Advertisement
10ರಿಂದ 19 ವರ್ಷ ವಯೋಮಾನದ ನಡುವಿನ ಮಕ್ಕಳನ್ನು ನಾವು ಹದಿಹರೆಯದವರು ಎಂದು ಗುರುತಿಸುತ್ತೇವೆ. ಬಾಲ್ಯದಿಂದ ಪ್ರೌಢ ವಯಸ್ಸಿನೆಡೆಗೆ ಪರಿವರ್ತನೆ ಹೊಂದುವ ಹಂತವನ್ನು ಹದಿಹರೆಯ ಎಂದು ಕರೆಯಲಾಗುತ್ತಿದ್ದು, ಈ ಹಂತದಲ್ಲಿ ದೈಹಿಕ, ಜೀವ ರಾಸಾಯನಿಕ ಮತ್ತು ಭಾವನಾತ್ಮಕ ಬೆಳವಣಿಗೆಗಳು ವೇಗೋತ್ಕರ್ಷ ಸ್ಥಿತಿಯಲ್ಲಿರುತ್ತವೆ. ಈ ಸಂದರ್ಭದಲ್ಲಿ ಹಾರ್ಮೋನುಗಳ ಪ್ರಭಾವದಿಂದ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಘಟಿಸುತ್ತವೆ.
Related Articles
Advertisement
ಹದಿಹರೆಯದವರು ಹೆಚ್ಚು ಸ್ವತಂತ್ರರಾಗಿರಲು ಆರಂಭಿಸುತ್ತಾರೆ ಮತ್ತು ತಮ್ಮದೇ ಆಹಾರ ಆಯ್ಕೆಗಳನ್ನು ಮಾಡಿಕೊಳ್ಳಲು ಆರಂಭಿಸುತ್ತಾರೆ. ಗೆಳೆಯ -ಗೆಳತಿಯರೊಂದಿಗೆ ಹೆಚ್ಚು ಗುರುತಿಸಿಕೊಳ್ಳಲು ಬಯಸುತ್ತಾರೆ ಮತ್ತು ತಾವು ಬಯಸಿದ್ದನ್ನು ಖರೀದಿಸಲು ಅರೆಕಾಲಿಕ ಉದ್ಯೋಗ ಹುಡುಕಿಕೊಳ್ಳುವುದು ಕೂಡ ಹೊಸದಲ್ಲ.ನೀವು ಇನ್ನೂ ಕೂಡ ಬೆಳೆಯುತ್ತಿರುವುದರಿಂದ ಆರೋಗ್ಯವಂತರಾಗಿರಲು ಮತ್ತು ಚೆನ್ನಾಗಿರಲು ಪ್ರಾಮುಖ್ಯವಾಗಿರುವ ಕೆಲವು ವಿಟಮಿನ್‌ಗಳು ಮತ್ತು ಖನಿಜಾಂಶಗಳು ಈ ಸಮಯದಲ್ಲಿ ದೇಹಕ್ಕೆ ಒದಗುವಂತೆ ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡಗಳು ಹದಿಹರೆಯ ದವರ ಊಟೋಪಹಾರ ಪ್ರವೃತ್ತಿಗಳ ಮೇಲೆ ಪ್ರಭಾವ ಬೀರುತ್ತವೆ. ಹುಡುಗರು ಹುಡುಗಿಯರಿಗಿಂತ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತಾರೆ. ಈ ಹೆಚ್ಚು ಪ್ರಮಾಣದಿಂದಲೇ ಅವರಿಗೆ ಅಗತ್ಯವಾದ ಪೌಷ್ಟಿಕಾಂಶಗಳು ಪೂರೈಕೆಯಾಗುತ್ತವೆ. ದೈಹಿಕವಾದ ಲಿಂಗ ಭೇದ ಮತ್ತು ಈ ಸಮಯದಲ್ಲಿ ಅದಕ್ಕೆ ಸಂಬಂಧಿಸಿ ಕೊಬ್ಬು ಶೇಖರವಾಗುವುದರಿಂದಾಗಿ ಹಾಗೂ ಹುಡುಗರಿಗೆ ಹೋಲಿಸಿದರೆ ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಹುಡುಗಿಯರು ದೈಹಿಕ ತೂಕ ಬೆಳೆಯಿಸಿಕೊಳ್ಳುವುದು ಹೆಚ್ಚು. ಸೂಕ್ತ ಪ್ರಮಾಣದ, ಸಮರ್ಪಕ ಆಹಾರ ಸೇವನೆಯತ್ತ ನಿರ್ಲಕ್ಷ್ಯ ವಹಿಸಿದರೆ ದೂರಗಾಮಿ ದುಷ್ಪರಿಣಾಮಗಳುಳ್ಳ ಆಹಾರ ಸೇವನೆಯ ಅಸಹಜತೆಗಳಾದ ಅನೊರೆಕ್ಸಿಯಾ ಮತ್ತು ಬುಲಿಮಿಯಾಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಕೆಟ್ಟ ಆಹಾರ ಶೈಲಿಗಳನ್ನು ಬೆಳೆಸಿಕೊಳ್ಳುವ “ಖ್ಯಾತಿ’ ಹದಿಹರೆಯದವರಿಗೆ ಇದ್ದೇ ಇದೆ. ಅವರು ಆಗಾಗ ಊಟೋಪಹಾರಗಳನ್ನು ಅದರಲ್ಲೂ ವಿಶೇಷವಾಗಿ ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುತ್ತಾರೆ. ಬೆಳಗಿನ ಉಪಾಹಾರ ಸೇವಿಸುವವರು ಕೂಡ ಪೌಷ್ಟಿಕಾಂಶಯುಕ್ತವಲ್ಲದ್ದನ್ನು ಸೇವಿಸುವ ಸಾಧ್ಯತೆ ಹೆಚ್ಚು. ಆಹಾರ ಸೇವನೆಗೆ ಸಂಬಂಧಿಸಿದ ತೊಂದರೆಗಳು, ಗೆಳೆಯ – ಗೆಳತಿಯರ ಒತ್ತಡ, ಸಮಯದ ಕೊರತೆ ಮತ್ತು ಪೌಷ್ಟಿಕಾಂಶಗಳ ಪ್ರಾಮುಖ್ಯದ ಕುರಿತು ಅರಿವಿನ ಕೊರತೆ- ಹೀಗೆ ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹದಿಹರೆಯದವರು ಕ್ಯಾಲ್ಸಿಯಂ, ವಿಟಮಿನ್‌ಗಳು ಕನಿಷ್ಠ ಪ್ರಮಾಣದಲ್ಲಿರುವ, ಆದರೆ ಸ್ಯಾಚುರೇಟೆಡ್ ಕೊಬ್ಬು, ಕ್ಯಾಲೊರಿಗಳು ಮತ್ತು ಸೋಡಿಯಂ ಯಥೇತ್ಛ ಪ್ರಮಾಣದಲ್ಲಿರುವ ಜಂಕ್ ಫುಡ್‌ಗಳನ್ನು ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಉದಾಹರಣೆಗೆ ಚಿಪ್ಸ್, ಸಮೋಸಾ, ಬೇಕರಿ ಉತ್ಪನ್ನಗಳು ಇತ್ಯಾದಿ.
ಹದಿಹರೆಯದಲ್ಲಿ ಡಯಟಿಂಗ್ ಆರಂಭಿಸುವುದರಿಂದ ಹದಿಹರೆಯದವರು ಅನಾರೋಗ್ಯಯುತ ಆಹಾರಾಭ್ಯಾಸಗಳು, ದೈಹಿಕವಾಗಿ ಸೋಗು ಹಾಕುವ ಪ್ರವೃತ್ತಿಗಳಂತಹ ತೊಂದರೆಗೆ ಸಿಲುಕುವ ಅಪಾಯ ಹೊಂದುತ್ತಾರೆ. ಡಯಟಿಂಗ್ ನಡೆಸುವವರು ಸೀಮಿತ ಸಮಯದಲ್ಲಿ ಪಥ್ಯಾಹಾರ ಸೇವನೆಯ ಅಭ್ಯಾಸ ಹೊಂದಿರುತ್ತಾರೆ. ಇದರ ಬದಲು ಅವರು ಫಾಸ್ಟ್ ಫುಡ್‌ಗಳನ್ನು ತ್ಯಜಿಸುವುದರಂತಹ ದೀರ್ಘಕಾಲಿಕ ವರ್ತನಾತ್ಮಕ ಬದಲಾವಣೆಗಳನ್ನು ತಂದುಕೊಳ್ಳಬೇಕು; ಬೆಳಗಿನ ಉಪಾಹಾರದಿಂದ ಆರಂಭಿಸಿ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು ಹಾಗೂ ಸಾಕಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು.
ಹದಿಹರೆಯದವರಿಗೆ ಪೌಷ್ಟಿಕಾಂಶಗಳು ಏಕೆ ಪ್ರಾಮುಖ್ಯ?ಬದುಕಿನ ಈ ನಿರ್ಣಾಯಕ ವಯೋಮಾನದಲ್ಲಿ ಪೌಷ್ಟಿಕಾಂಶ ಕೊರತೆಗೆ ಒಳಗಾದರೆ ಅದು ಭವಿಷ್ಯದಲ್ಲಿ ಸ್ವಯಂ ಮತ್ತು ಸಂತಾನದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವುದು ನಿಶ್ಚಿತ. ಪೌಷ್ಟಿಕಾಂಶ ಸ್ಥಿತಿ ಮತ್ತು ದೈಹಿಕ ಬೆಳವಣಿಗೆಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದು, ಪೂರ್ಣ ಪ್ರಮಾಣದ ಬೆಳವಣಿಗೆಯ ಸಾಧ್ಯತೆ ಕೈಗೂಡುವುದಕ್ಕೆ ಸಂಪೂರ್ಣ ಪೌಷ್ಟಿಕಾಂಶ ಪೂರೈಕೆಯು ಅತ್ಯಂತ ಅಗತ್ಯವಾಗಿದೆ. ಹದಿಹರೆಯದವರಿಗೆ ದಿನಕ್ಕೆ ಸರಿಸುಮಾರು 2,200 ಕ್ಯಾಲೊರಿಗಳು ಬೇಕು. ಇದು ಬಾಲ್ಯಕಾಲದ ಆವಶ್ಯಕತೆಗಿಂತ ಗಮನಾರ್ಹ ಹೆಚ್ಚಳವಾಗಿರುತ್ತದೆ. ಈ ಕ್ಯಾಲೊರಿ ಅಗತ್ಯವನ್ನು ಪೂರೈಸುವುದಕ್ಕಾಗಿ ಹದಿಹರೆಯದವರು ತೆಳು ಪ್ರೊಟೀನ್ ಮೂಲಗಳು, ಕಡಿಮೆ ಕೊಬ್ಬಿನ ಹೈನು ಉತ್ಪನ್ನಗಳು, ಇಡೀ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ವೈವಿಧ್ಯಮಯ ಆರೋಗ್ಯಯುತ ಆಹಾರವಸ್ತುಗಳನ್ನು ಸೇವಿಸಬೇಕಾಗುತ್ತದೆ. -ಮುಂದುವರಿಯುವುದು -ರಮ್ಯಾ ಭಾಗವತ್,
ಪಥ್ಯಾಹಾರ ತಜ್ಞೆ
ಕೆ.ಎಂ.ಸಿ., ಮಣಿಪಾಲ.