ಶಹಾಬಾದ: ರೈತರು ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವುದರಿಂದ ಬೆಳೆಗಳ ಮೇಲೆ ಹಾಗೂ ಕೃಷಿ ಭೂಮಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ರೈತರು ಸಾವಯವ ಗೊಬ್ಬರದ ಬಳಕೆ ಮಾಡಿ ಭೂಮಿಯ ಫಲವತ್ತತೆ ಕಾಪಾಡುವಲ್ಲಿ ಕಾಳಜಿ ವಹಿಸಬೇಕು ಎಂದು ರದ್ದೆವಾಡಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಚೇತನ ಟಿ. ರೈತರಿಗೆ ಸಲಹೆ ನೀಡಿದರು.
ಕೃಷಿ ಇಲಾಖೆ ವತಿಯಿಂದ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಹೊಲಗಳಿಗೆ ಅತಿಯಾಗಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸುತ್ತಿದ್ದೇವೆ. ಇದರಿಂದ ಭೂಮಿಯಲ್ಲಿ ಲವಣಾಂಶ ಕಡಿಮೆಯಾಗುತ್ತಿದೆ. ಫಲವತ್ತಾದಗಿದ್ದ ಭೂಮಿಗಳು ಬಂಜರು ಭೂಮಿ ಆಗುತ್ತಿವೆ. ಅಲ್ಲದೇ ರೈತರ ಹತ್ತಿರ ದನಗಳ ಸಂಖ್ಯೆಯೂ ಕಡಿಮೆ ಆಗುತ್ತಿವೆ. ಇದರಿಂದ ತಿಪ್ಪೆ ಗೊಬ್ಬರವೂ ಸಿಗುತ್ತಿಲ್ಲ. ಇದರಿಂದ ರೈತರು ರಾಸಾಯನಿಕ ಗೊಬ್ಬರಕ್ಕೆ ಮೊರೆ ಹೋಗುತ್ತಿದ್ದಾರೆ ಎಂದರು.
ಅವೈಜ್ಞಾನಿಕ ಕೃಷಿ ಪದ್ಧತಿ ಕೈಬಿಟ್ಟು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವತ್ತ ರೈತರು ಮುಂದಾಗಬೇಕು. ರೈತರು ಕೃಷಿ ಇಲಾಖೆಯಲ್ಲಿ ನೀಡುವ ಬೀಜಗಳ ಜೊತೆಗೆ ಲಘುಪೋಷಕಾಂಶ ಬಳಸಿ. ಬೀಜ ಬಿತ್ತನೆ ಮಾಡುವ ಮೊದಲು ಬೀಜ ಕಠಿಣಗೊಳಿಸಿ. ಟ್ರೈಕೋಡರ್ಮದಿಂದ ಬಿಜೋಪಚಾರ ಮಾಡಿ. ಬಿತ್ತುವ ಮುಂಚೆ ಭೂಮಿಯಲ್ಲಿ ಮತ್ತು ತಿಪ್ಪೆ ಗೊಬ್ಬರದಲ್ಲಿ ಟ್ರೈಕೋಡರ್ಮ ಹಾಕಿ. ಇದರಿಂದ ತೊಗರಿಯಲ್ಲಿ ಕಂಡು ಬರುವ ನೆಟೆರೋಗ ತಡೆಯಲು ಸಾಧ್ಯಎಂದು ತಿಳಿಸಿದರು.
ಕೃಷಿ ಅಧಿಕಾರಿ ಕರಣಕುಮಾರ, ಸಹಾಯಕ ಕೃಷಿ ಅಧಿಕಾರಿ ಸೈಯದ್ ಪಟೇಲ್ ಮಾತನಾಡಿದರು. ನಂತರ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರೈತ ಸಂಘದ ಶಿವಶರಣಪ್ಪಗೌಡ, ಶಾಂತಪ್ಪ ಪೂಜಾರಿ,ಮಹಾಂತಸ್ವಾಮಿ ಸ್ಥಾವರಮಠ, ರಮೇಶ ಎಸ್.ಮರತೂರ, ಶಿವಕುಮಾರ, ಹಣಮಂತರಾವ, ರುಕುಂಪಟೇಲ್, ಮಾಲಿ ಪಾಟೀಲ, ಶರಣು ಕಡಬೂರ, ಶಿವಕುಮಾರ ಹಿರೆಣ್ಣಾ, ಪ್ರವೀಣ ಸಾಗರ ಅತಿಥಿಗಳಾಗಿದ್ದರು.