Advertisement
ಮಾರ್ಚ್ ತಿಂಗಳಿನಲ್ಲಿ ಪ್ರವಾಸದ ಯೋಜನೆ ಹಾಕಿದ್ದ ಪದವಿ ಗೆಳೆಯರ ಗಣಕ್ಕೆ ಜೂನ್ ತಿಂಗಳಿನವರೆಗೂ ಕಾರ್ಯಗತಗೊಳಿಸೋದು ಸಾಧ್ಯ ಆಗಿರಲಿಲ್ಲ ..ಅದ್ಹೇಗೋ ಜುಲೈ ಮೊದಲ ವಾರದಲ್ಲಿ ಪರ್ಯಟನೆಗೆ ದಿನ ನಿಗದಿ ಮಾಡಿದ್ದಾಗಿತ್ತು..ಅದಾಗಷ್ಟೆ ಮುಂಬೈನಿಂದ ಬಂದಿದ್ದ ನನಗೆ ಪ್ಲಾನ್ ಬಗ್ಗೆ ಸ್ಪಷ್ಟತೆ ಅಷ್ಟಾಗಿ ಇದ್ದಿರಲಿಲ್ಲ. ಕೊನೆಗೂ ಅಳೆದು ತೂಗಿ ಕಾರ್ಕಳದ ಬಳಿಯ ಮಾಳ ಎಂಬಲ್ಲಿಯ ಜೋಯಿಸರ ಗುಂಡಿ ಜಲಪಾತಕ್ಕೆ ತೆರಳುವುದು ಎಂಬ ನಿರ್ಧಾರ ಮಾಡಿದೆವು.
ನಾವು ಹೊರಟಿದ್ದು ಭಾನುವಾರ ಆದ ಕಾರಣವೋ ಏನೋ ಮಾಳಕ್ಕೆ ತೆರಳುವ ಬಸ್‌ಗಳು ಹೆಚ್ಚಾಗಿ ಲಭ್ಯ ಇರಲಿಲ್ಲ. ನಮ್ಮ ಪದವಿ ದಿನಗಳ ಸಹಾಪಾಠಿ ಓರ್ವಳು ಅದೇ ಊರಿನ ವಳಾಗಿದ್ದ ಕಾರಣ, ನಮ್ಮ ಪ್ರವಾಸದ ರೂಪುರೇಷೆ ತಯಾರಿಸಿದ್ದಳು. ಕಾದು ಸುಸ್ತಾದ ನಮಗೆ ಬಸ್ ಸಿಕ್ಕಿದ್ದು 12 ರ ಅಂಚಿಗೆ. ನಾವು ಬರೋ ಹಿಂದಿನ ವಿಪರೀತ ಸುರಿದ ತುಹಿನಧಾರೆ ನಾವು ಬಂದ ದಿನ ಸ್ವಲ್ಪ ವಿರಾಮ ತೆಗೆದುಕೊಂಡಿತ್ತು. ಆಕೆಯ ಮನೆಯಲ್ಲೇ ಮಧ್ಯಾಹ್ನದ ಭೋಜನ ಸವಿದು, ಜಲಪಾತದ ಜಲಕ್ ಪಡೆಯಲು ತೆರಳಿದೆವು. ನಮ್ಮ ಜತೆಗೆ ದಾರಿ ತೋರಿಸುವ ಸಲುವಾಗಿ ಸ್ಥಳೀಯ ಯುವಕರೀರ್ವರು ಸೇರಿಕೊಂಡರು. ಜಲಲ ಜಲಧಾರೆ
ಜನ ಸಂಪರ್ಕ ಅಷ್ಟಾಗಿ ಇಲ್ಲದ ನಿರ್ಮಲ, ಸಲಿಲ ನರ್ತನ ಮನಸ್ಸಿಗೆ ತಂಪನ್ನೆರೆದಿತ್ತು. ಜಿಟಿ ಜಿಟಿ ಮಳೆ, ಹಾಲ್ನೊರೆಯಂಥಾ ಝರಿಯ ಧುಮ್ಮಿಕ್ಕುವ ದನಿ ಕಿವಿಗೆ ಇಂಪೆರೆದಿತ್ತು. ಸ್ಫಟಿಕ ಬಣ್ಣದ ನೀರು ಕಾಲನ್ನು ತೊಯ್ದರೆ, ತುಂತುರು ಮಳೆ ತಲೆಯನ್ನು ತೊಯ್ದು ಇಡೀ ವಾತಾವರಣ ಆಹ್ಲಾದಮಯ ಎನಿಸಿತ್ತು. ನಿಸರ್ಗದ ರಮಣೀಯ ದೃಶ್ಯಕ್ಕೆ ಫೋಟೋಶೂಟ್, ಸೆಲ್ಫಿ ಹಪಹಪಿಕೆಯೂ ನಡೆಯಿತು. ಜತೆಗೆ ಪ್ರವಾಸಿಗರು ನೀರಾಟ ಆಡೋವಾಗ ಎಚ್ಚರ ವಹಿಸೋದೂ ಅತ್ಯಗತ್ಯ. ಪಾಚಿ ಹಿಡಿದ ಬಂಡೆಗಳ ಮೇಲೆ ಓಡಾಡೋವಾಗ ಜಾರುವ ಸಾಧ್ಯತೆಯೂ ಇದೆ. ಜಲಪಾತದ ಸನಿಹದಲ್ಲಿ ಪರಶುರಾಮ ದೇವರ ಆಲಯ ಇದ್ದು, ಸ್ಥಳದ ಮೆರುಗು ಇನ್ನಷ್ಟು ಹೆಚ್ಚಿಸಿದೆ.
Related Articles
ಕಳೆದ ಬಾರಿ ಇದೇ ಸಮಯದಲ್ಲಿ ಗೆಳೆಯರ ಗಣ ಕಾರಿಂಜ ಪ್ರವಾಸ ಮಾಡಿದ್ದೆವು. ಈ ಬಾರಿ ಮಾಳ ಎಂಬ ದೂರದೂರಿಗೆ ಬಂದು ಸಮಯ ಕಳೆದಿದ್ದು, ಮನಸ್ಸಿಗೆ ಮುದ ನೀಡಿತ್ತು. ಸದಾ ಸಿಗದಿರುವ ಪದವಿ ಮಿತ್ರರ ಸಮ್ಮಿಲನ ಇನ್ನಷ್ಟು ವಿಶಿಷ್ಟ ಎನಿಸಿತ್ತು. ಗೆಳತಿ ಮನೆ ಊಟ ,ಮಾಳದ ಗ್ರಾಮದ ಹಸಿರೈಸಿರಿಯ ನೋಟ, ಪ್ರಕೃತಿಯ ಅನೂಹ್ಯ ಜಲಪಾತದ ಓಟ ನಗರದ ದಿನನಿತ್ಯದ ಜಂಜಾಟದ ನೋವು ಮರೆಸಿತ್ತು. ಮನ ಉಲ್ಲಸಿತಗೊಂಡಿತ್ತು.
ರೂಟ್ ಮ್ಯಾಪ್
Advertisement
·ಪುತ್ತೂರಿನಿಂದ ಕಾರ್ಕಳಕ್ಕೆ 76.7 ಕಿ.ಮೀ., ಮಂಗಳೂರಿನಿಂದ ಕಾರ್ಕಳ 52.7 ಕಿ.ಮೀ.
·ಕಾರ್ಕಳದಿಂದ ಮಾಳಕ್ಕೆ 16.7 ಕಿ.ಮೀ.
·ಕಾರ್ಕಳದಿಂದ ಮಾಳ ಕಡೆಗೆ ಹೋಗಲು ಖಾಸಗಿ ಬಸ್ ಗಳು ಲಭ್ಯ ಇವೆ.
·ಅದಲ್ಲದಿದ್ದರೆ ಕಾರ್ಕಳದಿಂದ ಕಳಸದ ಕಡೆ ಹೋಗುವ ಬಸ್ ಮೂಲಕ ತೆರಳಿ, ಚೆಕ್‌ಪೋಸ್ಟ್ ಬಳಿ ಇಳಿಯಬಹುದು.