ಜೇವರ್ಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವನ್ನು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆ ಮಾಡುವುದರ ಜತೆಗೆ ಆಚರಿಸಲು ಅನುಮತಿ ನೀಡಲಾಗಿದೆ ಎಂದು ತಹಶೀಲ್ದಾರ್ ವಿನಯಕುಮಾರ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಮಹಾಲಕ್ಷ್ಮೀ ಜಾತ್ರೆ ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಹಾಗೂ ಕುಸ್ತಿ ಪಂದ್ಯಗಳನ್ನು ನಡೆಸಲು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಾತ್ರೆಗೆ ಬರುವ ಭಕ್ತರು ಹಾಗೂ ಜಾತ್ರಾ ಕಮಿಟಿ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪಟ್ಟಣದಲ್ಲಿ ಜಾತ್ರಾ ಸಂದರ್ಭದಲ್ಲಿ ಸ್ಯಾನಿಟೈಸ್ ಮಾಡಲು ಹಾಗೂ ಸ್ವತ್ಛತೆ ಕಾಪಾಡಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಯೊಬ್ಬರೂ ಸರ್ಕಾರದ ನಿಯಮಗಳ ಪಾಲನೆ ಮಾಡಿ ತಾಲೂಕಾಡಳಿತಕ್ಕೆ ಸಹಕರಿಸಬೇಕು ಎಂದರು.
ಇನ್ಸ್‌ಪೆಕ್ಟರ್ ಶಿವಪ್ರಸಾದ ಮಠದ, ಪಿಎಸ್‌ಐ ಸಂಗಮೇಶ ಅಂಗಡಿ, ಪುರಸಭೆ ನೈರ್ಮಲ್ಯ ಅಧಿಕಾರಿ ರಾಜಶೇಖರ ಹಿರೇಮಠ, ಮುಖಂಡರಾದ ರಮೇಶಬಾಬು ವಕೀಲ, ರಾಜಶೇಖರ ಸೀರಿ, ಶಿವಕುಮಾರ ಕಲ್ಲಾ, ಗುಂಡು ಸಾಹು ಗೋಗಿ, ಶಿವಶರಣಪ್ಪಗೌಡ ಮಾಲಿಪಾಟೀಲ, ದಂಡಪ್ಪಗೌಡ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಅವಂಟಿ, ಶ್ರೀಶೈಲಗೌಡ ಪೊಲೀಸ್‌ಪಾಟೀಲ, ರವಿ ಕೋಳಕೂರ, ವಿಶ್ವನಾಥ ಇಮ್ಮಣ್ಣಿ, ಅಲ್ಲಾಭಕ್ಷ ಬಾಗವಾನ, ರಹೇಮಾನ ಪಟೇಲ, ಮಹಿಮೂದ್ ನೂರಿ, ರಾಮಣ್ಣ ಪೂಜಾರಿ ಇನ್ನಿತರಿದ್ದರು.