ಕಾಪು: ಕೋವಿಡ್ ಎರಡನೇ ಅಲೆ, ಮತ್ತು ಲಾಕ್ ಡೌನ್ ನಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದು, ಅಂತಹ ಬಡ ಕುಟುಂಬಗಳ ನೋವಿಗೆ ಸ್ಪಂಧಿಸುವುದು ಪ್ರತೀಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜದ 500 ಬಡ ಕುಟುಂಬಗಳಿಗೆ ಪಡಿತರ ಕಿಟ್ ಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಹೇಳಿದರು.
ಕಾಪುವಿನಲ್ಲಿ ಸಾಂಕೇತಿಕವಾಗಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬಾರಿಯೂ ಜನರಿಗೆ ಪಡಿತರ ಕಿಟ್ ಗಳನ್ನು ಮತ್ತು ವಿಟಮಿನ್ ಸಿ ಮಾತ್ರೆಗಳನ್ನು ವಿತರಿಸಲಾಗಿದ್ದು, ಈ ಬಾರಿ ಮನೆಗೆ ಕೊಂಡೊಯ್ದು ನೀಡಲಾಗುವುದು ಎಂದರು.
ಇದನ್ನೂ ಓದಿ: ತೈಲೋತ್ಪನ್ನಗಳ ಬೆಲೆಯೇರಿಕೆಯಿಂದ ಜನ ಜೀವನ ತತ್ತರ: ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ
ಕೋವಿಡ್ ಬಗ್ಗೆ ಜನರು ಸ್ವಯಂ ಜಾಗೃತರಾಗುವ ಅಗತ್ಯತೆಯಿದೆ. ಕೋವಿಡ್ ದೂರ ಮಾಡಲು ನಾವೇ ಕಟಿಬದ್ಧರಾಗಬೇಕು. ಮೂರನೇ ಅಲೆ ತಡೆಯಲು ನಾವೇ ಸ್ವಯಂ ಜಾಗೃತರಾಗೋಣ ಎಂದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಪ್ರಮುಖರಾದ ಶೇಖರ ಪೂಜಾರಿ, ಪ್ರದೀಪ್ ಪೂಜಾರಿ, ಪ್ರಶಾಂತ್ ಮಡಿವಾಳ, ರವಿಚಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.