Advertisement

ಚಳಿಗಾಲದ ಬೆನ್ನಲ್ಲೇ ಮದ್ರಾಸ್‌ ಐ

06:13 AM Jan 12, 2019 | |

ಮೈಸೂರು: ಉಷ್ಣಾಂಶದಲ್ಲಿ ಇಳಿಕೆಯಿಂದಾಗಿ ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿ ಕೆಮ್ಮು, ಶೀತ ಮತ್ತು ಜ್ವರ ಜನರನ್ನು ಕಾಡುತ್ತಿರುವ ದಿನಗಳಲ್ಲೇ ಮದ್ರಾಸ್‌ ಐ (ಗುಲಾಬಿ ಕಣ್ಣು) ಕೂಡ ಜನರನ್ನು ಬಾಧಿಸತೊಡಗಿದೆ. ಇದರಿಂದಾಗಿ ಚಳಿಯಿಂದ ರಕ್ಷಣೆ ಪಡೆಯಲು ಉಣ್ಣೆ ಬಟ್ಟೆಗಳ ಮೊರೆ ಹೋಗುವ ಜೊತೆಗೆ ಮದ್ರಾಸ್‌ ಐ ಸೋಂಕು ಇನ್ನೊಬ್ಬರಿಗೆ ತಗುಲದಂತೆ ಎಚ್ಚರವಹಿಸಲು ಕಪ್ಪು ಕನ್ನಡಕ ಧರಿಸುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ.

Advertisement

ಚಳಿಗಾಲದಲ್ಲಿ ಸಾಮಾನ್ಯವಾಗಿ ವೈರಸ್‌ನಿಂದ ಉಂಟಾಗುವ ಗುಲಾಬಿ ಕಣ್ಣು (ಮದ್ರಾಸ್‌ ಐ)ಅನ್ನು ವೈದ್ಯಕೀಯ ಭಾಷೆಯಲ್ಲಿ ವೈರಲ್‌ ಕಂಜಕ್ಟಿವಿಟಿಸ್‌ ಎನ್ನಲಾಗುತ್ತದೆ. ಚಳಿಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ವ್ಯಕ್ತಿಗೆ ಶೀತದ ಕೆಮ್ಮು, ಗಂಟಲಿನ ನೋವು, ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು, ಕಣ್ಣು ಚುಚ್ಚುವಿಕೆ ಮತ್ತು ಕಣ್ಣಲ್ಲಿ ನೀರು ಸೋರುವಿಕೆಯ ಲಕ್ಷಣಗಳನ್ನು ಈ ಸೋಂಕು ಒಳಗೊಂಡಿರಬಹುದು. 

ಸೋಂಕು: ಬ್ಯಾಕ್ಟೀರಿಯಾದ ಸೂಪರ್‌ ಸೋಂಕು ಸೇರಿದರೆ ಕಣ್ಣು ಬಿಳಿ ಬಣ್ಣವಾಗಿಯೂ ಪರಿಣಮಿಸಬಹುದು. ಒಂದು ಕಣ್ಣಿನಿಂದ ಪ್ರಾರಂಭವಾಗುವ ಈ ಸೋಂಕು ಮತ್ತೂಂದು ಕಣ್ಣಿಗೂ ಹರಡುತ್ತದೆ. ಸೋಂಕಿತ ವ್ಯಕ್ತಿಯಿಂದ ಇಡೀ ಕುಟುಂಬದವರಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಸೋಂಕು ತಗುಲಿರುವ ಒಬ್ಬ ವಿದ್ಯಾರ್ಥಿಯಿಂದ ಇಡೀ ತರಗತಿಯ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ನೇತ್ರತಜ್ಞರು.

ಕಣ್ಣಿನಲ್ಲಿ ಈ ಲಕ್ಷಣಗಳೊಂದಿಗೆ ವೈರಲ್‌ ಕಂಜಕ್ಟಿವಿಟಿ ದೃಢಪಟ್ಟರೆ ಬ್ಯಾಕ್ಟಿರೀಯಾದ ಸೂಪರ್‌ ಸೋಂಕನ್ನು ತಡೆಗಟ್ಟಲು ವೈದ್ಯರನ್ನು ಸಂಪರ್ಕಿಸಿ, ವೈದ್ಯರು ಸೂಚಿಸುವ ಪ್ರತಿಜೀವಕ ಕಣ್ಣಿನ ಹನಿಗಳನ್ನು ಹಾಕಿಕೊಳ್ಳಬೇಕು. 

ಆ್ಯಂಟಿ ಬಯೋಟಿಕ್‌ ಐ ಡ್ರಾಪ್ಸ್‌: ಕೃತಕ ಕಣ್ಣೀರಿನ ಹನಿಗಳನ್ನು ತಡೆದು, ಕಣ್ಣಿಗೆ ಆರಾಮ ನೀಡಲು ಮಾತ್ರ ಈ ಆ್ಯಂಟಿ ಬಯೋಟಿಕ್‌ ಐ ಡ್ರಾಪ್ಸ್‌ ಅನ್ನು ಬಳಸಲಾಗುತ್ತದೆ. ಆದರೆ, ಇದು ರೋಗ ನಿರೋಧಕವಲ್ಲ. ಈ ವೈರಲ್‌ ಸೋಂಕು ನಿವಾರಣೆಯಾಗಲು ಸಾಮಾನ್ಯವಾಗಿ ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. 

Advertisement

ಕಂಜಕ್ಟಿವಿಟಿಸ್‌ ಹೊಂದಿರುವ ವ್ಯಕ್ತಿಯು ತನ್ನ ಕಣ್ಣುಗಳನ್ನು ಮುಟ್ಟಿದ ನಂತರ ಬಾಗಿಲು, ಕಂಪ್ಯೂಟರ್‌ನ ಕೀಬೋರ್ಡ್‌, ಮೊಬೈಲ್‌ ಫೋನ್‌ ಮುಂತಾದ ವಸ್ತುಗಳನ್ನು ಮುಟ್ಟುವುದರಿಂದಲೂ ಬೇರೊಬ್ಬರಿಗೆ ಸೋಂಕು ಹರಡುತ್ತಾರೆ. ಇದಲ್ಲದೆ, ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಆ ವೈರಸ್‌ ಗಾಳಿಯ ಮೂಲಕ ಇನ್ನೊಬ್ಬರಿಗೆ ಹರಡಿ ಸೋಂಕು ತಗುಲಲು ಕಾರಣವಾಗುವ ಸಾಧ್ಯತೆ ಇದೆ. 

ಮುನ್ನೆಚ್ಚರಿಕೆ: ಹೀಗಾಗಿ ಸೋಂಕು ನಿವಾರಣೆಯಾಗುವವರೆಗೆ ದೈಹಿಕ ಸಂಪರ್ಕ ಹೊಂದುವುದು ಬೇಡ. ಸೋಂಕು ತಗುಲಿರುವ ವ್ಯಕ್ತಿ ತನ್ನಿಂದ ಇನ್ನೊಬ್ಬರಿಗೆ ಈ ಸೋಂಕು ಹರಡುವುದನ್ನು ತಡೆಯಲು ಪ್ರತ್ಯೇಕ ಟವೆಲ್‌, ಹೊದಿಕೆಗಳನ್ನು ಬಳಸಬೇಕು. ಮುಖ್ಯವಾಗಿ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವತ್ಛಗೊಳಿಸಬೇಕು. ಶುಚಿಯಾಗಿಲ್ಲದ ಕೈಗಳಿಂದ ಕಣ್ಣುಗಳನ್ನು ಉಜ್ಜುವುದನ್ನು ಮಾಡಬೇಡಿ ಎಂದು ನೇತ್ರ ತಜ್ಞರು ಸಲಹೆ ನೀಡುತ್ತಾರೆ.

ಮದ್ರಾಸ್‌-ಐ ಸಾಮಾನ್ಯವಾಗಿ ಚಳಿಗಾಲದಲ್ಲಿ ಹರಡುವುದು ಜಾಸ್ತಿ. ಸೋಂಕು ತಗುಲಿರುವುದು ಗೊತ್ತಾದ ಕೂಡಲೇ ನೇತ್ರ ವೈದ್ಯರನ್ನು ಸಂಪರ್ಕಿಸಿ, ಅವರು ಸೂಚಿಸುವ ಚಿಕಿತ್ಸಾ ವಿಧಾನವನ್ನು ಸರಿಯಾಗಿ ಅನುಸರಿಸಬೇಕು.
-ಡಾ.ಪವನ್‌ವಿ. ಜೋಷಿ, ನೇತ್ರತಜ್ಞರು, ಅನ್ನಣಪೂರ್ಣ ಕಣ್ಣಿನ ಆಸ್ಪತ್ರೆ.

ಸಾಮಾನ್ಯವಾಗಿ ಚಳಿಗಾಲ ಮುಗಿಯುತ್ತಿದ್ದಂತೆ, ಮಾವಿನ ಹಣ್ಣಿನ ಸೀಸನ್‌ನಲ್ಲಿ ಮದ್ರಾಸ್‌-ಐ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಜಿಲ್ಲೆಯಲ್ಲಿ ಈವರೆಗೆ ಅಂತಹ ಯಾವುದೇ ಮಾಹಿತಿ ಇಲ್ಲ.
-ಡಾ.ಬಸವರಾಜು, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಅಧಿಕಾರಿ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next