Advertisement

ಆಹಾರ ಇಲಾಖೆ ಆಯುಕ್ತರ ಐಡಿಯೇ ಹ್ಯಾಕ್‌!

06:06 PM Feb 19, 2021 | Team Udayavani |

ಸಿಂಧನೂರು: ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ನೀಡುವ ಬಿಪಿಎಲ್‌ ಕಾರ್ಡ್‌ನ್ನು ಕಂಪ್ಯೂಟರ್‌ ಅಂಗಡಿಯಲ್ಲೇ ಮುದ್ರಿಸಿಕೊಡುವುದರ ಜೊತೆಗೆ ರಾಜ್ಯ ಸರಕಾರದ ತಂತ್ರಾಂಶವನ್ನು ಹ್ಯಾಕ್‌ ಮಾಡಿರುವ ಪ್ರಕರಣ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ. ಐಎಎಸ್‌ ದರ್ಜೆಯ ಆಹಾರ ಇಲಾಖೆ
ಆಯುಕ್ತರಿಗೆ ಇರುವ ಕೆಲವು ತಾಂತ್ರಿಕ ಅನುಮೋದನೆಯ ಐಡಿಗಳನ್ನು ಹ್ಯಾಕ್‌ ಮಾಡುವ ಮೂಲಕ ಕಂಪ್ಯೂಟರ್‌ ಅಂಗಡಿಯಲ್ಲೇ ಇಲಾಖೆಯ ಶಕ್ತಿ ಕೇಂದ್ರವನ್ನು ಸೃಷ್ಟಿಸಲಾಗಿದೆ.

Advertisement

ಪಡಿತರ ಅಕ್ಕಿಯನ್ನು ಕಾಳಸಂತೆಗೆ ಸಾಗಣೆ ಮಾಡುವ ದಂಧೆ ವ್ಯಾಪಕವಾಗಿರುವ ಸಂದರ್ಭದಲ್ಲೇ ಇಲಾಖೆಯ ತಂತ್ರಾಂಶವನ್ನೇ ದುರ್ಬಳಕೆ ಮಾಡಿಕೊಳ್ಳುವಷ್ಟು ಈ ಜಾಲ ಬಲಿಷ್ಠವಾಗಿರುವ ಸಂಗತಿ ಅಚ್ಚರಿಗೆ ಕಾರಣವಾಗಿದೆ. ಸಹಜವಾಗಿಯೇ ಇಲಾಖೆ ಆಯುಕ್ತರಿಗೆ ಇರುವ ಅ ಧಿಕಾರವೂ ಕೂಡ ಕಂಪ್ಯೂಟರ್‌ ಅಂಗಡಿಯಲ್ಲಿ ಲಾಗಿನ್‌ ಹ್ಯಾಕ್‌ ಮೂಲಕ ಬಳಕೆಯಾಗಿರುವ ಆಘಾತಕಾರಿ ಬೆಳವಣಿಗೆ ತಾಲೂಕಿನಲ್ಲಿ ನಡೆದಿದೆ.

ವಿಶೇಷ ಅಧಿಕಾರವೂ ಹ್ಯಾಕ್‌: ಆನ್‌ಲೈನ್‌ ವ್ಯವಸ್ಥೆಯನ್ನು ಪಡಿತರ ವಿತರಣೆಗೆ ಜಾರಿಗೊಳಿಸಿದ ನಂತರ ಪಡಿತರ ಚೀಟಿಯ ಫಲಾನುಭವಿಯೊಬ್ಬರ
ಹೆಬ್ಬೆಟ್ಟು ಗುರುತು ಹಾಕಿದ ನಂತರ ಅವರ ಮೊಬೈಲ್‌ ಗೆ ಒಟಿಪಿ ಸಂಖ್ಯೆ ರವಾನೆಯಾಗುತ್ತದೆ. ಅದನ್ನು ನೀಡಿದ ಬಳಿಕವೂ ಅನ್ನಭಾಗ್ಯದ ಆಹಾರ ಧಾನ್ಯ
ಡ್ರಾ ಮಾಡಲಾಗುತ್ತದೆ. ವಯಸ್ಸಾದ ಹಿನ್ನೆಲೆಯಲ್ಲಿ ಹೆಬ್ಬೆಟ್ಟಿನ ರೇಖೆಗಳು ಬೀಳದ ಕಾರಣಕ್ಕೆ, ಅಂಗವೈಕಲ್ಯದ ಹಿನ್ನೆಲೆಯಲ್ಲಿ ಹೆಬ್ಬೆಟ್ಟಿನ ಸಹಿ ಹಾಕದ ಪ್ರಕರಣಗಳಲ್ಲಿ ಮಾತ್ರ ವಿಶೇಷವೆಂದು ಪರಿಗಣಿಸಿ ಪೂರ್ವಾನುಮತಿ ಮೂಲಕ ಆಹಾರ ಧಾನ್ಯವನ್ನು ಮ್ಯಾನುವಲ್‌ ಆಗಿ ವಿತರಿಸಲು ಇಲಾಖೆ ಅವಕಾಶ ಮಾಡಿಕೊಂಡಿದೆ. ಇಂತಹ ಅವಕಾಶವನ್ನು ಬೆಳಗುರ್ಕಿ ಗ್ರಾಮದಲ್ಲಿ ದುರ್ಬಳಕೆ ಮಾಡಿಕೊಂಡು ಆಯುಕ್ತರ ಐಡಿಯನ್ನು ಬಳಸಿಕೊಂಡು 545 ಪಡಿತರದಾರರಿಗೆ
ಮ್ಯಾನುವಲ್‌ ಆಗಿ ಆಹಾರ ಧಾನ್ಯ ವಿತರಿಸಲಾಗಿದೆ.

ಕಂಪ್ಯೂಟರ್‌ ಅಂಗಡಿಯಲ್ಲೇ ಬಿಪಿಎಲ್‌: ವಿಶೇಷ ಎಂದರೆ, ಬಡತನ ರೇಖೆಗಿಂತ ಕೆಳಗಿನವರಿಗೆ ನೀಡುವ ಪಡಿತರ ಚೀಟಿಗೆ ಬೇಡಿಕೆ ಸಲ್ಲಿಸಿದ ಬಳಿಕ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಅದರ ವರದಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಬೇಕು. ಇಂತಹ ಯಾವ ಕ್ರಮವೂ ಇಲ್ಲದೇ ನಗರದ ಕಂಪ್ಯೂಟರ್‌ ಅಂಗಡಿಯೊಂದರಲ್ಲಿ ನೇರವಾಗಿ ಬಡತನ ರೇಖೆಗಿಂತ ಮೇಲಿನ ವ್ಯಕ್ತಿಯೊಬ್ಬರ ಕಾರ್ಡ್‌ನ್ನು ಬಿಪಿಎಲ್‌ ಎಂದು ಪರಿವರ್ತಿಸಿ ನೀಡಲಾಗಿದೆ. ಅದಕ್ಕೆ ಇಲಾಖೆಯಿಂದಲೇ ಆಹಾರ ಧಾನ್ಯವೂ ವಿತರಣೆಯಾಗಿದೆ. ಎಪಿಎಲ್‌ ಕಾರ್ಡ್‌ ಗಳನ್ನು ಇಲಾಖೆಯ ಆಚೆಗೂ ಬಿಪಿಎಲ್‌ ಪರಿವರ್ತಿಸುವ ಜಾಲ ರಾಜ್ಯದಲ್ಲೇ ಮೊದಲ ಬಾರಿಗೆ ಸಿಂಧನೂರಿನಲ್ಲಿ ಬೆಳಕಿಗೆ ಬಂದಿದ್ದು, ಆಹಾರ ಇಲಾಖೆಯ ಪಾರದರ್ಶಕ ನೀತಿಯನ್ನೇ ಅನುಮಾನಿಸುವಂತಾಗಿದೆ.

ತನಿಖೆಯಲ್ಲಿ ಭಾರಿ ಅಕ್ರಮ ಸಾಧ್ಯತೆ?
ರಾಜ್ಯ ಸರಕಾರ ಬಳಸುವ ಎನ್‌ ಐಸಿ ತಂತ್ರಾಂಶವೂ ಸುರಕ್ಷತೆಯನ್ನು ಒಳಗೊಂಡಿರುತ್ತದೆ. ಯಾವುದೇ ಸರಕಾರಿ ತಂತ್ರಾಂಶಗಳನ್ನು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಇಲಾಖೆ ಆಯುಕ್ತರ ಐಡಿಯನ್ನೇ ಹ್ಯಾಕ್‌ ಮಾಡಿ, ಪ್ರತ್ಯೇಕ ಇಲಾಖೆಯನ್ನು ನಡೆಸಲಾಗಿದೆ. ಜತೆಗೆ ಇದಕ್ಕೆ ಸಂಬಂಧಿಸಿ ಬೆಳೆದಿರುವ ದೊಡ್ಡ ಜಾಲವೊಂದರ ಸುಳಿವು ಇಲಾಖೆಯನ್ನು ದಂಗುಪಡಿಸಿದೆ. ಈ ನಡುವೆ ಇಲಾಖೆ ಅಧಿಕಾರಿಗಳನ್ನು ಗುರಿ ಮಾಡಲಾಗಿದ್ದರೂ ಖಾಸಗಿ ವ್ಯಕ್ತಿಗಳು ಸರಕಾರಿ ತಂತ್ರಾಂಶವನ್ನು ಅದರಲ್ಲೂ ಇಲಾಖೆ ಆಯುಕ್ತರು ಬಳಸುವ ಐಡಿಯನ್ನು ಹೇಗೆ ಕಳವು ಮಾಡಲು ಸಾಧ್ಯವಾಯಿತು? ಎಂಬುದು ಅಚ್ಚರಿಗೆ ಕಾರಣವಾಗಿದೆ.

Advertisement

ಶ್ರೀಶೈಲ ಕಂಪ್ಯೂಟರ್‌ ಸೆಂಟರ್‌ನಲ್ಲಿ ಎಪಿಎಲ್‌ ಕಾರ್ಡ್‌ನ್ನು ಬಿಪಿಎಲ್‌ ಆಗಿ ಪರಿವರ್ತಿಸಿದ್ದಕ್ಕೆ ಸಂಬಂಧಿಸಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಇಲಾಖೆಯಿಂದಲೇ ಆಗಬೇಕಾದ ಕೆಲಸವನ್ನು ಅಕ್ರಮವಾಗಿ ನಡೆದ ಬಗ್ಗೆ ತನಿಖೆ ಕೈಗೊಳ್ಳಲು ದೂರು ಸಲ್ಲಿಸಿದ್ದೇವೆ.
ಅಮರೇಶ, ಆಹಾರ ನಿರೀಕ್ಷಕರು, ಆಹಾರ
ಇಲಾಖೆ, ಸಿಂಧನೂರು

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next