ಮಂಗಳೂರು : ಫುಡ್ ಪಾಯ್ಸನ್‌ನಿಂದಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಗರದ ಹೊರವಲಯದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಓರ್ವಳನ್ನು ಹೊರತುಪಡಿಸಿ ಉಳಿದೆಲ್ಲರೂ ಬಿಡುಗಡೆ ಗೊಂಡಿದ್ದಾರೆ.
ಮಂಗಳವಾರ ಸಂಜೆ 38 ಮಂದಿ ಆಸ್ಪತ್ರೆಯಲ್ಲಿದ್ದರು. ಬುಧವಾರ 37 ಮಂದಿ ಬಿಡುಗಡೆಗೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿ ಗುರುವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್ ತಿಳಿಸಿದ್ದಾರೆ.
ಸೋಮವಾರ ಸಂಶಯಾಸ್ಪದ ವಿಷಪೂರಿತ ಆಹಾರ ಸೇವನೆಯಿಂದ 231 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಈ ಪೈಕಿ ಹೆಚ್ಚಿನವರು ವಿದ್ಯಾರ್ಥಿನಿಯರು. 116 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಬುಧವಾರ ಕೂಡ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ಹೆಚ್ಚಿನ ಎಲ್ಲ ವಿದ್ಯಾರ್ಥಿನಿಯರು ಊರಿಗೆ ವಾಪಸಾಗಿದ್ದಾರೆ. ಕಾಲೇಜಿಗೆ ಒಂದು ವಾರ ರಜೆ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ಆಹಾರ, ನೀರು, ವಿದ್ಯಾರ್ಥಿಗಳ ಮಲ ಮೂತ್ರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಕೈಸೇರಲು ಒಂದು ವಾರ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.