Advertisement

ಆಹಾರ”ಪ್ರೇಮಿಗಳ ತಾಜ್‌ ಮಹಲ್‌’;ಅಪ್ಪಟ ಕರಾವಳಿಯ ಸ್ವಾದದ ಹೋಟೆಲ್‌

08:37 PM Jan 12, 2020 | Sriram |

ನಾನು ಆಗ್ರಾದ ತಾಜ್‌ ಮಹಲ್‌ ಬಗ್ಗೆ ಬರೀತಾ ಇಲ್ಲ, ಮಂಗಳೂರಿನ ಹೋಟೆಲ್‌ ತಾಜ್‌ ಮಹಲ್‌ ಬಗ್ಗೆ ಬರೀತಾ ಇದ್ದೇನೆ. ನಾಗರೀಕತೆ ಬೆಳೆದಂತೆಲ್ಲಾ ಜನರ ಆಹಾರ ಪದ್ಧತಿಗಳೂ ಬದಲಾಗುತ್ತಿವೆ. ಕೇವಲ ತಮ್ಮ ತಮ್ಮ ಊರಿನ ಪಾರಂಪರಿಕ ತಿನಿಸುಗಳನ್ನು, ಭೋಜನಗಳನ್ನು ಸವಿಯುತ್ತಿದ್ದ ಜನ ಇಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿದ್ದಾರೆ. ಥಾಯ್‌, ಚೈನೀಸ್‌, ಇಟಾಲಿಯನ್‌ ಹೀಗೆ ಹತ್ತು ಹಲವು ದೇಶದ ಆಹಾರಗಳು ಭಾರತಕ್ಕೆ ಕಾಲಿಟ್ಟು, ಈ ಫಾಸ್ಟ್‌ ಫ‌ುಡ್‌, ರೆಡಿಮೇಡ್‌ ಫ‌ುಡ್‌ಗಳ ಸೋಗಿನಲ್ಲಿ ನಮ್ಮ ನೆಲದ ಅದೆಷ್ಟೋ ಸಾಂಪ್ರದಾಯಿಕ ಅಡುಗೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ.
ಹೀಗಿರುವಾಗ, ಯಾರಾದರೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಅಡುಗೆ ಮಾಡಿ ಉಣಬಡಿಸುತ್ತಾರೆ ಎಂದರೆ ಅದೇನೋ ಆನಂದ. ಉತ್ತರ ಕರ್ನಾಟಕದ ಸಜ್ಜೆ ರೊಟ್ಟಿ, ಮಲೆನಾಡ ಪತ್ರೊಡೆ, ಕುಂದಾಪುರದ ನೀರ್‌ ದೋಸೆ- ಮೀನ್‌ ಗಸಿ , ಮಂಡ್ಯದ ಉಪ್ಪೆಸರು- ಮುದ್ದೆ… ಹೀಗೆ… ಇಂಥ ತಿನಿಸುಗಳು ನಮ್ಮ ಸಂಸ್ಕೃತಿಯ, ಸದಾಚಾರದ ಪ್ರತೀಕ ಮಾತ್ರವಲ್ಲ, ಸ್ಥಳದ ಹವಾಮಾನಕ್ಕೆ ಅನುಗುಣವಾಗಿ ರೂಪುಗೊಂಡಿರುವ ತಿನಿಸುಗಳು.

Advertisement

ಹಳೆಯ ಸೊಗಡು ಮಾಸಿಲ್ಲ
ಸಾಂಪ್ರದಾಯಿಕ ಅಡುಗೆಗಳನ್ನು ಜನರಿಗೆ ನೀಡುತ್ತಿರುವುದು, ಕೆಲವೇ ಕೆಲವು ಬೆರಳೆಣಿಕೆಯಷ್ಟು ಹೋಟೆಲ್‌ಗ‌ಳು, ಬಹುತೇಕ ಹೋಟೆಲ್‌ಗ‌ಳು ಮಾಡ್ರನೈಸ್‌ ಆಗುತ್ತಾ ದೇಸೀ ಸೊಗಡನ್ನು ಕಳೆದುಕೊಳ್ಳುತ್ತಾ ಬಂದಿವೆ. ಆದರೆ ಇಂತಹ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವುದು ಮಂಗಳೂರಿನ ತಾಜ್‌ಮಹಲ್‌ ಹೋಟೆಲ್‌. ಮಂಗಳೂರಿನಲ್ಲಿ ಬಹುಶಃ ಈ ಹೋಟೆಲ್‌ನ ಪರಿಚಯ ಇಲ್ಲದವರು ಸಿಗಲಿಕ್ಕಿಲ್ಲ.
ತಾಜ್‌ಮಹಲ್‌ ಹೋಟೆಲ್‌ ಎಂದರೆ ಹಳೆ ಗೆಳೆಯರನ್ನು ಭೇಟಿಯಾಗುವ ನೆನಪು, ಮುಂಜಾನೆ ಐದಕ್ಕೇ ಕಾರ್‌ಸ್ಟ್ರೀಟ್‌ನಲ್ಲಿ ಅವರ ಅತ್ಯಂತ ರುಚಿಕರವಾದ ಕಾಫಿ ಕುಡಿಯುತ್ತಿದ್ದ ನೆನಪು. ಕುಡಿ³ ಶ್ರೀನಿವಾಸ್‌ ಶೆಣೈ ಅವರು ಮಂಗಳೂರಿನ ನೆಹರು ಮೈದಾನದಲ್ಲಿ ಪ್ರಾರಂಭಿಸಿದ ತಾಜ್‌ಮಹಲ್‌, ಕಾರ್‌ಸ್ಟ್ರೀಟಿಗೆ ಬಂದು, ಸದ್ಯ ಕೊಡಿಯಾಲ್‌ಬೈಲಿನಲ್ಲಿದ್ದು, ಮೂರನೇ ತಲೆಮಾರಿನ ಗಣೇಶ್‌ ಶೆಣೈ ಮತ್ತು ಅವರ ದೊಡ್ಡಪ್ಪ ಜಗದೀಶ್‌ ಶೆಣೈ ಇವರ ಸಾರಥ್ಯದಲ್ಲಿ ನಡೆಯುತ್ತಿದೆ.

ಬಿಸ್ಕೆಟ್‌ ರೊಟ್ಟಿ, ಕೊಟ್ಟೆ ಕಡುಬು ರುಚಿ
ಪೂರಿಯಂತೆ ಇದ್ದು ಸ್ವಲ್ಪ ನಾಲಗೆಗೆ ಖಾರ ತಾಗಿಸುವ ತೀಖ್‌ ರೊಟ್ಟಿ, ಮಂಗಳೂರಿನ ಬಿಸಿ ಬಿಸಿ ರೊಟ್ಟಿ, ಇದು ಬನ್ಸ್‌ ಥರ ಇದ್ದರೂ ಒಳಗೊಂದಷ್ಟು ಹೂರಣವಿದ್ದು ಇದಕ್ಕೆ ಯಾಕೆ ಬಿಸ್ಕೆಟ್‌ ರೊಟ್ಟಿ ಎನ್ನುತ್ತಾರೆ. ಬನ್ಸ್‌, ತೆಳುವಾಗಿ ಸ್ವಲ್ಪ ಕೆಂಪಗೆ ರೋಸ್ಟಾದ ತುಪ್ಪದ ದೋಸೆ, ಮೂರು ತಲೆಮಾರಿನಿಂದ ಬಂದ ಸ್ಪೆಷಾಲಿಟಿ ಬಿಸ್ಕೆಟ್‌ ಎಂಬ ಸೀಕ್ರೆಟ್‌ ಮಾತ್ರ ತಲೆಮಾರುಗಳ ಹಿಂದೆಯೇ ಉಳಿದಿದೆ. ಇನ್ನು ಇಡ್ಲಿ ಹಿಟ್ಟನ್ನು ಹಲಸಿನ ಎಲೆಯ ತೊಟ್ಟೆಯಲ್ಲಿ ಹಾಕಿ ಕೊಟ್ಟೆ ಕಡುಬು, ಅಥವಾ ಈಚಲು ಗರಿಯಿಂದ ಮಾಡಿದ ತೊಟ್ಟೆಗೆ ಹಾಕಿ ಬೇಯಿಸಿ ಮೂಡೆ ಮಾಡಿ ಇವರು ತೆಗೆದುಕೊಡುವಾಗ ಬರುವ ಪರಿಮಳ ಬಾಲ್ಯದಲ್ಲಿ ಅಮ್ಮ ಮಾಡುತ್ತಿದ್ದ ಕೊಟ್ಟೆ ಕಡುಬು, ಮೂಡೆಯ ನೆನಪು ಮೂಡಿಸಿ ಬೇರೊಂದು ಲೋಕಕ್ಕೇ ಕರೆದುಕೊಂಡು ಹೋಗುತ್ತದೆ.

ಕೊಂಕಣಿ ಖಾದ್ಯ “ದಾಳಿತೊಯ್‌’ ವಿಶೇಷ
ಹಲಸಿನ ಎಲೆಗಳನ್ನು ಹಂಚಿಕಡ್ಡಿಯಿಂದ ಒಂದಕ್ಕೊಂದು ಹೆಣೆದು ಮಾಡುತ್ತಿದ್ದ ಲೋಟದಂತಹ ಆಕಾರದ ಕೊಟ್ಟೆ, ಕರಾವಳಿಯವರಿಗೆ ಚಿರಪರಿಚಿತ ಮತ್ತು ಅತ್ಯಂತ ಪ್ರಿಯ. ಇದೆಲ್ಲದರ ಜೊತೆಗೆ ಮತ್ತೂಂದು ವಿಶೇಷ ಎಂದರೆ ಬೇಳೆ ಬೇಯಿಸಿ, ಇಂಗು ಹಾಕಿ, ಸಾಸಿವೆ ಕರಿಬೇವಿನ ಒಗ್ಗರಣೆ ನೀಡಿ ಮಾಡುವ ಕೊಂಕಣಿ ವಿಶೇಷ ಖಾದ್ಯ “ದಾಳಿತೊಯ್‌’ (ಇದನ್ನು ಕೊಂಕಣಿಯವರು ತಮ್ಮ ಕುಲದೇವರು ಎಂದು ಕರೆಯುವುದುಂಟು), ಅದೊಂದು ವಿಶಿಷ್ಟ ಸ್ವಾದ. ಇಷ್ಟೆಲ್ಲಾ ಆದ ಮೇಲೆ ಕೊನೆಗೆ ಇವರ ಸ್ಪೆಷಲ್‌ ಕಾಫಿ ಎರಡೂ ಅತ್ಯಂತ ಸ್ವಾದಭರಿತವಾಗಿದ್ದ ಬಾಲ್ಯದ ನೆನಪೂ ಅದರೊಂದಿಗಿದೆ. ಇನ್ನು ಬಾಯಿ ಸಿಹಿ ಮಾಡಲು ಅನೇಕ ಸಿಹಿ ತಿಂಡಿಗಳಿದ್ದರೂ ಇಲ್ಲಿ ತಯಾರಿಸುವ ಗೋಧಿ ಹಲ್ವಾ ಕೊಡುವ ಖುಷಿಯೇ ಬೇರೆ.

ಹೋಟೆಲ್‌ ಸಮಯ:
ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆಯವರೆಗೆ. ಭಾನುವಾರವೂ ತೆರೆದಿರುತ್ತದೆ.

Advertisement

ಹೋಟೆಲ್‌ ವಿಳಾಸ:
ತಾಜ್‌ಮಹಲ್‌ ಹೋಟೆಲ್‌, ರೈಲ್ವೇ ಸ್ಟೇಷನ್‌ ರಸ್ತೆ, ವೆನ್‌ಲಾಕ್‌ ಆಸ್ಪತ್ರೆ ಎದುರು, ಹಂಪನಕಟ್ಟೆ, ಮೆಗಳೂರು

– ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next