ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಂದು ಸಂಸ್ಥೆಗಳು ಪ್ರತಿಭೆ ಮೊದಲು ಎಂಬ ತತ್ವವನ್ನು ಅನುಸರಿಸಬೇಕಾಗ ಅಗತ್ಯವಿದೆ ಎಂದು ಚೆನ್ನೈನ ರಾಣಿ ಹೋಲ್ಡಿಂಗ್ಸ್ ಸಂಸ್ಥೆ ಅಧ್ಯಕ್ಷ ಎಲ್. ಗಣೇಶ್ ತಿಳಿಸಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯಲ್ಲಿ ಆಯೋಜಿಸಿರುವ “ಕಾರ್ಯಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ’ ವಿಷಯ ಕುರಿತ 7ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಸಂಸ್ಥೆಯ ಉದ್ದೇಶಗಳನ್ನು ಅಲ್ಲಿನ ನೌಕರರಿಗೆ ಮನದಟ್ಟು ಮಾಡಿಸುವ ಮೂಲಕ, ಸಂಸ್ಥೆಯ ಬೆಳವಣಿಗೆಗೆ ಬೇಕಾದ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ. ಹೀಗಾಗಿ ಇಂದಿನ ಬದಲಾದ ತಂತ್ರಜ್ಞಾನ ಹಾಗೂ ಗ್ರಾಹಕರ ನಿರೀಕ್ಷೆಯ ಯುಗದಲ್ಲಿ ಪ್ರತಿಭೆಗೆ ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳು ಎದುರಿಸುವ ಅವಶ್ಯಕತೆಗಳು ಮತ್ತು ಸವಾಲುಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
ಎಸ್‌ಡಿಎಂ-ಐಎಂಡಿ ಸಂಸ್ಥೆ ನಿರ್ದೇಶಕ ಡಾ.ಎನ್.ಆರ್.ಪರಶುರಾಮನ್, “ಯಶಸ್ವಿ ಮಾನವ ಸಂಪನ್ಮೂಲ ನಿರ್ವಹಣೆಗೆ ಅಗತ್ಯವಿರುವ ಸಂವಹನದ ಪ್ರಾಮುಖ್ಯತೆ, ಪ್ರತಿಫಲಗಳು, ವ್ಯಕ್ತಿಯ ಹಾಗೂ ಸಾಂಸ್ಥಿಕ ಉದ್ದೇಶಗಳ ಹೊಂದಾಣಿಕೆ, ಕಾರ್ಯಕ್ಷೇತ್ರದಲ್ಲಿ ನೈತಿಕತೆ ಕುರಿತು ಮಾತನಾಡಿದರು. ಸಮ್ಮೇಳನ ಮುಖ್ಯಸ್ಥ ಡಾ. ಮೌಸುಮಿ ಸೇನ್ ಗುಪ್ತ, ಮಾನವ ಸಂಪನ್ಮೂಲ ನಿರ್ವಹಣೆಯ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ಎರಡು ದಿನಗಳ ಸಮ್ಮೇಳನದಲ್ಲಿ ಭಾರತ, ಯುಎಸ್‌ಎ ಹಾಗೂ ನೈಜೀರಿಯಾ ದೇಶದಿಂದ 150ಕ್ಕೂ ಮಂದಿ ಭಾಗವಹಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಇಂಧೋರ್‌ನ ಐಐಎಂ ಮಾಜಿ ನಿರ್ದೇಶಕ ಪ್ರೊ. ರವಿಚಂದ್ರನ್,
ನೋಯ್ಡಾದ ಎಂಬಿಎ ಯೂನಿವರ್ಸ್.ಕಾಮ್‌ನ ಸಂಸ್ಥಾಪಕ ಸಿಇಒ ಅಮಿತ್ ಅಗ್ನಿಹೋತ್ರಿ, ಬೆಂಗಳೂರಿನ ಲೀಡ್ ಕನ್ಸಲ್ಟಿಂಗ್ ಸಂಸ್ಥೆಯ ನಿರ್ದೇಶಕ ಮಹಾಲಿಂಗಂ, ಮೈಸೂರಿನ ಅಗ್ರಿಬಿಸಿನೆಸ್ ವಿಭಾಗದ ವ್ಯವಸ್ಥಾಪಕ ರಾಜೇಂದ್ರಬಾಬು, ಸಮ್ಮೇಳನದ ಉಪ ಮುಖ್ಯಸ್ಥ ಡಾ.ನೀಲಾಂಜನ್ ಸೇನ್ ಗುಪ್ತ ಹಾಜರಿದ್ದರು.