ಹೈದರಾಬಾದ್: ಕೋವಿಡ್ 19 ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಎಲ್ಲಾ ರಾಜ್ಯಗಳು “ದೆಹಲಿ ಮಾದರಿ”ಯನ್ನು ಅನುಸರಿಸಬೇಕು ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಾನು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ, ಕೋವಿಡ್ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಿ, ಪ್ರಕರಣ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ. ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಇದರಿಂದ ಹೆಚ್ಚು, ಹೆಚ್ಚು ಪರೀಕ್ಷೆ ನಡೆಯುವ ಮೂಲಕ ಸೋಂಕನ್ನು ಶೀಘ್ರವಾಗಿ ನಿಯಂತ್ರಿಸಬಹುದಾಗಿದೆ ಎಂದು ರೆಡ್ಡಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ತಾನು ದೆಹಲಿಯನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿರುವುದಾಗಿ ಹೇಳಿರುವ ಅವರು, ರಾಜಧಾನಿಯಲ್ಲಿ ದಾಖಲೆ ಎಂಬಂತೆ ಕೋವಿಡ್ 19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ.84ರಷ್ಟಾಗಿದೆ ಎಂದು ವಿವರಿಸಿದ್ದಾರೆ.
ತೆಲಂಗಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ನಿವಾರಣೆಗೆ ಕುರಿತಂತೆ ರಾಜ್ಯ ಸರ್ಕಾರಗಳು ನುರಿತ ವೈದ್ಯರನ್ನು ಒಳಗೊಂಡು ಕಾರ್ಯನಿರ್ವಹಿಸಬೇಕಾಗಿದೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ದೊರೆಯುವಂತಾಗಬೇಕು ಎಂದರು.
ಕೇಂದ್ರ ಸರ್ಕಾರ ತೆಲಂಗಾಣ ರಾಜ್ಯಕ್ಕೆ 1,200 ವೆಂಟಿಲೇಟರ್ಸ್ , ಎನ್ 95 ಮಾಸ್ಕ್, ಪಿಪಿಇ ಕಿಟ್ಸ್ ಮತ್ತು ಎಚ್ ಸಿಕ್ಯೂ ಮಾತ್ರೆಗಳನ್ನು ಕಳುಹಿಸಿರುವುದಾಗಿ ಈ ಸಂದರ್ಭದಲ್ಲಿ ಸಚಿವ ರೆಡ್ಡಿ ತಿಳಿಸಿದರು.