ಹಾವೇರಿ: ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷಿ “ಗ್ರಾಮ ಚರಿತ್ರೆ ಕೋಶ’ ರಚನೆ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು ನಿರೀಕ್ಷಿತ ಗುರಿ ಮುಟ್ಟುವಲ್ಲಿ ಹಿಂದೆ ಬಿದ್ದಿದೆ.
“ಗ್ರಾಮ ಚರಿತ್ರೆ ಕೋಶ’ ಯೋಜನೆಯು ಕರ್ನಾಟಕ ಜಾನಪದ ವಿವಿ ಆರಂಭಗೊಂಡಾಗ ಹಾಕಿಕೊಂಡ ಮೊದಲ ಸಂಶೋಧನಾ ಕಾರ್ಯ. 2013-14ರಲ್ಲಿಯೇ ಆರಂಭವಾಗಿದ್ದು, 2015-16ರ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅವ ಧಿ ಮುಗಿದು ಎರಡು ವರ್ಷಗಳಾದರೂ ಈವರೆಗೆ ಯೋಜನೆ ಅರ್ಧವೂ ಪೂರ್ಣಗೊಂಡಿಲ್ಲ.
ಗುರಿಯಂತೆ “ಗ್ರಾಮ ಚರಿತ್ರೆ ಕೋಶ’ ರಚನೆಯ ಕ್ಷೇತ್ರ ಮಾಹಿತಿ ಸಂಗ್ರಹ ಕಾರ್ಯ ನಡೆದಿಲ್ಲ. ಇದಕ್ಕಾಗಿ ಇನ್ನೂ ಒಂದು ವರ್ಷ ಸಮಯ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಬಳಿ ಕೇಳಿಕೊಂಡಿದ್ದ ವಿವಿ, 2017ರ ಮಾರ್ಚ್ ಒಳಗೆ ಎಲ್ಲ ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಸಿದ್ಧಪಡಿಸುವುದಾಗಿ ಹೇಳಿತ್ತು. ಆದರೆ ಸಮಯ ಮೀರಿ ಒಂದೂವರೆ ವರ್ಷವಾದರೂ ಯೋಜನೆ ಪೂರ್ಣಗೊಂಡಿಲ್ಲ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಜಾನಪದ ವಿವಿ ಕೇವಲ 13 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಪ್ರಕಟಿಸಿ ಬಿಡುಗಡೆಗೊಳಿಸಿದೆ. ಪ್ರಸ್ತುತ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗೆಳ ಗ್ರಾಮ ಚರಿತ್ರೆ ಕೋಶ ಮುದ್ರಣ ಹಂತದಲ್ಲಿದ್ದು ಇನ್ನುಳಿದ 14 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಸಿದ್ಧಗೊಳ್ಳಬೇಕಾಗಿದೆ. ಬಾಕಿ ಉಳಿದಿರುವ ಕೆಲವು ಜಿಲ್ಲೆಗಳಲ್ಲಿ ಕ್ಷೇತ್ರ ಸಮೀûಾ ಕಾರ್ಯವೂ ಪೂರ್ಣಗೊಂಡಿಲ್ಲ. ವಿವಿಯ ಮುಖ್ಯಸ್ಥರು ತಿಳಿಸುವಂತೆ ವಿಜಯಪುರದ ಕ್ಷೇತ್ರ ಸಮೀಕ್ಷೆ ಹೊಸದಾಗಿ ಆರಂಭವಾಗಬೇಕಿದೆ.
ಏನಿದು ಗ್ರಾಮ ಚರಿತ್ರೆ ಕೋಶ?: ನಾಡಿನ ದೇಸಿ ಪರಿಸರವನ್ನು ಅದರ ಮೂಲ ಆಕರಗಳೊಂದಿಗೆ ಸಂಗ್ರಹಿಸಿ, ದಾಖಲಿಸಿ ಸಂರಕ್ಷಿಸುವ ಉದ್ದೇಶದಿಂದ ರಚಿಸಿದ್ದೇ “ಗ್ರಾಮ ಚರಿತ್ರೆ ಕೋಶ’ ಯೋಜನೆ. ಸಾಂಸ್ಕೃತಿಕ ಕಣಜಗಳಾಗಿರುವ ರಾಜ್ಯದ ಎಲ್ಲ ಗ್ರಾಮಗಳಲ್ಲಿನ ಜೀವಸಂಕುಲ, ಭಾಷಾ ಬಳಕೆ ಮತ್ತು ಅಭಿವೃದ್ಧಿಯ ವಿಶಿಷ್ಟ ರೂಪಗಳು, ಜನವಸತಿ, ಶಾಲಾ-ಕಾಲೇಜು, ನೀರಿನ ವ್ಯವಸ್ಥೆ ಹೀಗೆ ಎಲ್ಲವನ್ನು ಸಂಗ್ರಹಿಸಿ, ದಾಖಲಿಸಿ ಪುಸ್ತಕ ರೂಪದಲ್ಲಿ ಹೊರತರುವ ಗುರಿ ಈ ಯೋಜನೆಯದ್ದಾಗಿದೆ.
ಎಷ್ಟು ಖರ್ಚು?: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅನುದಾನದಲ್ಲಿ ಕೈಗೊಂಡಿರುವ ಈ ಯೋಜನೆಯನ್ನು 10 ಕೋಟಿ ರೂ.ಗಳಲ್ಲಿ ರೂಪಿಸಿದ್ದು ಈಗಾಗಲೇ 8.60 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ ಉಳಿದ 1.40 ಕೋಟಿ ರೂ. ಬಿಡುಗಡೆ ಮಾಡಲು ಇಲಾಖೆ ಸಿದ್ಧವಾಗಿದೆಯಾದರೂ ಬಿಡುಗಡೆಯಾಗಿರುವ ಅನುದಾನಕ್ಕೆ ತಕ್ಕಂತೆ ಕೆಲಸ ಆಗದೆ ಇರುವುದರಿಂದ ವಿವಿಯೇ ಇನ್ನೂ ಬಾಕಿ ಅನುದಾನ ಪಡೆದುಕೊಂಡಿಲ್ಲ.
ಗುರಿಯಂತೆ “ಗ್ರಾಮ ಚರಿತ್ರೆ ಕೋಶ’ ರಚನೆ 2016ಕ್ಕೆ ಪೂರ್ಣಗೊಳ್ಳಬೇಕಿತ್ತು. ರಾಜ್ಯದ 59000 ಗ್ರಾಮಗಳ ತಳಮಟ್ಟದ ಸಮೀಕ್ಷೆ ಇದಾಗಿರುವುದರಿಂದ ನಿಖರ ಮಾಹಿತಿ ಸಂಗ್ರಹಕ್ಕಾಗಿಯೇ ಹೆಚ್ಚು ಸಮಯ ಬೇಕಾಗಿದೆ. ಈಗಾಗಲೇ 13 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಪೂರ್ಣಗೊಂಡಿದೆ. ಮೂರು ಜಿಲ್ಲೆಗಳ ಕೋಶ ಕೊನೆ ಹಂತದಲ್ಲಿದ್ದು ಉಳಿದ 14 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶವನ್ನು ಈ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸಲಾಗುವುದು.
– ಪ್ರೊ.ಡಿ.ಬಿ. ನಾಯಕ, ಕುಲಪತಿ, ಜಾನಪದ ವಿವಿ
– ಎಚ್.ಕೆ. ನಟರಾಜ