Advertisement
ಲ್ಯಾರಿಂಜೆಕ್ಟಮಿ ನಡೆಸಿದ ಬಳಿಕ ರೋಗಿಗೆ ಧ್ವನಿಪೆಟ್ಟಿಗೆಯು ಇರುವುದಿಲ್ಲ ಮತ್ತು ಮಾತನಾಡಲು ಸಾಧ್ಯವಾಗುವುದಿಲ್ಲ. ಅಂಥವರು ಟ್ರೇಕಿಯೋಸೊಯಲ್ ಮಾತು, ಈಸೊಫೇಜಿಯಲ್ ಮಾತು ಅಥವಾ ಕೃತಕ ಲ್ಯಾರಿಂಕ್ಸ್‌ನಂತಹ ಮಾತನಾಡುವ ಪರ್ಯಾಯ ವಿಧಾನಗಳನ್ನು ಅವಲಂಬಿಸಬೇಕಾಗುತ್ತದೆ. ಈ ಮೂರು ವಿಧಾನಗಳಲ್ಲಿ ಈಸೊಫೇಜಿಯಲ್ ಸ್ಪೀಕರ್‌ಗಳು ಮಾತು ಉತ್ಪತ್ತಿ ಮಾಡಲು ಸಿಲಿಕಾನ್‌ನಿಂದ ನಿರ್ಮಿಸಲಾದ ಧ್ವನಿ ಪ್ರಾಸ್ಥೆಸಿಸ್ ಗಳನ್ನು ಉಪಯೋಗಿಸುತ್ತವೆ. ಇಲ್ಲಿ ಶ್ವಾಸಕೋಶದಿಂದ ಬರುವ ಗಾಳಿಯನ್ನು ಈಸೋಫೇಗಸ್ ಅಥವಾ ಅನ್ನನಾಳಕ್ಕೆ ತಿರುಗಿಸಿ ಅನ್ನನಾಳದ ಮೇಲ್ಭಾಗ (ಪಿಇ ವಿಭಾಗ) ದಿಂದ ಮಾತು ಉತ್ಪತ್ತಿಯಾಗುತ್ತದೆ. ಲ್ಯಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯು ಎಲ್ಲ ಪ್ರಕರಣಗಳಲ್ಲಿ ಅನ್ನನಾಳಕ್ಕೆ ವ್ಯತ್ಯಯ ಉಂಟುಮಾಡದಿದ್ದರೂ ಈ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ನುಂಗುವುದಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಬಾಯಿಯ ಮೂಲಕ ಆಹಾರ ಸೇವಿಸುವ ಕ್ರಿಯೆಯು ಕ್ಯಾನ್ಸರ್ ಚಿಕಿತ್ಸೆಯ ಪ್ರಕ್ರಿಯೆ ಮತ್ತು ಗುಣ ಹೊಂದುವ ಸಮಯದಲ್ಲಿ ಅನನುಕೂಲ, ವ್ಯತ್ಯಯ ಎದುರಿಸಬಹುದಾಗಿದೆ.
Related Articles
Advertisement
ಸಂರಚನಾತ್ಮಕ ಸಮಸ್ಯೆಗಳಿಂದಾಗಿ ಟ್ರೇಕಿಯೊ-ಈಸೊಫೇಜಿಯಲ್ ಪ್ರಾಸ್ಥೆಟಿಕ್ ಬಳಕೆದಾರರಲ್ಲಿ ತಿನ್ನುವಾಗ ಅಥವಾ ಕುಡಿಯುವಾಗ ಆಹಾರವು ಶ್ವಾಸಮಾರ್ಗಕ್ಕೆ ನುಗ್ಗುವ ಅಪಾಯ ಇರುತ್ತದೆ.
ಲ್ಯಾರಿಂಜೆಕ್ಟಮಿ ರೋಗಿಗಳು ಆಹಾರಾಭ್ಯಾಸದಲ್ಲಿ ಅನುಸರಿಸಬೇಕಾದ ಬದಲಾವಣೆಗಳೇನು? : ಆಹಾರ ಸೇವಿಸುವಾಗ ಸದಾ ನೇರವಾಗಿ ಕುಳಿತಿರುವ ಭಂಗಿಯಲ್ಲಿರಬೇಕು. ಮಲಗಿಕೊಂಡು ಅಥವಾ ಬಿದ್ದುಕೊಂಡ ಸ್ಥಿತಿಯಲ್ಲಿ ಆಹಾರ ಸೇವಿಸಲೇಬಾರದು. ಹಾಗೆ ಮಾಡಿದರೆ ಶ್ವಾಸಮಾರ್ಗಕ್ಕೆ ಆಹಾರವು ನುಗ್ಗುವ ಅಪಾಯ ಇರುತ್ತದೆ, ಅದರಲ್ಲೂ ವಿಶೇಷವಾಗಿ ಟ್ರೆಕಿಯಾ ಈಸೊಫೇಜಿಯಲ್ ಪ್ರಾಸ್ಥೆಸಿಸ್ ಬಳಕೆದಾರರಲ್ಲಿ ಈ ಅಪಾಯ ಇನ್ನೂ ಹೆಚ್ಚು. ಆರಂಭದಲ್ಲಿ ಅರೆ ಘನ ಅಥವಾ ದ್ರವರೂಪದ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಅನ್ನನಾಳದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಬದಲಾವಣೆ ಮಾಡಿದ್ದಾಗ ಅಥವಾ ಧ್ವನಿ ಪ್ರಾಸ್ಥೆಸಿಸ್ ಬಳಕೆದಾರರಲ್ಲಿ ಅದು ಸರಿಯಾಗಿ ಕೆಲಸ ಮಾಡದೆ ಇರುವಾಗ ಘನ ಆಹಾರವನ್ನು ಸೇವಿಸುವುದು ಕಷ್ಟವಾಗುತ್ತದೆ ಅಥವಾ ಅಸುರಕ್ಷಿತವಾಗಿರುತ್ತದೆ. ಆಮ್ಲಿಯ ಮತ್ತು ಮಸಾಲೆಯುಕ್ತ, ಖಾರವಾದ ಆಹಾರವು ಉರಿ ಮತ್ತು ತೊಂದರೆಯನ್ನು ಉಂಟು ಮಾಡುವುದರಿಂದ ದೂರವಿಡುವುದು ಸೂಕ್ತ. ಘನ-ದ್ರವ ಮಿಶ್ರ ಆಹಾರವನ್ನು ವರ್ಜಿಸಿ, ಒಂದೇ ರೀತಿಯ ಆಹಾರವು ನುಂಗಲು ಸುಲಭ. ಬಾಯಿಯನ್ನು ಆರ್ದ್ರ ಮತ್ತು ಶುಚಿಯಾಗಿ ಇರಿಸಿಕೊಳ್ಳಲು ಆಗಾಗ ನೀರು ಗುಟುಕರಿಸುತ್ತಿರುವುದು ಸೂಕ್ತ.
ದಿನಕ್ಕೆ ಮೂರು ಬಾರಿ ಸೇವಿಸುವ ಆಹಾರವನ್ನು ರೋಗಿಯು ನಾಲ್ಕೈದು ಬಾರಿ ಸಣ್ಣ ಸಣ್ಣ ಪ್ರಮಾಣಗಳಲ್ಲಿ ಸೇವಿಸುವಂತೆ ವಿಭಜಿಸಿ ಸೇವಿಸಬೇಕು. ಆಹಾರದ ಪ್ರಮಾಣವನ್ನು ಕಿರಿದುಗೊಳಿಸಿ ಸೇವಿಸುವ ಸರದಿಗಳನ್ನು ಹೆಚ್ಚಿಸುವುದರಿಂದ ದೇಹಕ್ಕೆ ಪೂರೈಕೆಯಾಗುವಪೌಷ್ಟಿಕಾಂಶ ಕಡಿಮೆಯಾಗುವುದಿಲ್ಲ. ಅಲ್ಲದೆ ಇದು ರೋಗಿಗೆ ಹೊರೆಯೂ ಆಗುವುದಿಲ್ಲ. ರೋಗಿಯು ಘನ ಆಹಾರಗಳನ್ನು ನುಂಗಲು ಶಕ್ತನಾಗಿದ್ದರೆ ನುಂಗುವುದಕ್ಕೆ ಸುಲಭವಾಗುವಂತೆ ಆಹಾರ ಸೇವನೆಯ ಜತೆಗೆ ಆಗಾಗ ನೀರು ಗುಟುಕರಿಸಬೇಕು.
ಆಹಾರಾಭ್ಯಾಸವು ಸಮತೋಲಿತವಾಗಿರಬೇಕು, ಪೌಷ್ಟಿಕಾಂಶ ಸಮೃದ್ಧವಾಗಿರಬೇಕು. ಇದರಿಂದ ಗುಣವಾಗುವ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆಯಲ್ಲದೆ ದಣಿವು ಮತ್ತು ತೂಕ ನಷ್ಟ ಆಗುವುದಿಲ್ಲ. ಅನ್ನ, ಗೋಧಿ,ರಾಗಿ, ಕಿರುಧಾನ್ಯಗಳು, ಬೇಳೆಕಾಳುಗಳು, ಧಾನ್ಯಗಳು (ಹೆಸರುಕಾಳು, ಕಡಲೆ, ಮಸೂರ್ ದಾಲ್, ತೊಗರಿಬೇಳೆ, ರಾಜ್ಮಾ, ತುಪ್ಪ, ಬಟಾಣಿ ಇತ್ಯಾದಿ) ಕಾಬೊìಹೈಡ್ರೇಟ್‌ನ ಉತ್ತಮ ಮೂಲಗಳಾಗಿವೆ. ಪ್ರೊಟೀನ್ ಅಂಶಹೆಚ್ಚಿರುವ ಆಹಾರ ಸೇವಿಸುವುದು ಸೂಕ್ತ. ಪನೀರ್, ಸೋಯಾ ಚಂಕ್‌ಗಳು, ಬೇಳೆಕಾಳು ಮತ್ತು ಬಾದಾಮಿ, ವಾಲ್ನಟ್, ನೆಲಗಡಲೆ, ಪಿಸ್ತಾ ಮುಂತಾದವುಗಳು ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಮಾಂಸಾಹಾರಿಗಳಿಗೆ ಮೀನು ಮತ್ತು ಮೊಟ್ಟೆ ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಪ್ರತೀದಿನ ಎರಡು ಸಲ ಮೊಸರು ಅಥವಾ ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತವಾಗಿದೆ. ಈ ಪ್ರೊಬಯೋಟಿಕ್‌ಗಳ ಸೇವನೆಯು ಧ್ವನಿ ಪ್ರಾಸ್ಥೆಸಿಸ್ (ಲ್ಯಾರಿಂಜೆಕ್ಟೊಮಿ ಚಿಕಿತ್ಸೆಯ ಬಳಿಕ ಟ್ರೇಕಿಯೊಫೇಜಿಯಲ್ ಮೂಲಕ ಮಾತನಾಡುವವರು ಉಪಯೋಗಿಸುವ ಸಾಧನ)ನಲ್ಲಿ ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ. (ಮುಂದಿನ ವಾರಕ್ಕೆ)
ಡಾ| ವೆಂಕಟ್ರಾಜ ಐತಾಳ ಯು.
ಪ್ರೊಫೆಸರ್, ಸ್ಪೀಚ್ ಆ್ಯಂಡ್ ಹಿಯರಿಂಗ್
ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ