ಬೀದರ: ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ನಿಯಮಗಳನ್ನು ಕೋವಿಡ್-19 ಮಾರ್ಗಸೂಚಿ ಅನ್ವಯ ಕಟ್ಟುನಿಟ್ಟಾಗಿ ಪಾಲಿಸಲು ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳು, ಹೋಬಳಿಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಇರುವ ಬ್ಯಾನರ್, ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಬೇಕು. ಕಚೇರಿಯ ವೆಬ್‌ಸೈಟ್‌ಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳು ಇರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಇರುವ ಬಗ್ಗೆ ಪರಿಶೀಲಿಸಿ ಎಲ್ಲ ಚುನಾವಣಾ ಅಧಿ ಕಾರಿಗಳಿಗೆ ವರದಿ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗಾಗಿ ನಿಗದಿತ ದಿನಾಂಕದವರೆಗೆ ಸ್ವೀಕೃತಗೊಂಡ ನಮೂನೆಗಳನ್ನು ಅ. 8ರೊಳಗಾಗಿ ವಿಲೇವಾರಿ ಮಾಡಲು ಮತ್ತು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ವಹಿಸಿ ಮಾಹಿತಿ ನೀಡಲು ಅಧಿ ಕಾರಿಗಳಿಗೆ ಸಿಇಒ ಸೂಚಿಸಿದರು.
ಚುನಾವಣೆಗೆ ಸಂಬಂಧಿ ಸಿದಂತೆ ಯಾವುದಾದರು ದೂರುಗಳ ಬಗ್ಗೆ ಪ್ರತಿನಿತ್ಯ ಚುನಾವಣಾಧಿ ಕಾರಿಗಳಿಗೆ ವರದಿ ಮಾಡಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು, ಕರಪತ್ರ, ಜಾಹೀರಾತು, ಇನ್ನಿತರ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲು ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನೇಶ ಪಾಟೀಲ ಇತರ ಅಧಿಕಾರಿಗಳು ಇದ್ದರು