Advertisement

WTC:ಭಾರತಕ್ಕೆ ಫಾಲೋಆನ್‌ ತಪ್ಪಿತು; ಅಪಾಯ ತಪ್ಪಲಿಲ್ಲ

12:38 AM Jun 10, 2023 | Team Udayavani |

ಲಂಡನ್‌: ವಿಶ್ವಕಪ್‌ ಟೆಸ್ಟ್‌ ಫೈನಲ್‌ನಲ್ಲಿ ಭಾರತ ಫಾಲೋಆನ್‌ನಿಂದ ಪಾರಾದರೂ ಅಪಾಯದಿಂದ ಪಾರಾಗಿಲ್ಲ. 173 ರನ್‌ ಮುನ್ನಡೆ ಸಂಪಾದಿಸಿದ ಆಸ್ಟ್ರೇಲಿಯ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 123 ರನ್‌ ಗಳಿಸಿದೆ. ಒಟ್ಟು ಮುನ್ನಡೆ 296ಕ್ಕೆ ಏರಿದೆ. ಶನಿವಾರ ಚಹಾ ವಿರಾಮದ ತನಕ ಆಡಿ 450ರಷ್ಟು ಟಾರ್ಗೆಟ್‌ ನೀಡಿ ಟೀಮ್‌ ಇಂಡಿಯಾವನ್ನು ಕಾಡುವುದು ಕಾಂಗರೂ ಯೋಜನೆ. ಆಗ ರೋಹಿತ್‌ ಪಡೆ ಸೋಲು ತಪ್ಪಿಸಿಕೊಳ್ಳಲು ಕಠಿನ ಹೋರಾಟವನ್ನೇ ಮಾಡಬೇಕಾಗುತ್ತದೆ.
ಆಸ್ಟ್ರೇಲಿಯದ 469ಕ್ಕೆ ಉತ್ತರವಾಗಿ ಭಾರತ 296ಕ್ಕೆ ಆಲೌಟ್‌ ಆಯಿತು.

Advertisement

ರಹಾನೆ-ಠಾಕೂರ್‌ ಹೋರಾಟ
ದ್ವಿತೀಯ ದಿನದಾಟದಲ್ಲಿ 5 ವಿಕೆಟಿಗೆ 151 ರನ್‌ ಗಳಿಸಿ ತೀವ್ರ ಸಂಕಟದಲ್ಲಿದ್ದ ಭಾರತವನ್ನು ಅಜಿಂಕ್ಯ ರಹಾನೆ-ಶಾದೂìಲ್‌ ಠಾಕೂರ್‌ ಸೇರಿಕೊಂಡು ಪಾರುಮಾಡಿದರು. ಇವರಿಬ್ಬರು ಶತಕದ ಜತೆಯಾಟ ನಡೆಸಿ ಭೋಜನ ವಿರಾಮದ ಹೊತ್ತಿಗೆ ಮೊತ್ತವನ್ನು 260ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಆಗ ಭಾರತ ಫಾಲೋಆನ್‌ ಗಡಿಯಿಂದ ಕೇವಲ 9 ರನ್‌ ದೂರದಲ್ಲಿತ್ತು.

5 ರನ್‌ ಮಾಡಿ ಆಡುತ್ತಿದ್ದ ಕೀಪರ್‌ ಶ್ರೀಕರ್‌ ಭರತ್‌ ಅವರನ್ನು ದಿನದ ದ್ವಿತೀಯ ಎಸೆತದಲ್ಲೇ ಕಳೆದುಕೊಂಡ ಭಾರತ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ಸ್ಕಾಟ್‌ ಬೋಲ್ಯಾಂಡ್‌ ಎಸೆತಕ್ಕೆ ಭರತ್‌ ಬೌಲ್ಡ್‌ ಆಗಿದ್ದರು.

ಅಂತಿಮ ಭರವಸೆಯಾಗಿದ್ದ ಅಜಿಂಕ್ಯ ರಹಾನೆ ಅವರಿಗೆ ಶಾದೂìಲ್‌ ಠಾಕೂರ್‌ ಜತೆಯಾದರು. ಆಗ ಬೋಲ್ಯಾಂಡ್‌, ಕಮಿನ್ಸ್‌ ಅತ್ಯಂತ ಅಪಾಯಕಾರಿಯಾಗಿ ದಾಳಿ ಸಂಘಟಿಸುತ್ತಿದ್ದರು. ಮೊದಲ ಗಂಟೆ ಯಲ್ಲಿ ಪ್ರತಿಯೊಂದು ಎಸೆತಕ್ಕೂ ವಿಕೆಟ್‌ ಬೀಳುವಂಥ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ರಹಾನೆ-ಠಾಕೂರ್‌ ಕಾಂಗರೂ ಬೌಲಿಂಗ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ನಿಂತರು. ಬಿರುಸಿನ ಆಟಕ್ಕೂ ಮುಂದಾದರು. ಮೊದಲ ಅವಧಿಯ 22 ಓವರ್‌ಗಳಲ್ಲಿ 109 ರನ್‌ ಒಟ್ಟುಗೂಡಿತು.
ಇಬ್ಬರಿಗೂ ಅದೃಷ್ಟದ ಬೆಂಬಲ ಸಾಕಷ್ಟಿತ್ತು. ರಹಾನೆ 72 ರನ್‌ ಮಾಡಿದ್ದಾಗ ಮೊದಲ ಸ್ಲಿಪ್‌ನಲ್ಲಿದ್ದ ಡೇವಿಡ್‌ ವಾರ್ನರ್‌ ಕ್ಯಾಚ್‌ ಒಂದನ್ನು ಬಿಟ್ಟು ಜೀವದಾನ ನೀಡಿದರು.

ರಹಾನೆಗೆ ತಪ್ಪಿತು ಶತಕ
ಕಮ್‌ ಬ್ಯಾಕ್‌ ಪಂದ್ಯದಲ್ಲಿ ಶತಕದ ನಿರೀಕ್ಷೆ ಮೂಡಿಸಿದ್ದ ಅಜಿಂಕ್ಯ ರಹಾನೆ ನಿರಾಸೆ ಅನುಭವಿಸಬೇಕಾಯಿತು. ಲಂಚ್‌ ಬಳಿಕ ಬ್ಯಾಟಿಂಗ್‌ ಮುಂದುವರಿಸಿ, ಬೋಲ್ಯಾಂಡ್‌ ಅವರ ಮೊದಲ ಓವರನ್ನು ಮೇಡನ್‌ ಮಾಡಿದರು. ದ್ವಿತೀಯ ಓವರ್‌ ಎಸೆಯಲು ಬಂದ ನಾಯಕ ಕಮಿನ್ಸ್‌ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಗಲ್ಲಿ ವಿಭಾಗದಲ್ಲಿದ್ದ ಗ್ರೀನ್‌ ಪಡೆದ ಅದ್ಭುತ ಕ್ಯಾಚ್‌ ಒಂದು ರಹಾನೆ ಆಟಕ್ಕೆ ತೆರೆ ಎಳೆಯಿತು.

Advertisement

ಲಂಚ್‌ ವೇಳೆ 89 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ರಹಾನೆ ಅದೇ ಮೊತ್ತಕ್ಕೆ ಔಟಾದರು. 129 ಎಸೆತಗಳ ಈ ಆಪತ್ಕಾಲದ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, ಒಂದು
ಸಿಕ್ಸರ್‌ ಸೇರಿತ್ತು.

ರಹಾನೆ-ಠಾಕೂರ್‌ ಜೋಡಿಯಿಂದ 7ನೇ ವಿಕೆಟಿಗೆ 145 ಎಸೆತಗಳಿಂದ 109 ರನ್‌ ಒಟ್ಟುಗೂಡಿತು. ಇದು ಇಂಗ್ಲೆಂಡ್‌ನ‌ಲ್ಲಿ 7ನೇ ಹಾಗೂ ಇದಕ್ಕೂ ಕೆಳ ಕ್ರಮಾಂಕದಲ್ಲಿ ಭಾರತ ದಾಖಲಿಸಿದ 6ನೇ ಶತಕದ ಜತೆಯಾಟ. ಇದರಲ್ಲಿ 2 ಸಲ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗನೆಂಬುದು ಶಾದೂìಲ್‌ ಪಾಲಿನ ಹೆಗ್ಗಳಿಕೆ. ಅವರು 2021ರ ಓವಲ್‌ ಟೆಸ್ಟ್‌
ನಲ್ಲೇ ರಿಷಭ್‌ ಪಂತ್‌ ಜತೆಗೂಡಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ತಿ 100 ರನ್‌ ಪೇರಿಸುವಲ್ಲಿ ನೆರವಾಗಿದ್ದರು.

ರಹಾನೆ ಪೆವಿಲಿಯನ್‌ ಸೇರುವಾಗ ಭಾರತ ಫಾಲೋಆನ್‌ ಗಡಿಯಿಂದ ಕೇವಲ 9 ರನ್‌ ದೂರದಲ್ಲಿತ್ತು. ಕಮಿನ್ಸ್‌ ಎಸೆತವನ್ನು ಬೌಂಡರಿಗೆ ಅಟ್ಟಿದ ಉಮೇಶ್‌ ಯಾದವ್‌ ಫಾಲೋಆನ್‌ನಿಂದ ಬಚಾವ್‌ ಮಾಡಿದವರೇ, ತನ್ನ ಕರ್ತವ್ಯ ಮುಗಿಯಿತು ಎಂಬ ರೀತಿಯಲ್ಲಿ ಪೆವಿಲಿಯನ್‌ ಸೇರಿಕೊಂಡರು. ಕಮಿನ್ಸ್‌ ಎಸೆತಕ್ಕೆ ಕ್ಲೀನ್‌ಬೌಲ್ಡ್‌ ಆದ ಅವರ ಗಳಿಕೆ ಐದೇ ರನ್‌.

ಓವಲ್‌ ಹೀರೋ ಠಾಕೂರ್‌
ತಂಡದ ಪ್ರಧಾನ ಬ್ಯಾಟರ್‌ಗಳನ್ನು ಮೀರಿನಿಂತ ಶಾದೂìಲ್‌ ಠಾಕೂರ್‌ 4ನೇ ಅರ್ಧ ಶತಕದೊಂದಿಗೆ ಮಿಂಚಿದರು. ಇದರಲ್ಲಿ 3 ಅರ್ಧ ಶತಕ ಓವಲ್‌ನಲ್ಲೇ ದಾಖಲಾದದ್ದು ವಿಶೇಷ. 2021ರ ಸರಣಿ ವೇಳೆ ಇಲ್ಲಿ ಆಡಲಾದ ಟೆಸ್ಟ್‌ನಲ್ಲಿ ಅವರು 57 ಹಾಗೂ 60 ರನ್‌ ಬಾರಿಸಿದ್ದರು. ಹ್ಯಾಟ್ರಿಕ್‌ ಫಿಫ್ಟಿಯೊಂದಿಗೆ ಅವರು ಓವಲ್‌ ಹೀರೋ ಎನಿಸಿದರು.
ಠಾಕೂರ್‌ ಅವರ ಮೊದಲ ಫಿಫ್ಟಿ ಆಸ್ಟ್ರೇಲಿಯ ಎದುರಿನ 2021ರ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ದಾಖಲಾಗಿತ್ತು (67). ಇದರೊಂದಿಗೆ ಅವರ ನಾಲ್ಕೂ ಅರ್ಧ ಶತಕ ವಿದೇಶದಲ್ಲೇ ದಾಖಲಾದಂತಾಯಿತು. ಈ 9 ಟೆಸ್ಟ್‌ಗಳಲ್ಲಿ ಅವರು ಪದಾರ್ಪಣ ಪಂದ್ಯವನ್ನಷ್ಟೇ ಭಾರತದಲ್ಲಿ ಆಡಿದ್ದರು. ಅದು ವೆಸ್ಟ್‌ ಇಂಡೀಸ್‌ ಎದುರಿನ 2018ರ ಹೈದರಾಬಾದ್‌ ಪಂದ್ಯವಾಗಿತ್ತು.

ಠಾಕೂರ್‌ ಅವರ “ಫೈಟಿಂಗ್‌ ನಾಕ್‌’ಗೆ ಕ್ಯಾಮರಾನ್‌ ಗ್ರೀನ್‌-ಕೀಪರ್‌ ಅಲೆಕ್ಸ್‌ ಕ್ಯಾರಿ ಜೋಡಿಯಿಂದ ತೆರೆ ಬಿತ್ತು. 109 ಎಸೆತ ನಿಭಾಯಿಸಿದ ಠಾಕೂರ್‌ ಬಹುಮೂಲ್ಯ 51 ರನ್‌ ಕೊಡುಗೆ ಸಲ್ಲಿಸಿದರು (6 ಬೌಂಡರಿ). 152ಕ್ಕೆ 6 ವಿಕೆಟ್‌ ಕಳೆದುಕೊಂಡಿದ್ದ ಭಾರತ, ಅಂತಿಮ 4 ವಿಕೆಟ್‌ಗಳಿಂದ 144 ರನ್‌ ರಾಶಿ ಹಾಕಿತು.
ತಂಡದ ಮೊತ್ತವನ್ನು ಮುನ್ನೂರರ ಗಡಿ ತಲುಪಿಸಲು ಕೊನೆಯ ಆಟಗಾರರಿಂದ ಸಾಧ್ಯವಾಗಲಿಲ್ಲ. ಆಸೀಸ್‌ನ ನಾಲ್ವರು ವೇಗಿಗಳು ಸೇರಿಕೊಂಡು 9 ವಿಕೆಟ್‌ ಕಿತ್ತರು. ಸ್ಪಿನ್ನರ್‌ ನಥನ್‌ ಲಿಯಾನ್‌ಗೆ ಲಭಿಸಿದ್ದು 4 ಓವರ್‌ ಮಾತ್ರ. ಅವರು ಒಂದು ವಿಕೆಟ್‌ ಕೆಡವಲು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next