ಗುಡಿಬಂಡೆ: ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ನಾವು ಸೇವಿಸುವ ಆಹಾರ ವಿಷವಾಗುತ್ತಿದ್ದು, ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯಯುತ ಬೆಳೆ ಬೆಳೆಯಬಹುದು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಜಿ.ಎಸ್.ನಾಗರಾಜ್ ತಿಳಿಸಿದರು.
ತಾಲೂಕಿನ ಕೃಷಿ ಇಲಾಖೆಯ ಸಭಾಂಗಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪೂರ್ವಜರು ಅಳವಡಿಸಿಕೊಂಡಿದ್ದ ಕೃಷಿ ಪದ್ಧತಿ
ಮರೆತು ರಾಸಾಯನಿಕ ಪದ್ಧತಿಗೆ ಅವಲಂಬಿತರಾಗಿದ್ದರಿಂದ ಇಂದಿನ ಜನಾಂಗ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಭೂಮಿ ತನ್ನ ಫಲವತ್ತತೆ ಕಳೆದುಕೊಂಡು ಬಂಜರಾಗಿ ಆಹಾರಕ್ಕಾಗಿ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ರೈತರ ಸಭೆ ನಡೆಸಲು ರೈತರ ಕುಂದು ಕೊರೆತೆಗಳ ಸಭೆ ಸೇರಿದಂತೆ ರೈತರ ಶ್ರೇಯೋಭಿವೃದ್ಧಿಗಾಗಿ ನಡೆಯುವ ಸಭೆಗಳನ್ನು ನಡೆಸಲು ಕೃಷಿಕ ಸಮಾಜದ ವತಿಯಿಂದ ಕೃಷಿ ಭವನ ನಿರ್ಮಾಣಕ್ಕೆ ಈಗಾಗಲೇ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಶೀಘ್ರವಾಗಿ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಕೆ.ಅನೀಸ್ ಸಲ್ಮಾ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾ ಗುತ್ತಿದೆ. ನರೇಗಾ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡ, ಎರೆಹುಳು ಘಟಕ, ಅರಣ್ಯೀಕರಣ ಮೊದಲಾದ ಕಾಮಗಾರಿ ಕೈಗೊಳ್ಳಲಾಗಿದೆ. ಶೂನ್ಯ ಬಂಡವಾಳ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮಾದರಿ ಗ್ರಾಮವನ್ನಾಗಿ ಕಾಟೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನ ಜಿಕೆವಿಕೆಯಲ್ಲಿ ಅ.26 ರಿಂದ ಕೃಷಿ ಮೇಳ ಕಾರ್ಯಕ್ರಮ ನಡೆಯಲಿದ್ದು, ಅ.27 ರಂದು ಗುಡಿಬಂಡೆಯಿಂದ ಬಸ್ ವ್ಯವಸ್ಥೆ ಮಾಡಿದ್ದು, ರೈತರು ಭಾಗವಹಿಸಬಹುದು ಎಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ರೇಷ್ಮೆ ಇಲಾಖೆಯ ಮ.ಗ.ಹೆಗಡೆ, ಕೃಷಿ ಇಲಾಖೆಯ ನವೀನ್, ಸುನೀಲ್, ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ವೈ.ಒ.ರಾಮಕೃಷ್ಣಾರೆಡ್ಡಿ, ತಾಲ್ಲೂಕು ಸಮಿತಿಯ ಉಪಾಧ್ಯಕ್ಷ ಚೌಡರೆಡ್ಡಿ, ಕಾರ್ಯದರ್ಶಿ ರಾಜಗೋಪಾಲ, ಸದಸ್ಯರಾದ ಪಿ.ಸುಶೀಲಮ್ಮ, ಪಿ.ಎ. ರಾಜೇಶ್, ಗೋಪಾಲಕೃಷ್ಣಪ್ಪ, ನಾಗರಾಜು ಇದ್ದರು.