Advertisement
ಪರಿಶೀಲನಾ ಪ್ರವಾಸ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013, ಸೆಕ್ಷನ್ 16 ರ ಅನ್ವಯ ರಾಜ್ಯ ಆಹಾರ ಆಯೋಗ ರಚನೆ ಮಾಡಲಾಗಿದ್ದು ಈ ಆಯೋಗದಲ್ಲಿ ಅಧ್ಯಕ್ಷರು ಸೇರಿದಂತೆ ಏಳು ಜನ ಸದಸ್ಯರಿದ್ದು, ರಾಜ್ಯದ ಹಲವು ಜಿಲ್ಲೆಗಳ ಪ್ರವಾಸ ನಡೆಸಿರುವ ಆಹಾರ ಆಯೋಗ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸೋಮವಾರದಿಂದ ಬುಧವಾರವರೆಗೂ ಪರಿಶೀಲನಾ ಪ್ರವಾಸ ಕೈಗೊಂಡಿದೆ.
Related Articles
Advertisement
ದಾಖಲೆ, ಮಾಹಿತಿ ನೀಡಲು ಸೂಚನೆ: ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ, ಅವುಗಳ ತೂಕ, ಅಳತೆ ಸೇರಿದಂತೆ ವಿವಿಧ ಇಲಾಖೆಗಳಡಿಯಲ್ಲಿ ಕಾರ್ಯ ನಿರ್ವಹಿಸುವ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಆಹಾರ ಆಯೋಗವು ಭೇಟಿ ನೀಡಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಹಲವು ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಆಹಾರ ಆಯೋಗದ ತಂಡ ಜಿಲ್ಲೆಗೆ ಭೇಟಿ ನೀಡುವ ವೇಳೆ ಸೂಕ್ತ ದಾಖಲೆ, ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ.
3.12 ಲಕ್ಷ ಪಡಿತರ ಚೀಟಿ: ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ ಬರೋಬ್ಬರಿ 3.12 ಲಕ್ಷ ಪಡಿತರ ಚೀಟಿಗಳು ಇದ್ದು, ಪ್ರತಿ ತಾಲೂಕಿನಲ್ಲಿ ಆಹಾರ ಇಲಾಖೆ ದಾಸ್ತಾನು ಕೊಠಡಿಗಳನ್ನು ಹೊಂದಿದೆ. ಸುಮಾರು 541 ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚಿದ ಕಳಪೆ ಆಹಾರ ಸಾಮಗ್ರಿ: ಇತ್ತೀಚೆಗೆ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿತರಿಸುವ ಆಹಾರ ಪದಾರ್ಥಗಳು ಸಾಕಷ್ಟು ಕಳಪೆ ಗುಣಮಟ್ಟದಿಂದ ಕೂಡಿವೆಯೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಇದಕ್ಕೆ ಆಹಾರ ಆಯೋಗದ ತಂಡ ಜಿಲ್ಲೆಯ ಜನರ ಬಳಿ ಯಾವ ರೀತಿ ಅಹವಾಲು ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚೆಗೆ ರಾಗಿ, ಅಕ್ಕಿಯಲ್ಲಿ ಸಾಕಷ್ಟು ಕಲ್ಲು ಮಿಶ್ರಣಗೊಂಡಿದ್ದು ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿತ್ತು. ಮತ್ತೂಂದೆಡೆ ಸಕಾಲದಲ್ಲಿ ನ್ಯಾಯಬೆಲೆ ಅಂಗಡಿಗಳು ತೆರೆಯದೇ ಗ್ರಾಮೀಣ ಭಾಗದ ರೈತಾಪಿ ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಇನ್ನೂ ತೂಕ, ಅಳತೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕುವ ರೀತಿಯಲ್ಲಿ ಆಹಾರ ಆಯೋಗ ಯಾವ ರೀತಿಯ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜಿಲ್ಲೆಗೆ ಇದೇ ಮೊದಲ ಬಾರಿಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ನೇತೃತ್ವದಲ್ಲಿ ಆಯೋಗದ ಸದಸ್ಯರು ಜಿಲ್ಲೆಗೆ ಆಗಮಿಸುತ್ತಿದ್ದು, ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ವಾಸ್ತವ್ಯ ಇದ್ದು, ಆಹಾರ ಪದಾರ್ಥಗಳ ಗುಣಮಟ್ಟ, ತೂಕ, ಅಳತೆ ಸೇರಿದಂತೆ ವಿವಿಧ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಆಯೋಗ ಭೇಟಿ ನೀಡಲಿದೆ.-ಲಕ್ಷ್ಮೀನಾರಾಯಣರೆಡ್ಡಿ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ