Advertisement

ನಾವಿದ್ದಲ್ಲಿಗೆ ಬರುತ್ತೆ ಹೋಟೆಲ್ಖಾದ್ಯ

09:28 AM Aug 06, 2019 | Suhan S |

ಹುಬ್ಬಳ್ಳಿ: ಹೊಟೇಲ್ಗಳಿಗೆ ಹೋಗಿ ರುಚಿ ರುಚಿಯಾದ ಖಾದ್ಯಗಳನ್ನು ಸೇವಿಸುವ ಪರಿಪಾಠದಲ್ಲಿ ಈಗ ಬದಲಾವಣೆಯಾಗಿದೆ. ಹೊಟೇಲ್ಗೆ ಹೋಗುವುದು ಕೂಡ ಕೆಲವರಿಗೆ ಬೇಸರ ಮೂಡಿಸಿದ್ದು, ಹೊಟೇಲ್ ಖಾದ್ಯಗಳನ್ನು ನಾವಿರುವಲ್ಲಿಗೆ ತಂದು ಒದಗಿಸಲು ಸೇವಾ ಸಂಸ್ಥೆಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

Advertisement

ಹೊಟೇಲ್ಗೆ ಹೋಗಬೇಕೆಂದರೆ ಪಾರ್ಕಿಂಗ್‌ ಸಮಸ್ಯೆ, ವೇಟಿಂಗ್‌ ಸಮಸ್ಯೆಯಿಂದಾಗಿ ಹೊಟೇಲ್ ಖಾದ್ಯವನ್ನು ಮನೆಗಳಿಗೆ ತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ನಿಯಾಜ್‌ ಹೊಟೇಲ್ ಬಿರಿಯಾನಿ, ಕೆನರಾ ಹೊಟೇಲ್ ಪೂರಿ-ಭಾಜಿ, ಬಸವೇಶ್ವರ ಖಾನಾವಳಿ ರೊಟ್ಟಿ ಊಟ, ಜುಮಾನ್‌ ಹೊಟೇಲ್ನ ಸಾವಜಿ ಸ್ಪೇಷಲ್,ಅಯೋಧ್ಯಾ ಹೊಟೇಲ್ನ ಮಸಾಲೆ ದೋಸೆ ಸವಿಯಬೇಕೆಂದರೆ ಹೊಟೇಲ್ಗೆ ಹೋಗಬೇಕೆಂದೇನಿಲ್ಲ. ಮೊಬೈಲ್ ಮೂಲಕ ಖಾದ್ಯ ಸರಬರಾಜು ಸಂಸ್ಥೆಗಳಿಗೆ ಆರ್ಡರ್‌ ಮಾಡಿದರೆ ಸಾಕು, ಕೆಲವೇ ನಿಮಿಷಗಳಲ್ಲಿ ನೀವು ಬಯಸುವ ಖಾದ್ಯಗಳು ಡಿಲೆವರಿ ಬಾಯ್ಸ ಮೂಲಕ ಮನೆಗೆ ತಲುಪುತ್ತವೆ. ಖಾದ್ಯ ಪೂರೈಕೆ ಸಂಸ್ಥೆಗಳು ರೆಸ್ಟೋರೆಂಟ್‌ಗಳಿಂದ ಕಮೀಷನ್‌ ಪಡೆಯುತ್ತವೆ.

ಜೊಮ್ಯಾಟೊ ಹಾಗೂ ಸ್ವಿಗಿ ಖಾದ್ಯ ಪೂರೈಸುವ ಸಂಸ್ಥೆಗಳು ಕೇವಲ ಮೆಟ್ರೋಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೀಗ ಅವಳಿ ನಗರದ ಜನರೂ ಇವುಗಳ ಸೇವೆ ಬಳಸಿಕೊಳ್ಳುತ್ತಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಸ್ವಿಗಿ, ಜೊಮ್ಯಾಟೊ ಟಿ ಶರ್ಟ್‌ ಹಾಕಿಕೊಂಡು ಸ್ಕೂಟರ್‌ಗಳಲ್ಲಿ ಧಾವಂತದಿಂದ ಸಂಚರಿಸುವವರು ಸಾಮಾನ್ಯವಾಗಿ ಕಂಡು ಬರುತ್ತಾರೆ.

ಕೇಶ್ವಾಪುರ, ಡಾಲರ್ ಕಾಲೊನಿ, ಅರ್ಜುನ ವಿಹಾರ, ಗಾಂಧಿ ನಗರ, ರೇಣುಕಾ ನಗರ, ಮಂಜುನಾಥ ನಗರ, ಶಬರಿ ನಗರ, ಮಧುರಾ ಕಾಲೊನಿ, ಕೋಟಿಲಿಂಗ ನಗರ, ಜಯಪ್ರಕಾಶ ನಗರ, ಅಕ್ಷಯ ಪಾರ್ಕ್‌, ಅರ್ಜುನ ವಿಹಾರ, ಕೆಇಸಿ, ಫಾರೆಸ್ಟ್‌ ಕಾಲೊನಿ, ಬಾದಾಮಿ ನಗರ, ವಿಶ್ವೇಶ್ವರ ನಗರ, ರಾಜನಗರ, ವಿಜಯನಗರ, ಚಂದ್ರನಾಥ ನಗರ ಸೇರಿದಂತೆ ಹಲವು ಬಡಾವಣೆಗಳ ನಿವಾಸಿಗಳು ಹೆಚ್ಚಾಗಿ ಜೊಮ್ಯಾಟೊ, ಸ್ವಿಗಿ ಅವಲಂಬಿಸಿದ್ದಾರೆ. ಕಚೇರಿಗೆ ಅಥವಾ ಮನೆಗೆ ಊಟ ತರಿಸಿ ತಿನ್ನುವ ಪರಿಪಾಠ ಬೆಳೆಯುತ್ತಿರುವುದರಿಂದ ಬಾಡಿಗೆ ಕಾರು ಸಂಚಾರ ಸೇವೆ ಒದಗಿಸುವ ಉಬೇರ್‌ ಕೂಡ ‘ಉಬೇರ್‌ ಈಟ್ಸ್‌’ ಸೇವೆ ಆರಂಭಿಸಿದೆ.

ನಗರದಲ್ಲಿ ಕೇವಲ ಪಿಜ್ಜಾ ಮಾರಾಟ ಮಾಡುವ ಡೊಮಿನೋಜ್‌, ಮೆಕ್‌ಡೊನಾಲ್ಡ್ಸ್ ಸಂಸ್ಥೆಗಳು ಮಾತ್ರ ಗ್ರಾಹಕರಿಗೆ ಡೆಲಿವರಿ ಬಾಯ್‌ಗಳ ಮೂಲಕ ಪೂರೈಸುತ್ತಿದ್ದವು. ಕೆಲ ವೆಜ್‌ ಹಾಗೂ ನಾನ್‌ವೆಜ್‌ ಹೊಟೇಲ್ಗಳು ತಮ್ಮ ಹೊಟೇಲ್ಗಳ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದವು.

Advertisement

ಮನೆಯೂಟ ಬೇಸರವಾದಾಗ ಹೊಟೇಲ್ಗೆ ಹೋಗುವುದು ಸಹಜವಾಗಿತ್ತು. ಆದರೆ ಬ್ಯಾಚಲರ್‌ಗಳು, ಗಂಡ-ಹೆಂಡತಿ ಇಬ್ಬರೂ ಹೊರಗೆ ಕೆಲಸಕ್ಕೆ ಹೋಗುವವರು ಹೊಟೇಲ್ಗಳನ್ನು ಅವಲಂಬಿಸುವುದು ಸಾಮಾನ್ಯವಾಗಿದೆ. ವಾರಪೂರ್ತಿ ಅಡುಗೆ ಮನೆಯಲ್ಲಿ ದುಡಿದ ಮಹಿಳೆಯರಿಗೆ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕೋ ಅಥವಾ ಬಾಯಿರುಚಿ ಬದಲಾಗಲಿ ಎಂಬ ಕಾರಣಕ್ಕೋ ಹೊಟೇಲ್ನಲ್ಲಿ ತಿನ್ನುವ ಅಭ್ಯಾಸ ಹೆಚ್ಚಾಗಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ದಿಸೆಯಲ್ಲಿ ರೆಸ್ಟೊರೆಂಟ್‌ಗಳು ಕೂಡ ಖಾದ್ಯ ಪೂರೈಸುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗುತ್ತಿವೆ.

ವಾರಾಂತ್ಯದಲ್ಲಿ ಹೊಟೇಲ್ಗಳಿಂದ ಭೋಜನ ತರಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹಲವು ನಿಮಿಷಗಳಲ್ಲಿಯೇ ಖಾದ್ಯವನ್ನು ಪೂರೈಸಲು ಸಾಧ್ಯವಾಗುವುದರಿಂದ ತಾಜಾ ಖಾದ್ಯ ಸೇವಿಸಲು ಸಾಧ್ಯವಾಗುವುದರಿಂದ ಮನೆಯಲ್ಲೇ ಕುಳಿತು ಖಾದ್ಯ ಸವಿಯಲು ಬಯಸುತ್ತಾರೆ. ದುಡಿಯುವ ವರ್ಗದವರು ಮಾತ್ರವಲ್ಲ, ಹಾಸ್ಟೆಲ್ಗಳಲ್ಲಿ ವಾಸ ಮಾಡುವ ವಿದ್ಯಾರ್ಥಿಗಳು ತಾವಿರುವ ಕಡೆಯಲ್ಲೇ ಹೊಟೇಲ್ ಖಾದ್ಯಗಳನ್ನು ತರಿಸಿಕೊಂಡು ಸವಿಯುತ್ತಿದ್ದಾರೆ. ಜೊಮ್ಯಾಟೊ, ಸ್ವಿಗಿ ಸಂಸ್ಥೆಗಳು ಸ್ಥಳಿಯ ನೂರಾರು ಯುವಕರಿಗೆ ಉದ್ಯೋಗ ನೀಡಿವೆ.

ವಾರಾಂತ್ಯದಲ್ಲಿ ಕುಟುಂಬದ ಸದಸ್ಯರ ಬಯಕೆಯಂತೆ ಆರ್ಡರ್‌ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಖಾದ್ಯ ಮನೆಗೆ ತಲುಪುತ್ತದೆ. ಕುಟುಂಬ ಸಮೇತರಾಗಿ ತಾಜಾ ಆಹಾರ ಸವಿಯಬಹುದು. ಹೋಟೆಲ್ಗಳಂತೆ ಬೇಗನೇ ಊಟ ಮುಗಿಸುವ ಒತ್ತಡ ಇರಲ್ಲ. ಹೊಟೇಲ್ಗೆ ಹೋಗಿ ಬರುವ ಸಮಯ ಉಳಿಯುತ್ತದೆ. •ಪ್ರಶಾಂತ ಕುಲಕರ್ಣಿ, ವಿಜಯನಗರ ನಿವಾಸಿ

ಧಾವಂತವಿದ್ದರೂ ಸಮಯಕ್ಕೆ ಅನುಗುಣವಾಗಿ ಖಾದ್ಯಗಳನ್ನು ಪೂರೈಸುವುದು ಮುಖ್ಯ. ತಾಜಾ ಇದ್ದಾಗಲೇ ತಿಂದು ಗ್ರಾಹಕರು ಸಂತೃಪ್ತರಾದರೆ ಮತ್ತೆ ನಮ್ಮ ಸಂಸ್ಥೆಯಿಂದ ಸೇವೆ ಪಡೆಯಲು ಮುಂದಾಗುತ್ತಾರೆ. ಉದ್ಯೋಗ ನೀಡಿದ ಸಂಸ್ಥೆ ಬೆಳೆದರೆ ನಮ್ಮ ಏಳ್ಗೆಯಾಗುತ್ತದೆ. •ಆನಂದ, ಸ್ವಿಗಿ ಡಿಲೇವರಿ ಬಾಯ್‌

24ದೇಶಗಳಲ್ಲಿ ಜೊಮ್ಯಾಟೊ:

ದೀಪಿಂದರ್‌ ಗೋಯಲ್ ಹಾಗೂ ಪಂಕಜ್‌ ಛಡ್ಡಾ 2008ರಲ್ಲಿ ರೆಸ್ಟೋರೆಂಟ್‌ಗಳ ಸಂಪರ್ಕ ಕಲ್ಪಿಸುವ ಜೊಮ್ಯಾಟೊ ಸಂಸ್ಥೆ ಆರಂಭಿಸಿದರು. ಇದು ಗ್ರಾಹಕರಿದ್ದಲ್ಲಿಗೆ ಹೊಟೇಲ್ ಖಾದ್ಯಗಳನ್ನು ನೀಡುವ ಸೇವೆ ಆರಂಭಿಸಿತು. ಸದ್ಯ ವಿಶ್ವದ 24ದೇಶಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅದೇ ರೀತಿ ಶ್ರೀಹರ್ಷ ಮಾಜೆತಿ ಹಾಗೂ ರೆಡ್ಡಿ ಅವರು ರಾಹುಲ್ ಜೈಮಿನಿ ಸಹಯೋಗದಲ್ಲಿ 2014ರಲ್ಲಿ ಬೆಂಗಳೂರಿನಲ್ಲಿ ಸ್ವಿಗಿ ಆರಂಭಿಸಿದರು. ಗುಣಮಟ್ಟದ ಸೇವೆಯಿಂದ ಪ್ರಸಿದ್ಧಿ ಪಡೆದ ಸಂಸ್ಥೆಯಾಗಿದೆ.
ಬಾಯ್ಸಗೆ ದಾರಿ ಬಿಡಿ:

ಸಂಚಾರ ದಟ್ಟಣೆಯಾದಾಗ, ರಸ್ತಾ ರೋಕೋ ಆದಾಗ ಆಂಬ್ಯುಲೆನ್ಸ್‌ಗೆ ಸಾಗಲು ಅವಕಾಶ ನೀಡುವಂತೆ ಸ್ವಿಗಿ ಹಾಗೂ ಜೊಮ್ಯಾಟೊ ಡಿಲೇವರಿ ಬಾಯ್ಸಗಳ ಸ್ಕೂಟರ್‌ಗಳಿಗೂ ದಾರಿ ಮಾಡಿಕೊಡಬೇಕು. ಏಕೆಂದರೆ ಆಹಾರಕ್ಕಾಗಿ ಹಾತೊರೆಯುತ್ತಿರುವ ವ್ಯಕ್ತಿಗಳಿಗೆ ಆಹಾರ ಪೂರೈಸುವ ಪವಿತ್ರ ಕಾಯಕ ಇದಾಗಿದೆ. ಹಸಿದವರಿಗೆ ಆಹಾರ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಜೋಕ್‌ ಹರಿದಾಡುತ್ತಿದೆ.
•ವಿಶ್ವನಾಥ ಕೋಟಿ
Advertisement

Udayavani is now on Telegram. Click here to join our channel and stay updated with the latest news.

Next