ಇಂಡಿ: ತಾಲೂಕಿನಲ್ಲಿ 300ಕ್ಕೂ ಹೆಚ್ಚು ಅಂಗನವಾಡಿಗಳಿದ್ದು, ಮಕ್ಕಳ ಅನುಪಾತಕ್ಕನುಣಗವಾಗಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಆದರೆ ಅಂಗನವಾಡಿಯಲ್ಲಿ ದಾಖಲಾದ ಮಕ್ಕಳ ಸಂಖ್ಯೆಗೂ ನೈಜವಾಗಿರುವ ಮಕ್ಕಳ ಸಂಖ್ಯೆಗೂ ಅರ್ಧ ದಷ್ಟು ಅಂತರವಿದ್ದು, ಮಕ್ಕಳಿಗೆ ಮುಟ್ಟಬೇಕಾದ ಸಾಮಗ್ರಿಗಳು ಪರರ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಂಗನವಾಡಿ ಮಕ್ಕಳಿಗೆ ಹಾಗೂ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಸ್ಥಳೀಯವಾಗಿ ತರಕಾರಿ, ಮೊಟ್ಟೆ, ಶೇಂಗಾ ಬೀಜದ ಚಿಕ್ಕಿ ಅಲವಾರು ಖರೀದಿ ಅಂಗನವಾಡಿ ದಿನಾಚರಣೆ ವೆಚ್ಚಕ್ಕಾಗಿ ಹಾಗೂ ಬಾಲಸ್ನೇಹಿ ಯೋಜನೆಯಡಿ ಬಿಡುಗಡೆ ಮಾಡಲಾಗುವ ಅಥವಾ ಯೋಜನೆಯ ಉದ್ದೇಶ ಈಡೇರಿಕೆಗಾಗಿ ಯಾವುದೇ ಅನುದಾನವನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿ ಹೆಸರಿನಲ್ಲಿ ಜಂಟಿ ಖಾತೆ ತೆರೆದು ನಿರ್ವಹಣೆ ಮಾಡುವ ಅಧಿಕಾರ ಸಮಿತಿಗೆ ನೀಡಲಾಗಿದೆ.
ತಾಲೂಕಿನಲ್ಲಿ ಒಟ್ಟು 301 ಅಂಗನವಾಡಿಗಳು 22 ಮಿನಿ ಅಂಗನವಾಡಿಗಳು ಸೇರಿ 323 ಅಂಗನವಾಡಿಗಳಿವೆ. ಆ ಅಂಗನವಾಡಿಗಳಲ್ಲಿ 6 ತಿಂಗಳಿಂದ 1 ವರ್ಷದ ಒಳಗಿನ ಮಕ್ಕಳು 5232, 1 ವರ್ಷದಿಂದ 2 ವರ್ಷದ ಒಳಗಿನ ಮಕ್ಕಳು 7468, 2 ವರ್ಷದಿಂದ 3 ವರ್ಷದವರೆಗೆ ಮಕ್ಕಳು 8715, 3 ವರ್ಷದಿಂದ 5 ವರ್ಷದವರೆಗಿನ ಮಕ್ಕಳು 12777, 5 ವರ್ಷದಿಂದ 6 ವರ್ಷದವರೆಗೆ ಮಕ್ಕಳು 4291, ಒಟ್ಟು ತಾಲೂಕಿನಾದ್ಯಂತ 6 ತಿಂಗಳಿನಿಂದ 6 ವರ್ಷದ ಮಕ್ಕಳು ಸೇರಿ 38483 ಮಕ್ಕಳಿದ್ದಾರೆ. ಇದರಲ್ಲಿ ಅರ್ಧದಷ್ಟು ಮಕ್ಕಳು ಸಹ ಅಂಗನವಾಡಿಗೆ ಹೋಗುವುದಿಲ್ಲ ಅದಾಗ್ಯೂ, ಬಹುತೇಕ ಮಕ್ಕಳು ವಿವಿಧ ಯೋಜನೆಗಳ ಫಲಾನುಭವಿಗಳು ಆಗಿದ್ದಾರೆ. ಆ ಮಕ್ಕಳಿಗೆ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಮಧ್ಯವರ್ತಿಗಳಿಂದ ಅಕ್ರಮ ನಡೆಯುತ್ತಿದೆ. ಆಹಾರ ಧಾನ್ಯ ವಿತರಣೆ ಸರಿಯಾಗಿ ಆಗುತ್ತಿಲ್ಲ ಹಾಗೂ ಗುಣಮಟ್ಟದ್ದಲ್ಲ ಎಂಬ ಆರೋಪಗಳು ನಿರಂತರವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಬಾಲವಿಕಾಸ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿಗಳಿಗೆ ಸಂಬಂಧಪಟ್ಟ ಮೇಲ್ವಿಚಾರಕಿಯು ಗ್ರಾಪಂ ಗಮನಕ್ಕೆ ತರುವ ಮೂಲಕ ಹಾಗೂ ಸರಕಾರ ಗೊತ್ತುಪಡಿಸಿದ ಮಾರ್ಗಸೂಚಿಯಂತೆ ತೀರ್ಮಾನ ತೆಗೆದುಕೊಂಡು ಸಮಾಜ ಸೇವಾ ಮನೋಭಾವ ಹಾಗೂ ಮಕ್ಕಳ ವಿಕಾಸನದ ಬಗ್ಗೆ ಕಳಕಳಿ ಇರುವವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಿದ್ದಾರೆ. ಬಾಲವಿಕಾಸ ಸಮಿತಿಯು ರಚನೆಯಾದ ದಿನಾಂಕದಿಂದ 3 ವರ್ಷದವರೆಗೆ ಕಾರ್ಯನಿರ್ವಹಿಸಲಿದೆ. ಮೂರು ವರ್ಷದ ನಂತರ ಸಮಿತಿಯನ್ನು ಪುನಃ ರಚನೆ ಮಾಡಬೇಕು ಎಂಬುದು ನಿಯಮ.
-ಯಲಗೊಂಡ ಬೇವನೂರ