Advertisement
ಆಹಾರೋದ್ಯಮದಷ್ಟು ಸೂಕ್ಷ್ಮ ಹಾಗೂ ಸನ್ನದ್ಧತೆಯ ಉದ್ಯಮ ಬೇರೊಂದಿಲ್ಲ ಎನ್ನುವುದು ವಾಡಿಕೆಯ ಅಭಿಪ್ರಾಯ. ಇದು ನೂರಕ್ಕೆ ನೂರು ಸತ್ಯ. ನೂರಾರು ಜನರು ಸೇವಿಸುವ ಆಹಾರದ ಗುಣಮಟ್ಟ , ಪ್ರಮಾಣ, ನಿಗದಿಪಡಿಸಿದ ಸಮಯದೊಳಗೆ ನಿರಂತರವಾಗಿ ಗ್ರಾಹಕರಿಗೆ ಒದಗಿಸುವ ಮಹಾನ್ ಜವಾಬ್ದಾರಿ ಪ್ರತಿ ಆಹಾರ ಉತ್ಪಾದನಾ ಘಟಕದ ಮಾಲಕರಿಗೆ ಇರುತ್ತದೆ. ಪುಟ್ಟ ಘಟಕಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉದ್ಯಮದಲ್ಲಿ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆಹಾರೋದ್ಯಮಕ್ಕೆ ಸೂಕ್ತವಾದ ಸ್ಥಳ, ರಸ್ತೆ ಸಂಪರ್ಕ, ಶುದ್ಧವಾದ ನೀರು ಹಾಗೂ ನಿರಂತರ ವಿದ್ಯುತ್ ಪೂರೈಕೆ, ಸುಸಜ್ಜಿತ ಕಟ್ಟಡ ಇವುಗಳು ಪ್ರಾಥಮಿಕ ಅಗತ್ಯಗಳು. ಸ್ಥಳೀಯ ಪಂಚಾಯತ್ ಪರವಾನಿಗೆ, ಸಣ್ಣ ಕೈಗಾರಿಕಾ ಘಟಕದ ನೋಂದಾವಣಿ, ವಾಣಿಜ್ಯ ತೆರಿಗೆ (ಜಿ.ಎಸ್.ಟಿ.)ಯಲ್ಲಿ ನೋಂದಾವಣಿ, ಪರಿಸರ ಇಲಾಖೆಯಿಂದ ನಿರಪೇಕ್ಷಣಾ ಪತ್ರ, ಆರೋಗ್ಯ ಇಲಾಖೆಯಿಂದ ಬರುವ ನಿಯಮಗಳ ಪಾಲನೆ, ಕಾರ್ಮಿಕ ಕಾಯಿದೆಯಲ್ಲಿ ನೋಂದಾವಣಿ, ಪಿ.ಎಫ್., ಇ.ಎಸ್.ಐ. ಇತ್ಯಾದಿ ಇಲಾಖೆಗಳಲ್ಲಿ ನೋಂದಾವಣಿ ಹೀಗೆ ಈ ಇಲಾಖೆಗಳ ವ್ಯಾಪ್ತಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿ ಆಹಾರ ಸಾಮಗ್ರಿ ಘಟಕಗಳನ್ನು ತೆರೆಯಬೇಕು. ಇವೆಲ್ಲಾ ವ್ಯವಸ್ಥೆಗಳೊಂದಿಗೆ ಹಣಕಾಸು ಸಂಸ್ಥೆಯ ನಿಯಮಗಳಿಗೆ ಬದ್ಧರಾಗಿ ಅವರ ಮಾರ್ಗದರ್ಶಿ ಹಾಗೂ ಒಡಂಬಡಿಕೆಗೆ ಒಪ್ಪಿಗೆ ನೀಡಿ ಹಣಕಾಸು ವ್ಯವಸ್ಥೆಯನ್ನು ಪಡೆಯಬೇಕು.
Related Articles
Advertisement
ತೀವ್ರ ಬೆಲೆಯೇರಿಕೆಯಿಂದ ತತ್ತರಿಸಿದ ಉದ್ಯಮಿಗಳು ಉತ್ಪನ್ನಗಳಿಗೆ ಕನಿಷ್ಠ ಬೆಲೆ ಸಿಗದೆ ನಷ್ಟಕ್ಕೆ ಸಿಲುಕಿ ಲಕ್ಷಾಂತರ ರೂ. ಹೂಡಿಕೆಗೆ ಪ್ರತಿಫಲ ಸಿಗದೆ ಉದ್ಯಮವನ್ನು ಶಾಶ್ವತವಾಗಿ ಮುಚ್ಚಿ ನಂತರವೂ ಸಾಲದ ಸುಳಿಯಿಂದ ಹೊರಬರಲಾಗದೆ ಕಷ್ಟಪಡುತ್ತಿರುವ ಹಲವು ಉದಾಹರಣೆಗಳಿವೆ.
ಬಹಳವಾಗಿ ಎದ್ದುಕಾಣುವ ಇನ್ನೊಂದು ಪ್ರಮುಖ ನ್ಯೂನತೆ ಅಲ್ಲಲ್ಲಿ ಅಣಬೆಗಳಂತೆ ಎದ್ದಿರುವ ಕಿರು ಪ್ರಮಾಣದ ಹೋಮ್ ಇಂಡಸ್ಟ್ರಿಗಳು. ಮನೆಗಳಲ್ಲಿ ಅನಧಿಕೃತವಾಗಿ ಆಹಾರ ಸಾಮಗ್ರಿಗಳನ್ನು ತಯಾರಿಸುವುದು, ರಸ್ತೆ ಬದಿಗಳಲ್ಲಿ ತಯಾರಿಸುವುದು, ಯಾವುದೇ ಮೂಲ ಸೌಕರ್ಯಗಳಿಲ್ಲದೆ ತಾತ್ಕಾಲಿಕ ಘಟಕಗಳನ್ನು ತೆರೆದು ಮಾರುಕಟ್ಟೆಯ ಮೌಲ್ಯಗಳನ್ನು ಹಾಳುಗೆಡವಲು ಕಾರಣರಾಗಿದ್ದಾರೆ. ಇವರ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲ . ಮನೆಯವರು ಹಾಗೂ ಸಂಬಂಧಿಗಳೇ ಕಾರ್ಮಿಕರು. ಇವರು ಉತ್ಪನ್ನಗಳಿಗೆ ಲಂಗುಲಗಾಮಿಲ್ಲದೆ ದರಗಳನ್ನು ವಿಧಿಸಿ ಮಾರುತ್ತಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ. ಈ ಸ್ಪರ್ಧೆಯನ್ನು ಎದುರಿಸುವುದಾದರೂ ಹೇಗೆ ? ಇವರು ಮಾರುವ ಬೆಲೆಗಳನ್ನು ಪರಿಶೀಲಿಸಿದಾಗ ಇವರು ಉಪಯೋಗಿಸುವ ಕಚ್ಚಾ ಸಾಮಗ್ರಿಗಳನ್ನು ಯೋಗ್ಯ ಮಾರುಕಟ್ಟೆಯಲ್ಲಿ ಪಡೆಯುತ್ತಾರೊ ಅಥವಾ ಬೇರಾವ ಮಾರ್ಗದಿಂದ ಪಡೆಯುತ್ತಾರೊ ಎನ್ನುವ ಸಂದೇಹ ಕಾಡುತ್ತದೆ.
ಆಗಾಗ ಯೋಗ್ಯ ಘಟಕಗಳ ಅನಗತ್ಯ ತಪಾಸಣೆ ನಡೆಸಿ ಕಿರುಕುಳ ನೀಡುವ ಇಲಾಖೆಗಳು ಇಂತಹ ಕೊಳಕು ಘಟಕಗಳತ್ತ ಕಣ್ಣೆತ್ತಿ ಕೂಡ ನೋಡದೆ ಇರುವುದು ಏಕೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಸ್ಥಳೀಯ ಪಂಚಾಯತ್‌ಗಳು, ಆರೋಗ್ಯ ಇಲಾಖೆ, ಆಹಾರ ಸುರಕ್ಷಾ ಅಧಿಕಾರಿಗಳು, ಜಿಎಸ್‌ಟಿ ಅಧಿಕಾರಿಗಳು ಈ ಕುರಿತು ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಯೋಗ್ಯ ಆಹಾರ ಸೇವಿಸುವ ಗ್ರಾಹಕರ ಹಕ್ಕಿಗೆ ಸುರಕ್ಷೆಯಿರುವುದಿಲ್ಲ.
ಆಹಾರೋದ್ಯಮಿಗಳು ವ್ಯವಸ್ಥಿತವಾಗಿ ಆರೋಗ್ಯಕರವಾಗಿ, ತಮ್ಮ ಉದ್ಯಮಗಳನ್ನು ನಡೆಸಿ ಸ್ಥಳೀಯರಿಗೆ ಉದ್ಯೋಗಗಳನ್ನು ನೀಡಿ, ಆರೋಗ್ಯಕರ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡ ಬೇಕಾದಲ್ಲಿ ಸರಕಾರಿ ಇಲಾಖೆಗಳು, ಕಾನೂನುಗಳು ಪೂರಕವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿರುವುದು ಬೆಲೆಯೇರಿಕೆಗೆ ಇನ್ನೊಂದು ಮುಖ್ಯ ಕಾರಣ.
ಈ ಸಂದಿಗ್ಧ ಸಮಯದಲ್ಲಿ ಸರಕಾರ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗದಿದ್ದಲ್ಲಿ ಮುಂದೆ ಆಹಾರೋದ್ಯಮಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಮೈದಾ ಮಿಲ್ಲುಗಳಿಗೆ ಒದಗಿಸುವ ಗೋಧಿಗೆ ಸ್ವಲ್ಪವಾದರೂ ಸಬ್ಸಿಡಿಯನ್ನು ನಿಗದಿಪಡಿಸಬೇಕು ಹಾಗೂ ಸಾಕಷ್ಟು ಗೋಧಿಯನ್ನು ಸರಕಾರ ನಿರಂತರವಾಗಿ ಒದಗಿಸಬೇಕು. ಇದರಿಂದ ಮೈದಾ ಬೆಲೆ ಇಳಿಕೆಯಾಗಬಹುದು. ಇನ್ನುಳಿದಂತೆ ಕಾರ್ಮಿಕ ನೀತಿಯಲ್ಲಿ ಸಡಿಲಿಕೆ, ಆಹಾರ ಸುರಕ್ಷತಾ ಕಾಯಿದೆಗಳಲ್ಲಿ ವಿನಾಯಿತಿ, ವಿದ್ಯುತ್ಛಕ್ತಿ ದರದಲ್ಲಿ ಸಣ್ಣ ಕೈಗಾರಿಕೆಗಳಿಗೆ ರಿಯಾಯಿತಿ. ಇವುಗಳ ನಿರೀಕ್ಷೆಯಲ್ಲಿ ಆಹಾರೋದ್ಯಮಿಗಳು ಇದ್ದಾರೆ. ಈ ಕಿರು ಬೇಡಿಕೆಗಳಿಗೆ ಯಾವುದೇ ಸ್ಪಂದನೆ ದೊರಕದಿದ್ದಲ್ಲಿ ಬೇಕರಿ ಹಾಗೂ ಆಹಾರೋದ್ಯಮಿಗಳು ತಯಾರಿಸುವ ತಯಾರಿಕೆಗಳ ಬೆಲೆಗಳು ಗಗನಕ್ಕೇರಿ ಸಾಮಾನ್ಯ ವರ್ಗದ ಜನರಿಗೆ ತಮ್ಮ ಅಗತ್ಯದ ತಿಂಡಿಗಳನ್ನು ಸೇವಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಮುಂದೆ ಇದು ಇನ್ನೂ ವಿಷಮ ಸ್ಥಿತಿಗೆ ತಲುಪಬಹುದು. ಬೇಕರಿ ಹಾಗೂ ಆಹಾರೋದ್ಯಮವನ್ನು ಪೋಷಿಸಲು ಸರಕಾರದ ಸಹಕಾರ, ಗ್ರಾಹಕರ ಬೆಂಬಲವಿದ್ದರೆ ನಿಮ್ಮ ಸುರಕ್ಷತೆಯ ಆಹಾರದ ಅಗತ್ಯತೆಗಳಿಗೆ ನಾವು ಸ್ಪಂದಿಸಲಿದ್ದೇವೆ ಎಂದು ಎಲ್ಲಾ ಆಹಾರೋದ್ಯಮಿಗಳ ಒಡಲಾಳದ ಅನಿಸಿಕೆಗಳನ್ನು ತಮ್ಮ ಮುಂದಿಡುತ್ತಿದ್ದೇವೆ.
ರಾಬರ್ಟ್ ಫುರ್ಟಾಡೊ