ಹೈದರಾಬಾದ್: ನಿಜಾಮರ ಕಾಲದ ಬಹುಕೋಟಿ ಮೊತ್ತದ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ಕದ್ದೊಯ್ದಿದ್ದ ಕಳ್ಳರನ್ನು ಹೈದರಾಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಚ್ಚರಿ ಏನೆಂದರೆ, ದರೋಡೆ ಮಾಡಿದಂದಿ ನಿಂದಲೂ ಕಳ್ಳರಲ್ಲೊಬ್ಬ ಈ ದುಬಾರಿ ಬೆಲೆಯ ಬಾಕ್ಸ್‌ನಲ್ಲೇ ಆಹಾರ ಸೇವಿಸು ತ್ತಿದ್ದನಂತೆ!
ಹಾಲಿವುಡ್ ಸಿನಿಮಾ ಮಾದರಿಯಲ್ಲಿ ನಿಜಾಮ್ ಮ್ಯೂಜಿಯಂಗೆ ಲಗ್ಗೆಯಿಟ್ಟಿದ್ದ ಇಬ್ಬರು ದರೋಡೆಕೋರರು, ಅಲ್ಲಿಂದ ಅಮೂಲ್ಯ ವಸ್ತುಗಳನ್ನು ಹೊತ್ತುಕೊಂಡು ಮುಂಬೈಗೆ ಪರಾರಿಯಾಗಿದ್ದರು. ಅನಂತರ ಅಲ್ಲಿನ ಐಷಾರಾಮಿ ಹೋಟೆಲ್ ಒಂದರಲ್ಲಿ ವಸತಿ ಹೂಡಿದ್ದರು.
ಇವರು ಕದ್ದೊಯ್ದ ವಸ್ತುಗಳಲ್ಲಿ ನಿಜಾಮರ ಕಾಲದ ಟಿಫಿನ್ ಬಾಕ್ಸ್ ಕೂಡ ಒಂದು. ನಾಲ್ಕು ಕೆ.ಜಿ. ತೂಕದ ಈ ಟಿಫನ್ ಬಾಕ್ಸ್ ಮೂರು ಹಂತಗಳನ್ನು ಹೊಂದಿದ್ದು, ವಜ್ರ, ಮಾಣಿಕ್ಯ ಮತ್ತು ಪಚ್ಚೆಗಳನ್ನು ಉಪಯೋಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಸ್ವತಃ ನಿಜಾಮನೇ ಈ ಟಿಫನ್ ಬಾಕ್ಸ್ ಬಳಕೆ ಮಾಡಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಕಳ್ಳರಲ್ಲೊಬ್ಬ ಇದನ್ನು ಪ್ರತಿದಿನದ ಆಹಾರ ಸೇವನೆಗೆ ಬಳಸುತ್ತಿದ್ದ ಎಂಬ ಅಂಶವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಸೆ.2ರಂದು ಗ್ರಿಲ್ ಕಿತ್ತು, ಒಳ ನುಗ್ಗಿದ್ದ ಕಳ್ಳರು, ಮೊದಲು ಚಿನ್ನದ ಕವಚದೊಳಗೆ ಇರಿಸಲಾಗಿದ್ದ ಕುರಾನ್ ಅನ್ನು ಕದಿಯಲು ಹೊರಟಿದ್ದರು. ಅದನ್ನು ಸ್ಪರ್ಶಿಸಲು ಮುಂದಾಗುತ್ತಿದ್ದಂತೆ, ಸಮೀಪದ ಮಸೀದಿಯಿಂದ ಆಜಾನ್(ಪ್ರಾರ್ಥನೆಯ ಕರೆ) ಕೇಳಿಬಂದಿತ್ತಂತೆ. ಇದರಿಂದ ಭಯ ಭೀತರಾದ ಕಳ್ಳರು, ಕುರಾನ್ ಅನ್ನು ಬಿಟ್ಟು ಇತರೆ ವಸ್ತುಗಳನ್ನು ಕದ್ದೊಯ್ದಿದ್ದರು ಎಂದಿದ್ದಾರೆ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್. ಕಳ್ಳರ ಪತ್ತೆಗಾಗಿ 22 ತಂಡಗಳನ್ನು ರಚಿಸಿ, 300ಕ್ಕೂ ಹೆಚ್ಚು ಟವರ್‌ಗಳ ಡೇಟಾ ಪರಿಶೀಲಿಸಿ, ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾದೆವು ಎಂದಿದ್ದಾರೆ. ಕದ್ದ ವಸ್ತುಗಳಿಗೆ ದುಬೈ ಮಾರುಕಟ್ಟೆಯಲ್ಲಿ 30-40 ಕೋಟಿ ರೂ.ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.