ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜನರು ಕಡ್ಡಾಯವಾಗಿ ಕೆಲವೊಂದು ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ಮಾಜಿ ಸಚಿವ ಎಚ್.ವೈ. ಮೇಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ಆರೋಗ್ಯವಂತರಾಗಿರಬೇಕು. ಸಾಮಾಜಿಕ ಬದುಕಿನಲ್ಲಿ ಆರೋಗ್ಯವಂತ ಬದುಕು ಸಾಗಿಸಬೇಕು. ಅದಕ್ಕಾಗಿ ಕೋವಿಡ್ ದಂತಹ ವೈರಸ್ ತಡೆಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಒಬ್ಬರಿಂದ ಒಬ್ಬರಿಗೆ ಅತಿಬೇಗ ಹರಡುವ ಸೋಂಕು ಇದಾಗಿದ್ದು, ಪ್ರತಿಯೊಬ್ಬರು ನಿತ್ಯದ ಬದುಕಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.
ಕೆಮ್ಮು-ನೆಗಡಿ, ಜ್ವರ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿಗೆ ಹೋಗಿ ತಪಾಸಣೆಗೆ ಒಳ ಪಡಬೇಕು, ಅಂಗನವಾಡಿ, ಆಶಾ ಕಾರ್ಯ ಕರ್ತೆಯರೊಂದಿಗೆ ಜನರು ಸಹಕಾರ ನೀಡಬೇಕು. ಕಾಯಿಲೆ ಕಂಡು ಬಂದಲ್ಲಿ ಸರ್ಕಾರಿ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಕ್ಕೆ ಪ್ರತಿಯೊಬ್ಬರ ಕಾರ್ಯ ಮಹತ್ವದ್ದಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ಸಹಕಾರ ನೀಡಬೇಕು. ಜನರು ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸುರಕ್ಷತೆಗಾಗಿ ಪರಸ್ಪರರು ನಡೆದಾಡುವ, ಮನೆಯಿಂದ ಹೊರಗೆ ಬಂದಾಗ ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಚಿಕ್ಕ ಮಕ್ಕಳು, ಗರ್ಭಾವಸ್ಥೆಯಲ್ಲಿರುವ ತಾಯಂದಿರು, 50 ವರ್ಷ ಮೇಲ್ಪಟ್ಟ ವಯೋವೃದ್ಧರು, ಈ ಸೋಂಕಿನ ಕುರಿತು ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಅಗತ್ಯವಿಲ್ಲದಿದ್ದರೆ ಯಾರೂ ಮನೆಯಿಂದ ಹೊರಗೆ ಬರಬಾರದು. ಮನೆಯಲ್ಲೇ ಸುರಕ್ಷಿತವಾಗಿರಬೇಕು. ಸ್ಯಾನಿ ಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ತುರ್ತು ಅಗತ್ಯವಿದ್ದಲ್ಲಿ ಆರೋಗ್ಯ ಸಹಾಯವಾಣಿ 104 ಇಲ್ಲಿಗೆ ಸಂಪರ್ಕಿಸಬೇಕು. ಜನರು ತಮ್ಮ ಹಾಗೂ ತಮ್ಮವರ ಆರೋಗ್ಯಕ್ಕಾಗಿ ಸುರಕ್ಷತೆ ಕ್ರಮ ಅನುಸರಿಸಬೇಕು ಎಂದು ತಿಳಿಸಿದ್ದಾರೆ.