ಆಳಂದ: ರೈತರು ಕೃಷಿಯಲ್ಲಿ ತೊಡಗುವ ಮೊದಲು ತರಬೇತಿ ಮತ್ತು ಆಧುನಿಕ ಪದ್ಧತಿಯ ಜ್ಞಾನ, ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನವದೆಯಲಿ ಐಎಆರ್‌ಐ ಮಾಜಿ ನಿರ್ದೇಶಕ ಡಾ| ಎಸ್.ಎ. ಪಾಟೀಲ ಕರೆ ನೀಡಿದರು.
ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ, ಎನ್‌ಎಸ್ ಎಲ್ ಸಕ್ಕರೆ ಕಾರ್ಖಾನೆ ಆಶ್ರಯದಲ್ಲಿ ರವಿವಾರ ಪ್ರಗತಿಪರ ಕಬ್ಬ ಬೆಳೆಗಾರ ಪ್ರಶಾಂತ ಪಾಟೀಲ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಕಬ್ಬಿನ ಕೃಷಿಯಲ್ಲಿ ರವದಿ ಸದ್ಬಳಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಡಿಮೆ ನೀರು, ಕಡಿಮೆ ಭೂಮಿ, ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆಗೆ ತಂತ್ರಜ್ಞಾನ ಮತ್ತು ಯಂತ್ರಗಳು ಸಹಕಾರಿಯಾಗಿವೆ. ನಗರಗಳಲ್ಲಿ ಕಡಿಮೆ ಜಾಗದಲ್ಲಿ ಬಹುಮಹಡಿ ಕಟ್ಟಡ ಕಟ್ಟಿದಂತೆ, ಕಡಿಮೆ ಭೂಮಿಯಲ್ಲೂ ಬಹುವಿಧದ ಬೆಳೆ ಬೆಳೆದು ಸಾಧನೆ ಮಾಡಿದ ದೇಶದ ವಿವಿಧ ರಾಜ್ಯಗಳಲ್ಲಿನ ರೈತರಂತೆ ನೀವು ಸಹ ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಬಹುದಾಗಿದೆ ಎಂದು ಹೇಳಿದರು.
ಕೃಷಿ ಕೆಲಸಕ್ಕೆ ಸಮಯ, ಶ್ರಮ ಮತ್ತು ಆಸಕ್ತಿ ಹೊಂದಿದರೆ ಮಾತ್ರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ. ಕೃಷಿಯೊಂದಿಗೆ ಉಪ ಕಸಬು ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಿಂದಲೂ ಲಾಭ ಪಡೆಯಬೇಕು. ಕೃಷಿ ವೃದ್ಧಿಗೆ ಪ್ರಧಾನಮಂತ್ರಿ ಅವರು ನೀಡಿದ ಸಪ್ತ ಸೂತ್ರಗಳು ವೈಜ್ಞಾನಿಕವಾಗಿವೆ. ಅದನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಕೃಷಿ ಬಹುದೊಡ್ಡ ಉದ್ಯೋಗ ಒದಗಿಸುವ ಏಕೈಕ ಕ್ಷೇತ್ರವಾಗಿದೆ. ಇದನ್ನು ಉಳಿಸಿ ಬೆಳೆಸಲು ರೈತರು ವಿಜ್ಞಾನ, ತಂತ್ರಜ್ಞಾನ ಮಾಹಿತಿ ಪಡೆದು ಸರ್ಕಾರದ ಸೌಲಭ್ಯದೊಂದಿಗೆ ಅಭಿವೃದ್ಧಿ ಸಾಧಿ ಸಬೇಕು. ಕಬ್ಬು ಬೆಳೆಯುವ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಕಲಬುರಗಿ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಎನ್ ಎಸ್‌ಎಲ್ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರರೆಡ್ಡಿ, ಸಹಾಯಕ ನಿರ್ದೇಶಕಿ ಅನಸೂಯಾ ಹೂಗಾರ, ರೈತ ಮುಖಂಡ ಬಸವರಾಜ ಪವಾಡಶೆಟ್ಟಿ, ವಿಜ್ಞಾನಿ ಭೀಮಸೇನ ಜೆಟಗಿ ಮಾತನಾಡಿದರು.
ಸೀತಾರಾಮ ರಾಠೊಡ, ತಾಪಂ ಇಒ ಡಾ| ಸಂಜಯ ರೆಡ್ಡಿ, ತೋಟಗಾರಿಕೆ ಅಧಿಕಾರಿ ರಾಜಕುಮಾರ ಗೋವಿನ, ಕೃಷಿ ತಾಂತ್ರಿಕ ಅಧಿಕಾರಿ ಬಿ.ಎಂ. ಬಿರಾದಾರ, ಕೃಷಿ ಅಧಿಕಾರಿ ಪ್ರಭಾಕರ ಅನಗರಕರ, ಬಸವರಾಜ ಅಟ್ಟೂರ, ಸಂಜಯ ಸವದಿ, ಅಣ್ಣಯ್ಯ ಸ್ವಾಮಿ ಸೇರಿದಂತೆ ಇನ್ನಿತರ ರೈತರು ಪಾಲ್ಗೊಂಡಿದ್ದರು.