ಹೊಸದಿಲ್ಲಿ: ಯಾವುದೇ ಸಮಸ್ಯೆ ವಿರುದ್ಧ ಹೋರಾಡುವಾಗ ಅಹಿಂಸಾ ಮಾರ್ಗವನ್ನು ಅನುಸರಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
71ನೇ ಗಣರಾಜ್ಯೋತ್ಸವದ ಹಿನ್ನೆಲೆ ಯಲ್ಲಿ ಶನಿವಾರ ದೇಶವನ್ನುದ್ದೇಶಿಸಿ ಮಾತ ನಾಡಿರುವ ಅವರು, “ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತೋರಿಸಿಕೊಟ್ಟಿರುವ ಶಾಂತಿ ಮತ್ತು ಅಹಿಂಸಾ ಮಾರ್ಗದಲ್ಲೇ ನಮ್ಮ ಹೋರಾಟಗಳು ನಡೆಯಬೇಕು. ಈ ಮೂಲಕ ಗಾಂಧೀಜಿಯ 150ನೇ ಜನ್ಮದಿನಕ್ಕೆ ನಿಜವಾದ ಅರ್ಥ ತಂದುಕೊಡಬೇಕಿದೆ’ ಎಂದಿದ್ದಾರೆ.
ಮುಖ್ಯವಾಗಿ ಭಾರತದ ಯುವ ಸಮುದಾಯ “ಸಾಂವಿಧಾನಿಕ ವಿಧಾನಗಳಿಗೆ ಬದ್ಧರಾಗಿ’ ಅನ್ಯಾಯಗಳ ವಿರುದ್ಧ ದನಿಯೆತ್ತ ಬೇಕು ಎಂದು ಅವರು ಸಲಹೆ ನೀಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಈ ಹೇಳಿಕೆ ಮಹತ್ವ ಪಡೆದಿದೆ.
ದೇಶದ ಎಲ್ಲ ಪ್ರಜೆಗಳಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾÅತೃತ್ವದ ಭರವಸೆಯನ್ನು ಸಂವಿಧಾನವು ನೀಡುತ್ತದೆ. ಸಂವಿಧಾನದ ಈ ಮೂಲ ತತ್ವಗಳನ್ನು ಯುವ ಪೀಳಿಗೆ ಗೌರವಿಸಬೇಕು ಎಂದಿ ರುವ ರಾಷ್ಟ್ರಪತಿ ಕೋವಿಂದ್, “21ನೇ ಶತಮಾನವು ನವ ಭಾರತ ಮತ್ತು ಭಾರತದ ನವ ಪೀಳಿಗೆಯ ಉದಯಕ್ಕೆ ಸಾಕ್ಷಿಯಾಗ ಲಿದೆ,’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷ ಜು.24ರಿಂದ ಆ.9ರವರೆಗೆ ನಡೆಯಲಿರುವ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿ ರುವ ಕ್ರೀಡಾಪಟುಗಳಿಗೆ ಕೋವಿಂದ್, ತಮ್ಮ ಭಾಷಣದಲ್ಲಿ ಶುಭ ಕೋರಿದ್ದಾರೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುವ ಎಲ್ಲ ಕ್ರೀಡಾಪಟುಗಳು, ಅಥ್ಲೀಟ್‌ಗಳಿಗೆ ಇಡೀ ದೇಶದ ಬೆಂಬಲ ಇರಲಿದೆ. ಈ ಬಾರಿ ನಮ್ಮ ಸ್ಪರ್ಧಿಗಳು ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.