಗಿವೆ ಎಂದರು.
ಹೆತ್ತ ತಾಯಿ ಮಕ್ಕಳನ್ನು ಹೇಗೆ ರಕ್ಷಿಸುತ್ತಾಳೆಯೋ ಹಾಗೇ ಭೂಮಾತೆ, ಗಂಗಾಮಾತೆ, ಗೋಮಾತೆಯರು ನಮ್ಮನ್ನು ರಕ್ಷಿಸುತ್ತಾರೆ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಗಣಿ ಮತ್ತು ಎರೆಹುಳು ಬಹಳ ಪ್ರಮುಖ, ಸಗಣಿಯಲ್ಲಿ 12 ಪ್ರಮುಖ ಪೋಶಕಾಂಶಗಳು ಇರುತ್ತವೆ. ಎರೆಹುಳು ಭೂಮಿಯಲ್ಲಿ ಇದ್ದು ಕಸ ಕಡ್ಡಿಯನ್ನು ಸೇವಿಸಿ 16 ಪೋಶಕಾಂಶಗಳನ್ನು ನೀಡುತ್ತವೆ. ಮತ್ತು ಭೂಮಿಯನ್ನು ಹಗುರ ಮಾಡಿ ಅಂತರ್‌ಜಲವನ್ನು ಹೆಚ್ಚಿಸಿ ಭೂಮಿಯನ್ನು ತಂಪಾಗಿರುವಂತೆ ಮಾಡುತ್ತವೆ. ಈ ದೆಶೆಯಲ್ಲಿ ಎಲ್ಲ ರೈತರು ಶ್ರಮಿಸುವ ಅಗತ್ಯವಿದೆ ಎಂದರು.
ಕೃಷಿ ಅಧಿಕಾರಿ ನೇಮನಗೌಡ ಕಂಕನವಾಡ ಮಾತನಾಡಿ, ಜೀವಾಂಮೃತ ಎಂದರೆ 1 ಬ್ಯಾರಲ್ಲಿನಲ್ಲಿ 200 ಲೀಟರ್ ನೀರು, 10 ಕಿಲೋ ಸಗಣಿ, ಸಂಗ್ರಹಿಸಿದ 5 ಲೀಟರ್ ಗೋ ಮೂತ್ರ, ದ್ವೀದಳ ಧಾನ್ಯದ 2 ಕೆಜಿ ಹಿಟ್ಟು 2 ಕೆಜಿ ಬೆಲ್ಲಾ ಅಥವಾ ಕಬ್ಬಿನ ತುಂಡುಗಳು, ಒಂದು ಮುಷ್ಟಿ ಭೂಮಿಯ ಬದುವಿನಲ್ಲಿರುವ ಮಣ್ಣು, ನೀರಿನಲ್ಲಿ ಮಿಶ್ರಣ ಮಾಡಿ ದಿನಕ್ಕೆ 2 ರಿಂದ 3 ಸಾರಿ ಒಂದೇ ದಿಕ್ಕಿನಲ್ಲಿ ತಿರುಗಿಸುತ್ತಿರಬೇಕು, ನಾಲ್ಕುದಿನಗಳಲ್ಲಿ ಬಣ್ಣ ಬದಲಾಯಿಸುತ್ತದೆ ಎಂದರು.
ಮೊದಲಿಗೆ ಸ್ವಲ್ಪ ವಾಸನೆ ಬರುತ್ತದೆ. ಏಳುದಿನಗಳ ನಂತರ ಬಂಗಾರದ ಬಣ್ಣ ಹೊಂದುತ್ತದೆ. ತದ ನಂತರ ವಾಸನೆ ಕಡಮೆಯಾಗಿ ಒಳ್ಳೆ ಸುವಾಸನೆ ಬರುತ್ತದೆ. ನಂತರ ನೀರಿನ ಮೂಲಕ ಹರಿಸಬಹುದು ಅಥವಾ ಭೂಮಿಗೆ ಸಿಂಪಡಿಸಬಹುದು, ಸಾವಯವ ಕೃಷಿ ಮಾಡುವುದರಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭದಾಯಕದ ಜೊತೆಗೆ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಒಕ್ಕೂಟದ ಅಧ್ಯಕ್ಷ ನಿಂಗಪ್ಪ ಮಡಿವಾಳರ, ಜ್ಯೋತಿ, ಮರಡೂರು, ಮೇಲ್ವಿಚಾರಕಿ ರೇಣುಕಾಬಾಯಿ ಪಿ.ಬಿ, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಮತ್ತು ರೈತರು ಇದ್ದರು.