ಲೋಕಾಪುರ: ಮಹಾನ್ ಪುರುಷರ ಜಯಂತಿಗಳನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸುವ ಮೂಲಕ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಜಿಪಂ ಸದಸ್ಯ ಮಹಾಂತೇಶ ಉದಪುಡಿ ಹೇಳಿದರು.
ಸ್ಥಳೀಯ ವೆಂಕಟಾಪುರದ ಶ್ರೀ ಬಸವೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಸೇವಾ ಸಂಘದ ವತಿಯಿಂದ ಆಯೋಜಿಸಿದ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ಮೆರವಣಿಗೆಯನ್ನು ಉದ್ದೇಶಿಸಿ ಮಾತಾನಾಡಿದರು. ಬಸವಣ್ಣನವರಿಗೆ ಯಾವುದೇ ಜಾತಿಯಿಲ್ಲ. ಸಮಾನತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪುುರುಷರ ಜಯಂತಿಯನ್ನೂ ಪ್ರತಿಯೊಬ್ಬರೂ ಆಚರಿಸುವ ಮೂಲಕ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, 12ನೇ ಶತಮಾನ ಜಾತಿ ವ್ಯವಸ್ಥೆ, ಶೋಷಣೆ ಮಿತಿಮೀರಿದಾಗ ಜಾತಿ ಪದ್ಧತಿ ತೊಡೆದು ಹಾಕಲು ಬಸವಣ್ಣ ಸಹಿತ ದಾರ್ಶನಿಕರು ಸಮರ ಸಾರಿದ ಸುವರ್ಣಯುಗ. ಶೋಷಣೆ ಮಾಡುವ ಸಮಾಜದಲ್ಲಿ ಹುಟ್ಟಿ ಶೋಷಣೆ ವಿರುದ್ಧ ಬಂಡಾಯ ಸಾರಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸ್ಥಳೀಯ ಮುಖಂಡ ಪ್ರಕಾಶ ಚುಳಕಿ ಮಾತನಾಡಿ, ಅನುಭವ ಮಂಟಪದಡಿ ಎಲ್ಲ ಜಾತಿ ವರ್ಗದ ಜನರನ್ನು ಒಂದುಗೂಡಿಸಿದ ಜಗಜ್ಯೋತಿ ಬಸವಣ್ಣ ಸಮಾನತೆಯ ಸಮಾಜದ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಹೇಳಿದರು. ಇದಕ್ಕೂ ಮುನ್ನ ನಗರದ ರಾಜ್ಯ ಹೆದ್ದಾರಿ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬಸವೇಶ್ವರ ವೃತ್ತಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಬಸವಣ್ಣನವರ ಭಾವಚಿತ್ರ, ಅವರ ವೇಷಧಾರಿ, ಕರಡಿ ಮಜಲು, ವಾದ್ಯಮೇಳಗಳು ಗಮನ ಸೆಳೆದವು. 8-10 ಜೋಡಿ ಎತ್ತುಗಳು ಭಾಗವಹಿಸಿ ಮೆರಗು ತಂದವು.
ಸಮಾಜದ ಮುಖಂಡರಾದ ಕೆ.ಆರ್. ಬೋಳಿಶೆಟ್ಟಿ, ಎಸ್.ಎನ್. ಹಿರೇಮಠ, ಷಣ್ಮುಖಪ್ಪ ಕೋಲಾರ, ಮುದಕಪ್ಪ ಬಟಕುರ್ಕಿ, ಪಿಕೆಪಿಎಸ್‌ಅಧ್ಯಕ್ಷ ಆನಂದ ಹಿರೇಮಠ, ಪ್ರಭು ಬೋಳಿಶೆಟ್ಟಿ, ತುಳಜಪ್ಪ ಮುದ್ದಾಪೂರ, ಸುರೇಶ ಹವಳಖೋಡ, ಗೊಡಚಯ್ಯಗಣಾಚಾರಿ, ಮಂಜುಗಣಾಚಾರಿ, ಸಾಗರ ಮುದ್ನೂರ, ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.