ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರ ಖಾತೆಗೆ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂಪಾಯಿ ಜಮೆ ಮಾಡಿದ್ದರೆ ಜನರು ಗಂಜಿ ಕುಡಿದಾದರೂ ಬದುಕುತ್ತಿದ್ದರು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಅಣಲೆಕೊಪ್ಪದಲ್ಲಿ ಶುಕ್ರವಾರ ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಓಮಿನಿ ಚಾಲಕರಿಗೆ ದಿನಸಿ ಕಿಟ್ ವಿತರಣೆ ಜೊತೆಗೆ ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 10 ಸಾವಿರ ರೂ. ಸಹಾಯಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಮತ್ತು ಶಾಸಕರು ನೊಂದವರ ಕಣ್ಣೀರು ಒರೆಸುವ ಮಾನವೀಯ ಕೆಲಸ ಮಾಡಬೇಕು. ಬೇರೆ ಬೇರೆ ಕೆಲಸಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರ ಇಂತಹ ಸಂಕಷ್ಟ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಲ್ಲಬೇಕು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ದಾರರೆಲ್ಲರಿಗೆ ಪರಿಹಾರ ನೀಡಿದರೆ ನೂರು ಕೋಟಿ ರೂಪಾಯಿ ಖರ್ಚಾಗಬಹುದು. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆಯಾಗುವುದಿಲ್ಲ. ಯಾವುದಾದರೂ
ಅಭಿವೃದ್ಧಿ ಕೆಲಸ ನಿಲ್ಲಿಸಿ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಈ ವರ್ಷ ಕೆಎಸ್‌ಆರ್‌ಟಿಸಿಯಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಸರ್ಕಾರ ಅದನ್ನು ತುಂಬಿಕೊಡುತ್ತದೆ. ಆದರೆ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಕೆಲಸಕ್ಕೆ ರಾಜ್ಯ ಸರ್ಕಾರ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಬೇಳೂರು, ಕೊರೊನಾ ಸಂದರ್ಭದಲ್ಲಿ ಸಹ ನಗರ ವ್ಯಾಪ್ತಿಯಲ್ಲಿ ಕಿಟ್ ವಿತರಣೆಯಲ್ಲಿ ಪಕ್ಷಪಾತ ಮಾಡಲಾಗಿದೆ. ಮಾನವೀಯತೆಯನ್ನು ಸರ್ಕಾರ ಮರೆತಿದೆ ಎಂದು ದೂರಿದರು.
ನಗರಸಭೆ ಸದಸ್ಯೆ ಎನ್.ಲಲಿತಮ್ಮ ಮಾತನಾಡಿ, ಆಡಳಿತರೂಢ ಬಿಜೆಪಿ ಶಾಸಕರು ಕಿಟ್ ವಿತರಣೆ ಮಾಡಿದಾಗ ತಾರತಮ್ಯ ಮಾಡಿದ್ದಾರೆ. ಆದರೆ ಮಾಜಿ ಶಾಸಕ ಬೇಳೂರು ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಶಕ್ತಿಮೀರಿ ಆರ್ಥಿಕ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಐ.ಎನ್. ಸುರೇಶಬಾಬು, ಪ್ರಧಾನ ಕಾರ್ಯದರ್ಶಿ ವಿ. ಶಂಕರ್, ಪ್ರಮುಖರಾದ ಮಕೂºಲ್ ಅಹ್ಮದ್, ಸೋಮಶೇಖರ ಲ್ಯಾವಿಗೆರೆ, ಅಶೋಕ ಬೇಳೂರು, ದೇವದಾಸ್ ಪ್ರಭು, ಉದಯ್, ಉಮೇಶ್ ಸೂರನಗದ್ದೆ, ಭವಾನಿ ಪುಟ್ಟಪ್ಪ, ಸಂತೋಷ್ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ಗಣಪತಿ ಬ್ಯಾಂಕ್ ಅಧ್ಯಕ್ಷರಾಗಿ ನೇಮಕವಾಗಿರುವ ವಿ. ಶಂಕರ್ ಅವರನ್ನು ಸನ್ಮಾನಿಸಲಾಯಿತು.